

ವಿಜಯಪುರ: ಪಡಿತರ ವ್ಯವಸ್ಥೆ ಬಲಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಪದಾಧಿಕಾರಿಗಳು ಶುಕ್ರವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಜಿಲ್ಲಾಡಳಿತ ಕಚೇರಿವರೆಗೆ ಬಿಸ್ಮಿಲ್ಲಾ ಬಡೇಘರ ನೇತೃತ್ವ ಪ್ರತಿಭಟನಾ ಜಾಥಾ ನಡೆಯಿತು. ಮಾರ್ಗದುದ್ದಕ್ಕೂ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಘೋಷಣೆ ಕೂಗಿದ ಪದಾಧಿಕಾರಿಗಳು, ಬಳಿಕ ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಧುರೀಣೆ ಸುರೇಖಾ ರಜಪೂತ ಮಾತನಾಡಿ, ತೀವ್ರವಾಗಿರುವ ಆರ್ಥಿಕ ಬಿಕ್ಕಟ್ಟಿನಿಂದ ಜನ ಕಂಗೆಟ್ಟಿದ್ದಾರೆ. ಮಹಾಮಾರಿ ಕರೊನಾದಿಂದ ಆರ್ಥಿಕ ವ್ಯವಸ್ಥೆ ಕುಸಿದಿದೆ. ಇಂಥ ಸಂದರ್ಭದಲ್ಲಿ ಜನರ ನೆರವಿಗೆ ಬರಬೇಕಾದ ಸರ್ಕಾರದ ಬೆಲೆ ಏರಿಕೆ ನೀತಿಯಿಂದ ಜನ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆರೋಪಿಸಿದರು.
ಅಗತ್ಯ ವಸ್ತುಗಳ ಬೆಲೆ ಏರಿಕೆ ತಡೆಗಟ್ಟಿ ಸಾರ್ವಜನಿಕ ಪಡಿತರ ವ್ಯವಸ್ಥೆಯನ್ನು ಬಲಪಡಿಸಬೇಕು. ಕೃಷಿ ಕಾಯ್ದೆ ಹಿಂಪಡೆಯಬೇಕು. ಉದ್ಯೋಗವಕಾಶ ಹೆಚ್ಚಿಸಬೇಕು. ಬಿಪಿಎಲ್ ಕಾರ್ಡ್‌ದಾರರಿಗೆ ಧಾನ್ಯ ಪ್ರಮಾಣ ಹೆಚ್ಚಿಸಬೇಕು ಎಂದರು.
ಮುಖಂಡ ಭೀಮಶಿ ಕಲಾದಗಿ ಮಾತನಾಡಿ, ಇಂಧನ ಬೆಲೆ ತಗ್ಗಿಸಬೇಕು. ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಿಸಬೇಕು ಎಂದರು.
ಪದಾಧಿಕಾರಿಗಳಾದ ತಾಜಮಾ ನದಾ, ಅನುಸೂಯಾ ಹಜೇರಿ, ಸೂಫಿಯಾ ವಾಟಿ, ಸೋನುಬಾಯಿ ಬ್ಯಾಳಿ, ಸುಮಿತ್ರಾ ಘೊಣಸಗಿ, ಸೋಮಿಬಾಯಿ ರಾಠೋಡ, ಜುಬೇದಾ ಹಣಗಿ, ಸುರೇಖಾ ಸಾಳುಂಕೆ, ಗಂಗೂಬಾಯಿ ಸಿಂದಗಿ ಮಂಜುಳಾ ಹಜೇರಿ, ರುಕ್ಸಾನ ನದಾಫ್ ಮತ್ತಿತರರಿದ್ದರು.