

ವಿಜಯಪುರ: ಆರೋಗ್ಯ ಇಲಾಖೆ ಹಾಗೂ ಸಂಘ ಸಂಸ್ಥೆಗಳು ಪ್ರಾಮಾಣಿಕ ಪ್ರಯತ್ನದಿಂದ ಜಿಲ್ಲೆಯಲ್ಲಿ ಎಚ್‌ಐವಿ ಸೋಂಕು ಇಳಿಮುಖಗೊಳ್ಳುತ್ತಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಹೇಳಿದರು.
ನಗರದ ರಂಗೀನ್ ಮಸೀದ್ ಬಳಿ ಇರುವ ಉರ್ದು ಶಾಲೆ ನಂ.2 ರಲ್ಲಿ ಶುಕ್ರವಾರ ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ ಬೆಂಗಳೂರು, ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿರೋಧಕ ಮತ್ತು ನಿಯಂತ್ರಣ ಘಟಕ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಎಚ್‌ಐವಿ ಏಡ್ಸ್ ಕುರಿತು ಮನೆ ಮನೆ ಮಾಹಿತಿ ಜನಜಾಗೃತಿ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.
ಸಂಘ-ಸಂಸ್ಥೆ ಹಾಗೂ ಆರೋಗ್ಯ ಇಲಾಖೆ ಹೀಗೆ ನಿರಂತರವಾಗಿ ಪ್ರಾಮಾಣಿಕ ಸೇವೆ ಮಾಡಿದರೆ ಮಾತ್ರ ಎಚ್‌ಐವಿ ಸೋಂಕು ಸೊನ್ನೆಗೆ ತರಬಹುದು ಎಂದು ಹೇಳಿದರು.
ಎಚ್‌ಐವಿ ಮಾರಕ ರೋಗವಲ್ಲ. ಅದನ್ನು ತಿಳಿದು ಬಹಳಷ್ಟು ಜನ ಕ್ಷಣಿಕ ಆಸೆಗಳಿಗೆ ಬಲಿಯಾಗಿ ಈ ರೋಗಕ್ಕೆ ತುತ್ತಾಗುತ್ತಿದ್ದಾರೆ. ಈ ರೋಗದ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಲು ಈ ಮನೆ ಮನೆ ಮಾಹಿತಿ ಜನಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ ಐಇಒ ವಿಭಾಗದ ಸಹಾಯಕ ನಿರ್ದೇಶಕ ನಂಜೇಗೌಡ್ರು ಮಾತನಾಡಿ, ರಾಜ್ಯದಲ್ಲಿ ಎಚ್‌ಐವಿ ಸಂಖ್ಯೆ ಇಳಿಮುಖವಾಗುತ್ತಿದೆ. ಸೊನ್ನೆಗೆ ತರಲು ಏಳು ಜಿಲ್ಲೆಗಳಲ್ಲಿ ಮನೆ ಮನೆ ಮಾಹಿತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ವಿಜಯಪುರ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಅಧಿಕಾರಿಗಳು ಈ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಕಾರ್ಯಕ್ರಮಾಧಿಕಾರಿ ಡಾ.ಈರಣ್ಣ ಧಾರವಾಡಕರ ಮಾತನಾಡಿ, ಈ ಅಭಿಯಾನದಲ್ಲಿ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆ ಕಾರ್ಯಕರ್ತರು ಜಿಲ್ಲೆಯ 3,20,349 ಮನೆಗಳಿಗೆ ಭೇಟಿ ನೀಡಿ, ಎಚ್‌ಐವಿ ಕುರಿತು ಮಾಹಿತಿ ನೀಡುವ ಕಾರ್ಯ ಮಾಡುತ್ತಿದ್ದಾರೆ ಎಂದು ಹೇಳಿದರು.
ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಎ. ಕಟ್ಟಿ ಮಾತನಾಡಿ, ಎಆರ್‌ಟಿ, ಐಸಿಟಿಸಿ ಕೇಂದ್ರಗಳು ಎಚ್‌ಐವಿ ಸೋಂಕಿತರಿಗೆ ನಿರಂತರವಾಗಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿರುವುದರಿಂದ ಎಚ್‌ಐವಿ ಸೋಂಕಿತರಲ್ಲಿ ಸಕಾರಾತ್ಮಕ ಜೀವನ ನಡೆಸಲು ಸಾಧ್ಯವಾಗುತ್ತಿದೆ ಎಂದು ಹೇಳಿದರು.
ಕುಷ್ಠರೋಗ ಅಧಿಕಾರಿ ಡಾ.ಸಂಪತಕುಮಾರ ಗುಣಾರಿ, ಅನೌಪಚಾರಿಕ ಶಿಕ್ಷಣ ಸಂಸ್ಥೆ ಮುಖ್ಯಸ್ಥರಾದ ಅಂತೋನಿ ದಾಸ್, ಪೀಟರ್ ಅಲೆಕ್ಸಾಂಡರ್, ಅಕ್ರಂ ಮಾಶಾಳಕರ, ಲಾಳೇಮಶ್ಯಾಕ್ ಕಲುಂಟೋಜಿ, ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ.ಕವಿತಾ ದೊಡ್ಡಮನಿ, ಡಾ.ಎಸ್.ಎಂ. ಹುಸೇನಿ, ಡಾ. ರಶ್ಮಿ ಪರ‌್ವಿನ್, ಉಪಸ್ಥಿತರಿದ್ದರು.
ಬಾಬುರಾವ ತಳವಾರ ಸ್ವಾಗತಿಸಿದರು. ಕೆ.ಜಿ. ಶೀಲವಂತ ನಿರೂಪಿಸಿದರು. ಎಆರ್‌ಟಿ ಕೇಂದ್ರದ ಆಪ್ತಸಮಾಲೋಚಕ ರವಿ ಕಿತ್ತೂರ ವಂದಿಸಿದರು.
ಎಚ್‌ಐವಿ ಸೋಂಕಿತರಿಗೆ ಈ ಮೊದಲು ಸಮುದಾಯಗಳಲ್ಲಿ ಬೆಂಬಲ ಸಿಗುತ್ತಿರಲಿಲ್ಲ. ಆದರೆ, ಇತ್ತೀಚೆಗೆ ಎಚ್‌ಐವಿ ಸೋಂಕಿತರ ಬಗ್ಗೆ ಮನೋಭಾವನೆ ಬದಲಾಗಿ ಆತ್ಮಸ್ಥೈರ್ಯ ತುಂಬುವ ಕೆಲಸ ನಡೆಯುತ್ತಿರುವುದು ಸ್ವಾಗತಾರ್ಹ. ಈ ಆಂದೋಲನದ ಸದುಪಯೋಗ ಪಡೆದುಕೊಂಡು ಎಚ್‌ಐವಿ ಮುಕ್ತ ಜಿಲ್ಲೆ ಮಾಡಲು, ಎಲ್ಲರೂ ಕೈಜೋಡಿಸಬೇಕು.
ವೈ.ಎಸ್. ಪಾಟೀಲ, ಜಿಲ್ಲಾಧಿಕಾರಿ