ವೈದ್ಯರು ಮಾನವೀಯತೆ ಮೆರೆಯಲಿ

HN 5-3
Published on

ವಿಜಯಪುರ: ವೈದ್ಯರು ಹಣದ ಬೆನ್ನು ಹತ್ತದೇ ರೋಗಿಗಳನ್ನು ಮಾನವೀಯತೆಯಿಂದ ನೋಡಿಕೊಳ್ಳುವುದು ಮತ್ತು ಅವರಿಗೆ ಚಿಕಿತ್ಸೆಯನ್ನು ನೀಡುವುದು ಅತ್ಯಂತ ಶ್ರೇಷ್ಠವಾದ ಕಾರ್ಯ ಎಂದು ಅನುಗ್ರಹ ಆಸ್ಪತ್ರೆಯ ನೇತ್ರ ತಜ್ಞ ಡಾ. ಪ್ರಭುಗೌಡ ಬಿ.ಎಲ್. ಚಬನೂರ ಹೇಳಿದರು.

ನಗರದ ಸಿಕ್ಯಾಬ್ ಸಂಸ್ಥೆಯ ಲುಕ್ಮಾನ್ ಯುನಾನಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗಾಗಿ ಶನಿವಾರ ಹಮ್ಮಿಕೊಂಡಿದ್ದ ‘ವೃತ್ತಿಪರ ಮಾನಸಿಕ ಕೌಶಲಗಳು’ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ವೈದ್ಯರು ನಿಗದಿತ ವೇಳೆಗೆ ಆಸ್ಪತ್ರೆಯಲ್ಲಿ ರೋಗಿಗಳನ್ನು ಲಭ್ಯವಾಗಬೇಕು. ಮಮತೆ- ವಾತ್ಸಲ್ಯದಿಂದ ಅವರನ್ನು ಕಾಣಬೇಕು. ಬಡ- ಮಧ್ಯಮ ವರ್ಗದ ಜನ ಸಾಮಾನ್ಯರಿಗೆ ಹೊರೆ ಆಗದಂತೆ ಆಸ್ಪತ್ರೆ ಚಿಕಿತ್ಸೆ ದರಗಳನ್ನು ನಿಗದಿಪಡಿಸಬೇಕು. ವೈದ್ಯರು ತಾನೊಬ್ಬನೆ ಬೆಳೆಯದೆ ಒಂದು ಸಂಸ್ಥೆಯಾಗಿ ರೂಪುಗೊಳ್ಳಬೇಕೆಂದು ತಿಳಿಸಿದರು. ಸಂಸ್ಥೆಯ ಕಾರ್ಯದರ್ಶಿ ಎ.ಎಸ್. ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಜನ ಸಾಮಾನ್ಯರು ವೈದ್ಯರು ಹಾಗೂ ಆಸ್ಪತ್ರೆಗಳಿಂದ ಉತ್ತಮ ಸೇವೆ ಪಡೆದರೆ ಅದನ್ನು ನೂರು ಜನರಿಗೆ ತಲುಪಿಸಿ ಉತ್ತಮ ಹೆಸರು ರೂಪಿಸುತ್ತಾರೆ. ಈ ನಿಟ್ಟಿನಲ್ಲಿ ಯುವ ವೈದ್ಯರು ನೈಪುಣ್ಯತೆ, ಸಂವಹನಕಲೆ, ಅನುಭೂತಿಗಳನ್ನು ಗಳಿಸಿಕೊಳ್ಳಬೇಕೆಂದು ನುಡಿದರು. ಕಲಬುರಗಿಯ ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದ ಮನೋವಿಜ್ಞಾನ ಪ್ರಾಧ್ಯಾಪಕ ಡಾ. ರುದ್ರವಾರ ವೆಂಕಟರೆಡ್ಡಿ, ಪ್ರಾಧ್ಯಾಪಕ ಪ್ರೊ. ಎಚ್.ಕೆ. ಯಡಹಳ್ಳಿ, ಡಾ. ಶಹನಾಜ್ ಬಾನು, ಡಾ. ರೂಖಿಯಾ ಮರಿಯಮ್, ಡಾ. ತಾಸ್ಮೀಯಾ ಇಂಡಿಕರ, ಡಾ. ಖಾಲಿದ್ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net