

ವಿಜಯಪುರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮೇಲೆ ಹಲ್ಲೆಗೆ ಯತ್ನಿಸಿದ ಪ್ರಕರಣ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಸಿಡಿ ಪ್ರಕರಣದಲ್ಲಿ ಡಿ.ಕೆ. ಶಿವಕುಮಾರ್ ಹೆಸರು ಅನವಶ್ಯಕವಾಗಿ ಎಳೆದು ತರಲಾಗುತ್ತಿದೆ. ಮಾತ್ರವಲ್ಲ, ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಗೂಂಡಾಗಳನ್ನು ಮುಂದಿಟ್ಟುಕೊಂಡು ಹಲ್ಲೆಗೆ ಯತ್ನಿಸಿರುವುದು ಖಂಡನೀಯ. ಕೂಡಲೇ ಸರ್ಕಾರ ಹಲ್ಲೆಗೆ ಯತ್ನಿಸಿದವರನ್ನು ಬಂಧಿಸಬೇಕೆಂದು ಕಾಂಗ್ರೆಸ್ ಕಾರ್ಯಕರ್ತರು ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ರಾಜು ಆಲಗೂರ ಮಾತನಾಡಿ, ಬಿಜೆಪಿ ಗೂಂಡಾಗಳನ್ನಿಟ್ಟುಕೊಂಡು ಹಲ್ಲೆಗೆ ಮುಂದಾಗಿದೆ. ಮಾಡಬಾರದ ಕಾರ್ಯ ಮಾಡಿ ತಮ್ಮ ತಪ್ಪು ಮುಚ್ಚಿ ಹಾಕುವ ನಿಟ್ಟಿನಲ್ಲಿ ರಮೇಶ ಜಾರಕಿಹೊಳಿ ಕಾಂಗ್ರೆಸ್ ಅಧ್ಯಕ್ಷರ ಮೇಲೆ ವಿನಾಕಾರಣ ಆರೋಪ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದನ್ನು ಕಾಂಗ್ರೆಸ್ ಪಕ್ಷ ಬಲವಾಗಿ ಖಂಡಿಸುತ್ತದೆ. ಸಂತ್ರಸ್ತೆ ಪರವಾಗಿ ನಿಲ್ಲದೆ ಯಡಿಯೂರಪ್ಪ ಸರ್ಕಾರ ಮಾಜಿ ಸಚಿವನ ಪರ ನಿಂತಿರುವುದು ಹೆಣ್ಣು ಕುಲಕ್ಕೆ ಮಾಡಿದ ಅಪಮಾನವಾಗಿದೆ. ತಕ್ಷಣ ರಾಜ್ಯಪಾಲರು ಮಧ್ಯಪ್ರವೇಶಿಸಿ ಸಂತ್ರಸ್ತೆಗೆ ರಕ್ಷಣೆ ಒದಗಿಸಿ ತಪ್ಪಿತಸ್ಥ ರಮೇಶ ಜಾರಕಿಹೊಳಿ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಯುವ ಅಧ್ಯಕ್ಷ ಸಿದ್ದು ಛಾಯಾಗೋಳ ಮಾತನಾಡಿ, ಬಿಜೆಪಿ ಸರ್ಕಾರ ಹೆಣ್ಣು ಮಕ್ಕಳ ವಿರೋಧಿಯಾಗಿದೆ. ಹೆಣ್ಣು ಮಕ್ಕಳ ರಕ್ಷಣೆಯಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.
ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್, ಚಾಂದಸಾಬ ಗಡಗಲಾವ, ಶಬ್ಬೀರ ಜಾಗೀರದಾರ ಮಾತನಾಡಿದರು.
ಸಾಹೇಬಗೌಡ ಬಿರಾದಾರ, ಇರ್ಫಾನ್ ಶೇಖ, ವಸಂತ ಹೊನಮೊಡೆ, ಇಲಿಯಾಸ್ ಸಿದ್ದಿಕಿ, ಇರ್ಫಾನ್ ಆಳಂದ, ಸಚೀನ್ ಮಲಘಾನ, ಪ್ರಕಾಶ ಪಾಟೀಲ, ಬಸವರಾಜ ಪಾಟೀಲ, ಪ್ರವೀಣ ಪಾಟೀಲ, ಆಮಸಿದ್ದ ಬಿಜ್ಜರಗಿ, ಮಂಜುನಾಥ ಬದ್ನಿ, ಮುನೀರ್ ಬಿಜಾಪುರ, ಅವಿನಾಶ ಬಗಲಿ, ರಾಜಶೇಖರ ಅವಜಿ, ಜನೀರ ಆಲಗೂರ, ವಿಜಯ ಚವಾಣ್, ಅರವಿಂದ ರಾಠೋಡ, ಶ್ರೀಹರಿ ಚವಾಣ್, ಅರುಣ ನಾಯಕ, ಉಮೇಶ ಕಾಖಂಡಕಿ, ಅಪ್ಪು ಚವಾಣ್, ದಾವಲಸಾಬ ಬಾಗವಾನ, ಅಮಿತ ಚವಾಣ್, ತಾಜುದಿನ್ ಖಲಿಫಾ, ಹಾಜಿ ಪಿಂಜಾರ, ಜಾವಿದ ಶೇಖ, ರಜಾಕ ಕಾಖಂಡಕಿ, ಆಸಿಫ್ ಪುಂಗಿವಾಲೆ, ಚನ್ನಬಸಪ್ಪ ನಂದರಗಿ ಮತ್ತಿತರರಿದ್ದರು.