

ವಿಜಯಪುರ: ಗ್ರಾಮೀಣ ಪ್ರದೇಶಗಳಲ್ಲಿ ರೈತರಿಗೆ ಸಕಾಲಿಕ ಸೇವೆಯನ್ನು ದೊರೆಕಿಸಿ ಕೊಡಲು ಶ್ರಮಿಸಬೇಕೆಂದು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಹೇಳಿದರು.
ಇಲ್ಲಿನ ರುಡ್‌ಸೆಟ್ ಆವರಣದಲ್ಲಿ ರಾಷ್ಟ್ರೀಯ ಗೋಕುಲ್ ಮಿಷನ್‌ಯಡಿ ಕರ್ನಾಟಕ ಜಾನುವಾರು ಅಭಿವೃದ್ಧಿ ಸಂಸ್ಥೆ, ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಪಶುವೈದ್ಯಕೀಯ ಸಹಾಯಕರ ತರಬೇತಿ ಕೇಂದ್ರ ಹಾಗೂ ರುಡ್‌ಸೆಟ್ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಹಮ್ಮಿಕ್ಕೊಂಡಿದ್ದ ಮೈತ್ರಿ ಕಾರ್ಯಕರ್ತರಿಗೆ ಬೋಧನಾ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಅತ್ಯಂತ ಹೆಚ್ಚಿನ ಮೈತ್ರಿ ಕಾರ್ಯಕರ್ತರು ಇರುವುದು ವಿಜಯಪುರ ಜಿಲ್ಲೆಯಲ್ಲಿ. ಆದ್ದರಿಂದ ಜಿಲ್ಲೆಯನ್ನು ಪಶುಪಾಲನೆಯ ಸೇವೆಯಲ್ಲಿ ಮಾದರಿ ಜಿಲ್ಲೆಯಾಗಿಸಲು ತಮ್ಮ ಸೇವೆಯ ಪಾತ್ರ ಬಹಳ ಮುಖ್ಯವಾದುದು. ತರಬೇತಿಯ ಅವಧಿಯಲ್ಲಿ ತಜ್ಞ ಪಶು ವೈದ್ಯರಿಂದ ಕಲಿಯುವ ವಿಷಯಗಳು ಗ್ರಾಮೀಣ ಪ್ರದೇಶದಲ್ಲಿ ಪಶುಗಳಿಗೆ ವೈದ್ಯಕೀಯ ಸೇವೆಯನ್ನು ಒದಗಿಸುವ ಸಂದರ್ಭದಲ್ಲಿ ಸಹಾಯಕ್ಕೆ ಬರುತ್ತವೆ ಆದುದ್ದರಿಂದ ಪರಿಣಾಮಕಾರಿ ಭಾಗವಹಿಸುವಿಕೆ ತಮ್ಮೆಲ್ಲರದಾಗಬೇಕು ಎಂದರು.
ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ರಾಜೇಂದ್ರ ಡಿ.ಜೈನಾಪುರ ಅಧ್ಯಕ್ಷತೆವಹಿಸಿದ್ದರು. ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಡಾ.ಪ್ರಾಣೇಶ ಜಾಹಗೀರದಾರ, ಡಾ.ಅಶೋಕ ದುರಗಣ್ಣವರ, ಉಪನ್ಯಾಸಕ ಬಸವರಾಜ ಸನಪಾ, ಡಾ.ಎಸ್. ಸಿ. ಚೌಧರಿ ಇತರರು ಪಾಲ್ಗೊಂಡಿದ್ದರು.