

ಪರಶುರಾಮ ಭಾಸಗಿ ವಿಜಯಪುರ
ಜಿ.ಪಂ. ಅಧ್ಯಕ್ಷ ಸ್ಥಾನಕ್ಕೆ ಶಿವಯೋಗಪ್ಪ ನೇದಲಗಿ ಕೊನೆಗೂ ರಾಜೀನಾಮೆ ಸಲ್ಲಿಸಿದ್ದು ಆ ಮೂಲಕ ಜಿ.ಪಂ. ಅಂಗಳದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರತೊಡಗಿವೆ.
ಶುಕ್ರವಾರ ಬೆಂಗಳೂರಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮುಖ್ಯ ಕಾರ್ಯದರ್ಶಿಗೆ ಶಿವಯೋಗಪ್ಪ ನೇದಲಗಿ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಈ ಬಗ್ಗೆ ಆರ್‌ಡಿಪಿಆರ್ ಕಚೇರಿ ದೃಢಪಡಿಸಿದ್ದು ರಾಜೀನಾಮೆ ಹಿಂಪಡೆಯಲು ಇನ್ನೂ ಕಾಲಾವಕಾಶ ಇದೆ ಎಂದು ಪ್ರತಿಕ್ರಿಯಿಸಿದೆ. ಹೀಗಾಗಿ ನೇದಲಗಿ ರಾಜೀನಾಮೆ ಸಲ್ಲಿಕೆ ಮೂಲಕ ಅಧಿಕಾರ ಹಂಚಿಕೆ ಒಪ್ಪಂದಕ್ಕೆ ಒಂದಂಕದ ತೆರೆ ಬಿದ್ದಂತಾಗಿದೆ.
ಶಾಸಕ ಎಂ.ಬಿ. ಪಾಟೀಲರ ಮನವೊಲಿಕೆಯಿಂದಾಗಿ ಗುರವಾರವೇ ರಾಜೀನಾಮೆ ಸಲ್ಲಿಸಲು ನೇದಲಗಿ ಬೆಂಗಳೂರಿಗೆ ದೌಡಾಯಿಸಿರುವ ಮಾಹಿತಿ ಲಭ್ಯವಾಗಿತ್ತು. ಶುಕ್ರವಾರ ಬೆಳಗ್ಗೆ ಬೆಂಗಳೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸುವ ಬಗ್ಗೆ ಮಾತುಕತೆ ನಡೆಸಿದ್ದು, ಇದಕ್ಕೆ ಪ್ರತಿಯಾಗಿ ನೇದಲಗಿ ಅವರಿಗೆ ಮುಂಬರುವ ದಿನಗಳಲ್ಲಿ ಒಳ್ಳೆಯ ಅವಕಾಶ ನೀಡುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆನ್ನಲಾಗಿದೆ. ಬಳಿಕ ಆರ್‌ಡಿಪಿಆರ್ ಕಚೇರಿಗೆ ತೆರಳಿ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್ ಅವರಿಗೆ ರಾಜೀನಾಮೆ ಸಲ್ಲಿಸಲಾಗಿದೆ. ಆ ಮೂಲಕ ವರಿಷ್ಟರ ತೀರ್ಮಾನಕ್ಕೆ ನೇದಲಗಿ ಕೊನೆಗೂ ತಲೆ ಬಾಗಿದ್ದು ಅವರ ಮುಂದಿನ ನಡೆ ಕುತೂಹಲ ಮೂಡಿಸಿದೆ.
ಜಿ.ಪಂ. ಆಡಳಿತಾವಧಿ ಇನ್ನೂ 12 ತಿಂಗಳಿದ್ದು ತೆರವಾದ ಸ್ಥಾನಕ್ಕೆ ಆಯ್ಕೆ ಪ್ರಕ್ರಿಯೆ ನಡೆಯಬೇಕಿದೆ. ಒಪ್ಪಂದದನ್ವಯ ನೆದಲಗಿ ಮತ್ತು ಸುಜಾತಾ ಕಳ್ಳಿಮನಿ ಮಧ್ಯೆ ತಲಾ 14 ತಿಂಗಳ ಅವಧಿಗೆ ಅಧಿಕಾರ ಹಂಚಿಕೆಯಾಗಿತ್ತು. ಆ ಪ್ರಕಾರ ಮಾ. 6, 2020ಕ್ಕೆ ನೇದಲಗಿ ಅಧಿಕಾರವಧಿ ಬಿಟ್ಟುಕೊಡಬೇಕಿತ್ತು. ಆದರೆ ನೇದಲಗಿ ಕೆಲವು ಬೇಡಿಕೆಗಳ ಈಡೇರಿಕೆಗೆ ಪಟ್ಟು ಹಿಡಿದ ಕಾರಣ ಸಮಸ್ಯೆ ಜಟಿಲಗೊಂಡಿತು. ಮಾಜಿ ಸಿಎಂ ಸಿದ್ದರಾಮಯ್ಯ ಮಧ್ಯಸ್ಥಿಕೆ ವಹಿಸಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ ಪಕ್ಷದಿಂದ ನೋಟಿಸ್ ಜಾರಿಗೊಳಿಸಿದರೂ ಸಮರ್ಥ ಉತ್ತರ ನೀಡಿದ್ದರು. ಆ ಬಳಿಕ ಲಾಕ್‌ಡೌನ್ ಜಾರಿಯಾಗಿದ್ದು ಎರಡು ತಿಂಗಳ ಎಲ್ಲ ಪ್ರಕ್ರಿಯೆ ತಟಸ್ಥಗೊಂಡಿತು. ಇದೀಗ ನೇದಲಗಿ ರಾಜೀನಾಮೆ ಸಲ್ಲಿಕೆಯೊಂದಿಗೆ ಚರ್ಚೆಗೆ ತೆರೆ ಬಿದ್ದಿದೆ.
ಜಿ.ಪಂ. ಆಡಳಿತಾವಧಿ ಇನ್ನೂ 12 ತಿಂಗಳಿದ್ದು ತೆರವಾದ ಸ್ಥಾನಕ್ಕೆ ಆಯ್ಕೆ ಪ್ರಕ್ರಿಯೆ ನಡೆಯಬೇಕಿದೆ. ಒಪ್ಪಂದದನ್ವಯ ನೆದಲಗಿ ಮತ್ತು ಸುಜಾತಾ ಕಳ್ಳಿಮನಿ ಮಧ್ಯೆ ತಲಾ 14 ತಿಂಗಳ ಅವಧಿಗೆ ಅಧಿಕಾರ ಹಂಚಿಕೆಯಾಗಿತ್ತು. ಆ ಪ್ರಕಾರ ಮಾ. 6, 2020ಕ್ಕೆ ನೇದಲಗಿ ಅಧಿಕಾರವಧಿ ಬಿಟ್ಟುಕೊಡಬೇಕಿತ್ತು. ಆದರೆ ನೇದಲಗಿ ಕೆಲವು ಬೇಡಿಕೆಗಳ ಈಡೇರಿಕೆಗೆ ಪಟ್ಟು ಹಿಡಿದ ಕಾರಣ ಸಮಸ್ಯೆ ಜಟಿಲಗೊಂಡಿತು. ಮಾಜಿ ಸಿಎಂ ಸಿದ್ದರಾಮಯ್ಯ ಮಧ್ಯಸ್ಥಿಕೆ ವಹಿಸಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ ಪಕ್ಷದಿಂದ ನೋಟಿಸ್ ಜಾರಿಗೊಳಿಸಿದರೂ ಸಮರ್ಥ ಉತ್ತರ ನೀಡಿದ್ದರು. ಆ ಬಳಿಕ ಲಾಕ್‌ಡೌನ್ ಜಾರಿಯಾಗಿದ್ದು ಎರಡು ತಿಂಗಳ ಎಲ್ಲ ಪ್ರಕ್ರಿಯೆ ತಟಸ್ಥಗೊಂಡಿತು. ಇದೀಗ ನೇದಲಗಿ ರಾಜೀನಾಮೆ ಸಲ್ಲಿಕೆಯೊಂದಿಗೆ ಚರ್ಚೆಗೆ ತೆರೆ ಬಿದ್ದಿದ.
ನೇದಲಗಿ ರಾಜೀನಾಮೆ ಸುದ್ದಿ ಹರಡುತ್ತಿದ್ದಂತೆ ಜಿ.ಪಂ. ಅಂಗಳದಲ್ಲಿ ರಾಜಕೀಯ ಚಟುವಟಿಕೆಗಳು ಜೋರಾಗತೊಡಗಿವೆ. ಕೈ ಪಾಳಯದಲ್ಲಿ ಸುಜಾತಾ ಕಳ್ಳಿಮನಿ ಅವರನ್ನು ಅಧ್ಯಕ್ಷಗಿರಿ ಆಯ್ಕೆ ಮಾಡಲು ಈಗಾಗಲೇ ವೇದಿಕೆ ಸಿದ್ಧಗೊಂಡಿದೆ. ಕಾಂಗ್ರೆಸ್ ಶಾಸಕರು ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡಿದ್ದಲ್ಲದೇ ರಾಜೀನಾಮೆ ವಿಷಯವನ್ನೂ ಗೌಪ್ಯವಾಗಿರಿಸಿದ್ದಾರೆ. ಆದರೆ, ರಾಜೀನಾಮೆ ಸಲ್ಲಿಕೆ ವಿಚಾರ ಬಹಿರಂಗಗೊಳ್ಳುತ್ತಿದ್ದಂತೆ ಬಿಜೆಪಿಯಲ್ಲಿ ಆಕಾಂಕ್ಷಿಗಳ ಪೈಪೋಟಿ ಹೆಚ್ಚತೊಡಗಿದೆ. ಅತಂತ್ರ ಜಿ.ಪಂ. ಆಡಳಿತದಲ್ಲಿ ಕಾಂಗ್ರೆಸ್‌ಗಿಂತ ಬಿಜೆಪಿಗೆ ಹೆಚ್ಚಿನ ಅನುಕೂಲವಿದ್ದು ಈ ಬಾರಿ ಶತಾಯಗತಾಯ ಅಧಿಕಾರ ಚುಕ್ಕಾಣಿ ಹಿಡಿಯಲು ಪಣತೊಟ್ಟಿದೆ.
ಒಟ್ಟಿನಲ್ಲಿ ಜಿ.ಪಂ. ಅಧ್ಯಕ್ಷಗಿರಿಗೆ ನೇದಲಗಿ ರಾಜೀನಾಮೆ ಸಲ್ಲಿಸುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಜೋರಾಗತೊಡಗಿದ್ದು ಆಕಾಂಕ್ಷಿಗಳು ಸದಸ್ಯರನ್ನು ವಿಶ್ವಾಸಕ್ಕೆ ಪಡೆಯಲು ತೀವ್ರ ಕಸರತ್ತು ನಡೆಸಿದ್ದಾರೆ.
ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ಜಿ.ಪಂ. ಅಧ್ಯಕ್ಷ ಶಿವಯೋಗಪ್ಪ ನೇದಲಗಿ ಅವರ ದೂರವಾಣಿಗೆ ಸಂಪರ್ಕಿಸಲಾಗಿ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ಮುಂದಿನ ಅಧ್ಯಕ್ಷ ಸ್ಥಾನದ ಕಾಂಗ್ರೆಸ್‌ನ ನಿಯೋಜಿತ ಅಭ್ಯರ್ಥಿ ಸುಜಾತಾ ಕಳ್ಳಿಮನಿ ಅವರು ಸಹ ಸಂಪರ್ಕಕ್ಕೆ ಸಿಗಲಿಲ್ಲ. ಹೀಗಾಗಿ ಕಾಂಗ್ರೆಸ್ ಸದಸ್ಯರ ನಿಗೂಢ ನಡೆ ಕುತೂಹಲಕ್ಕೆ ಕಾರಣವಾಯಿತು.