ವ್ಯಕ್ತಿಯಾಗಿ ರೂಪಗೊಳ್ಳದೇ ವ್ಯಕ್ತಿತ್ವವಾಗಿ ಬೆಳೆಯಿರಿ

VMS 6-12
Published on

ವಿಜಯಪುರ: ಆಯುರ್ವೇದದಲ್ಲಿ ವೃತ್ತಿ ಮತ್ತು ಉತ್ಸಾಹ ಜೊತೆ ಜೊತೆಯಾಗಿ ಮೇಳೈಸಿಕೊಂಡರೆ ಯಶಸ್ಸು ಸಾಧ್ಯ ಎಂದು ಪವಮಾನ ಆಯುರ್ವೇದ ಫಾರ್ಮಸಿ ಮಾಲೀಕ ಹಾಗೂ ಆಯುರ್ವೇದ ವೈದ್ಯ ಡಾ.ಶ್ರೀನಿವಾಸ ಒಡೆಯರ ಹೇಳಿದರು.
ನಗರದ ರಾಜೇಶ್ವರಿ ಕರ್ಪೂರಮಠ ಸ್ಮರಣಾರ್ಥ ಆಯುರ್ವೇದ ಮೆಡಿಕಲ್ ಕಾಲೇಜಿನ ರಸಶಾಸ್ತ್ರ ವಿಭಾಗದಿಂದ ಶುಕ್ರವಾರ ಹಮ್ಮಿಕೊಂಡಿದ್ದ ನಾಗಾರ್ಜುನ ಕಕ್ಷೆ (ಭಸ್ಮ ತಯಾರಿಕೆ ಘಟಕ) ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಆಯುರ್ವೇದ ವಿದ್ಯಾರ್ಥಿಗಳು ಪದವಿ ಪಡೆದ ನಂತರ ಕೇವಲ ವೈದ್ಯಕೀಯ ವೃತ್ತಿಗೆ ಮಾತ್ರ ಸೀಮಿತಗೊಳ್ಳದೇ, ತಾವು ಕಲಿತ ಔಷಧ ತಯಾರಿಕೆ ಜ್ಞಾನ ಬಳಸಿಕೊಂಡು ಉದ್ಯಮಿಯಾಗಿ ಬೆಳೆಯಬೇಕೆಂದು ಹೇಳಿದರು.
ಆಡಳಿತಾಧಿಕಾರಿ ಶಂಭುಲಿಂಗಯ್ಯ ಕರ್ಪೂರಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಕೇವಲ ವೈದ್ಯರಾಗದೇ ಉದ್ಯಮಿಗಳಾಗಿ ಹತ್ತಾರು ಜನರಿಗೆ ಉದ್ಯೋಗ ಕೊಡುವ ನಿಟ್ಟಿನಲ್ಲಿ ಬೆಳೆಯಿರಿ ಎಂದರು.
ಪ್ರಾಚಾರ್ಯ ಡಾ.ಎನ್.ಎಂ. ರುದ್ರಗೌಡರ ಅಧ್ಯಕ್ಷತೆ ವಹಿಸಿ, ವ್ಯಕ್ತಿಯಾಗಿ ರೂಪಗೊಳ್ಳುವುದಕ್ಕಿಂತ ವ್ಯಕ್ತಿತ್ವವಾಗಿ ಬೆಳೆಯಿರಿ ಎಂದು ಹೇಳಿದರು. ಕಾಲೇಜಿನ ಎಲ್ಲ ಬೋಧಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರಾಧ್ಯಾಪಕಿ ಡಾ.ಮಮತಾ.ಬಿ ಸ್ವಾಗತಿಸಿದರು. ಸಹ ಪ್ರಾಧ್ಯಾಪಕಿ ಡಾ.ಆರ್.ಎಲ್. ವಾಟಾರಕರ ನಿರೂಪಿಸಿದರು. ಡಾ.ಅನೀತಾ ನಾಯಕ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net