ಸಂಸದ ಡಿಕೆಸು ಮೇಲೆ ಶಿಸ್ತು ಕ್ರಮಕ್ಕೆ ಆಗ್ರಹ

vjp-4-1
Published on


ವಿಜಯಪುರ: ರಾಮನಗರದಲ್ಲಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರ ಮೇಲೆ ಹಲ್ಲೆ ನಡೆಸಲು ಮುಂದಾದ ಸಂಸದ ಡಿ.ಕೆ. ಸುರೇಶ್ ಹಾಗೂ ವಿಧಾನ ಪರಿಷತ್ ಸದಸ್ಯ ಎಚ್.ರವಿ ವರ್ತನೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ಮಂಗಳವಾರ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.ಇಲ್ಲಿನ ಜಲನಗರ ಕ್ರಾಸ್ ಬಳಿ ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ ಬಿಜೆಪಿ ಪದಾಧಿಕಾರಿಗಳು ಬಳಿಕ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದಾಗ ಪೊಲೀಸರು ತಡೆದರು. ಕಾರ್ಯಕರ್ತರನ್ನು ವಶಕ್ಕೆ ಪಡೆದು ಕೆಲ ಕಾಲದ ಬಳಿಕ ಬಿಡುಗಡೆಗೊಳಿಸಿದರು.ಜವಾಬ್ದಾರಿ ಸ್ಥಾನದಲ್ಲಿರುವ ಸಂಸದ ಡಿ.ಕೆ. ಸುರೇಶ್ ಗೂಂಡಾ ವರ್ತನೆ ತೋರಿದ್ದಾರೆ. ಉನ್ನತ ಶಿಕ್ಷಣ ಸಚಿವರು ಸಮಾಧಾನ ಚಿತ್ತದಿಂದ ಮಾತನಾಡುವಾಗ ಅವರ ಭಾಷಣಕ್ಕೆ ಅಡ್ಡಿಪಡಿಸಿ ಮೈಕ್ ಕಿತ್ತುಕೊಂಡು ಅಸಭ್ಯವಾಗಿ ವರ್ತನೆ ಮಾಡಿದ್ದಾರೆ. ಈ ರೀತಿ ಸಚಿವರ ಮೇಲೆ ದರ್ಪ, ಗರ್ವ ಹಾಗೂ ಅಮಾನವೀಯತೆಯಿಂದ ಸಂಸದರು ಹಾಗೂ ವಿಧಾನ ಪರಿಷತ್ ಸದಸ್ಯರೊಬ್ಬರು ನಡೆದುಕೊಂಡಿರುವುದು ಅತ್ಯಂತ ಖಂಡನಾರ್ಹ. ಕೂಡಲೇ ಈ ಇಬ್ಬರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಅವರ ಗೂಂಡಾ ವರ್ತನೆ ಅತ್ಯಂತ ಖಂಡನೀಯ, ಈ ರೀತಿಯಾಗಿ ಒಬ್ಬ ಸಚಿವರ ಮೇಲೆಯೆ ಹಲ್ಲೆ ನಡೆಸಲು ಮುಂದಾಗಿದ್ದಾರೆ ಎಂದರೆ ಜನಸಾಮಾನ್ಯರ ಪಾಡೇನು? ಜನಪ್ರತಿನಿಧಿಯಾಗಿ ತಮ್ಮ ಕ್ಷೇತ್ರದ ಜನತೆಗೆ ಯಾವ ರೀತಿ ಸೇವೆ ಮಾಡುತ್ತಾರೆ? ಎಂದು ಬಿಜೆಪಿ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದರು.

ವಿಭಾಗ ಸಂಘಟನಾ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಬಸವರಾಜ ಹೂಗಾರ, ಶಿವರುದ್ರ ಬಾಗಲಕೋಟ, ಶ್ರೀಕಾಂತ ಶಿಂಧೆ, ರವಿ ಉಪ್ಪಲದಿನ್ನಿ, ಮಳುಗೌಡ ಪಾಟೀಲ, ಸಂದೀಪ ಪಾಟೀಲ, ಪಾಪುಸಿಂಗ್ ರಜಪೂತ, ರಾಹುಲ್ ಜಾಧವ, ಸತೀಶ ಪಾಟೀಲ, ಪ್ರವೀಣ ಕೂಡಗಿ, ಪ್ರಶಾಂತ ಪೂಜಾರಿ, ನಿಖಿಲ್ ಚೌಧರಿ, ರಾಜೇಶ ತಾವಸೆ, ರಜನಿ ಸಂಬಣ್ಣಿ, ಮಲ್ಲಮ್ಮ ಜೋಗೂರ, ಗೋಪಾಲ ಘಟಕಾಂಬಳೆ, ಡಾ.ಬಾಬುರಾಜೇಂದ್ರ ನಾಯಕ, ರಾಜು ವಾಲಿ, ವಿನಾಯಕ ದಹಿಂಡೆ, ಆನಂದ ಮುಚ್ಚಂಡಿ, ಕಿರಣ ರಾಠೋಡ, ಪ್ರೇಮ ಬಿರಾದಾರ, ವಿಠ್ಠಲ ನಡುವಿನಕೇರಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net