

ವಿಜಯಪುರ: ಕೇಸರಿ ಧ್ವಜ ಹಿಡಿದವರಿಂದ ಮೊಳಗಿದ ಜೈ ಶಿವಾಜಿ ಎಂಬ ಉದ್ಘೋಷ, ಶಿವಾಜಿ ಮಹಾರಾಜರಿಗೆ ಜಯವಾಗಲಿ ಎಂದು ಮೈಮರೆತು ಹೆಜ್ಜೆ ಹಾಕಿದ ಸಾವಿರಾರು ಯುವಕರು.ನಗರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳರ ನೇತೃತ್ವದಲ್ಲಿ ಬುಧವಾರ ಆಯೋಜಿಸಲಾಗಿದ್ದ ಛತ್ರಪತಿ ಶಿವಾಜಿ ಮಹಾರಾಜರ ಭವ್ಯ ಮೆರವಣಿಗೆಯಲ್ಲಿ ಕಂಡು ಬಂದ ದೃಶ್ಯಗಳಿವು.
ವಿವಿಧ ಪುಷ್ಪಗಳಿಂದ ಅಲಂಕೃತವಾದ ರಥದಲ್ಲಿ ಶಿವಾಜಿ ಮಹಾರಾಜರ ಭವ್ಯ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿತ್ತು. ಶಿವಾಜಿ ಮಹಾರಾಜರಿಗೆ ಭಕ್ತಿಭಾವದಿಂದ ವಿಶೇಷ ಪೂಜೆ ಸಲ್ಲಿಸಿದ ಯುವಕರು ಉತ್ಸಾಹದಿಂದ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.
ನಗರದ ಶಿವಾಜಿ ವೃತ್ತದಿಂದ ಆರಂಭವಾದ ಮೆರವಣಿಗೆ ಶಾಹುನಗರ, ಸರ್ಾ ಬಜಾರ್, ಸಿದ್ದೇಶ್ವರ ದೇವಸ್ಥಾನ ಮಾರ್ಗವಾಗಿ ಗಾಂಧಿಚೌಕ್ ತಲುಪಿ ನಂತರ ಶಿವಾಜಿ ವೃತ್ತದಲ್ಲಿ ಸಂಪನ್ನಗೊಂಡಿತು.
ಇದಕ್ಕೂ ಮೊದಲು ಶಿವಾಜಿ ಸರ್ಕಲ್‌ನಲ್ಲಿರುವ ಶಿವಾಜಿ ಮಹಾರಾಜರ ಬೃಹತ್ ಪ್ರತಿಮೆಗೆ ಹಿಂದು ಸಂಘಟನೆಗಳ ಮುಖಂಡರು ಮಾಲಾರ್ಪಣೆ ಮಾಡಿದರು. ಮೂರ್ತಿ ಮೆರವಣಿಗೆಯಲ್ಲಿ ಸಾವಿರಾರು ಜನ ಹಿಂದು ಯುವಕರು ಶಿವಾಜಿ ಮಹಾರಾಜರ ಧೈರ್ಯ, ಸಾಹಸ, ಶೌರ್ಯದ ಕುರಿತು ಜಯಘೋಷ ಮೊಳಗಿಸಿದರು.
ಮೆರವಣಿಗೆಯುದ್ದಕ್ಕೂ ಶಿವಾಜಿ ಮಹಾರಾಜರ ಭಾವಚಿತ್ರವಿರುವ ಕೇಸರಿ ಧ್ವಜಗಳು ರಾರಾಜಿಸಿದವು. ನೂರಾರು ಜನ ಮಹಿಳೆಯರು, ಯುವಕರು, ವಿವಿಧ ಹಿಂದು ಸಂಘಟನೆಗಳ ಮುಖಂಡರು ‘ಬನಾಯೆಂಗೆ ಮಂದಿರ್’ ಹಾಡಿಗೆ ಹೆಜ್ಜೆ ಹಾಕಿದರು.
ಮೆರವಣಿಗೆಗೆ ವಿಧ್ಯುಕ್ತವಾಗಿ ಚಾಲನೆ ನೀಡಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಛತ್ರಪತಿ ಶಿವಾಜಿ ಮಹಾರಾಜರು ಹಿಂದು ಹೃದಯ ಸಾಮ್ರಾಟ, ಶಿವಾಜಿ ಮಹಾರಾಜರ ಹೆಸರೇ ನಮಗೆ ಅದಮ್ಯವಾದ ಸ್ಫೂರ್ತಿ, ಶಿವಾಜಿ ಮಹಾರಾಜರ ಆದರ್ಶಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಪ್ರಮುಖರಾದ ವಿಜಯಕುಮಾರ ಚವ್ಹಾಣ, ತುಳಸಿರಾಮ ಸೂರ್ಯವಂಶಿ, ವಿಜಯಕುಮಾರ ಘಾಟಗೆ, ರಾಹುಲ್ ಜಾಧವ, ದತ್ತಾ ಗೋಲಾಂಡೆ, ಲಕ್ಷ್ಮ್ಮಣ ಜಾಧವ, ಸಂಜು ಚವ್ಹಾಣ, ವಿಕ್ರಂ ಗಾಯಕವಾಡ, ಬಸವರಾಜ ಬಿರಾದಾರ, ಪ್ರಭಾಕರ ಭೋಸಲೆ, ಮಹೇಶ ಸೂರ್ಯವಂಶಿ, ಮಾಣಿಕ ಗೋಲಾಂಡೆ, ತೀರ್ಥ ಗಾಯಕವಾಡ, ರಾಣಾಜಿ ಗಾಯಕವಾಡ ಮೊದಲಾದವರು ಉಪಸ್ಥಿತರಿದ್ದರು.