ಅಂತರ್ಜಲ ವೃದ್ಧಿಗೆ ಮಳೆಕೊಯ್ಲು ಪೂರಕ

rain water
Published on

ವಿಜಯವಾಣಿ ಸುದ್ದಿಜಾಲ ವಿಜಯಪುರ
ಮಳೆ ನೀರು ವ್ಯರ್ಥವಾಗದಂತೆ ತಡೆಯಲು ಎಲ್ಲರೂ ಮನೆ ಛಾವಣಿ ನೀರನ್ನು ಸಂಗ್ರಹಿಸಿಲು ಮಳೆನೀರು ಕೊಯ್ಲು ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ರೂಬಿ ಆಂಗ್ಲ ಪ್ರೌಢಶಾಲೆ ಕಾರ್ಯದರ್ಶಿ ಸೈಯದ್ ರಫಿಕ್ ತಿಳಿಸಿದರು.
ಪಟ್ಟಣದ ರೂಬಿ ಆಂಗ್ಲ ಪ್ರೌಢಶಾಲೆ ಆವರಣದಲ್ಲಿ ಕೇಂದ್ರ ಯುವಜನ ಸೇವಾ ಮತ್ತು ಕ್ರೀಡಾ ಸಚಿವಾಲಯ, ಜಿಲ್ಲಾ ನೆಹರು ಯುವ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಮಳೆ ನೀರು ಕೊಯ್ಲು ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಜನ ಜಾಗೃತಿ ಮೂಡಿಸುವ ಗೋಡೆ ಬರಹಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಳೆನೀರನ್ನು ಅಗತ್ಯತೆಗಳಿಗೆ ತಕ್ಕಂತೆ ಸಂಗ್ರಹಿಸುವ ಮತ್ತು ಬಳಸಿಕೊಳ್ಳುವ ಸರಳ ವಿಧಾನವೇ ಮಳೆನೀರು ಕೊಯ್ಲು. ನೀರಿನ ಕೊರತೆ ಎದುರಿಸುತ್ತಿರುವ ನಗರ ಮತ್ತು ಮರುಭೂಮಿ ಪ್ರದೇಶಗಳಲ್ಲಿ ಈ ವಿಧಾನವು ಬಹಳ ಅವಶ್ಯವಾಗಿದೆ ಎಂದರು.
ಮಳೆನೀರು ಕೊಯ್ಲು ಕಡಿಮೆ ಬಂಡವಾಳ ಮತ್ತು ಹೆಚ್ಚಿನ ಪ್ರಯೋಜನ ಹೊಂದಿರುವ ವಿಧಾನವಾಗಿದ್ದರಿಂದ ಮಳೆ ನೀರನ್ನು ಇಂಗು ಗುಂಡಿಗಳ ಮೂಲಕ ಇಂಗಿಸಿ ಅಂತರ್ಜಲಮಟ್ಟ ಕಾಪಾಡಲು ಸಹಕಾರಿಯಾಗಿದೆ ಎಂದು ತಿಳಿಸಿದರು.
ಮುಖ್ಯಶಿಕ್ಷಕಿ ನಿಖ್ಖತ್ ಸಲ್ಮಾ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ನಾವು ಪ್ರತಿನಿತ್ಯ ನೀರಿನ ಅಭಾವ ಎದುರಿಸುತ್ತಿದ್ದು, ನೀರಿನ ವ್ಯರ್ಥ ತಡೆಗಟ್ಟಿ, ಸಂರಕ್ಷಿಸಬೇಕು ಎಂದು ತಿಳಿಸಿದರು.
ರಾಷ್ಟ್ರೀಯ ಯುವ ಯೋಜನೆಯ ರಾಜ್ಯ ಸಂಯೋಜಕ ಡಾ.ವಿ.ಪ್ರಶಾಂತ, ಮಳೆ ನೀರು ಸಂರಕ್ಷಣೆ ಬಗ್ಗೆ ಶಾಲೆ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ, ಮಳೆ ನೀರು ಕೊಯ್ಲು ವಿಧಾನದ ಮಾಹಿತಿ ಹಾಗೂ ಸಂಗ್ರಹಿಸುವ ವಿಧಾನ ಮಾಹಿತಿ ಒಳಗೊಂಡ ಕರ ಪತ್ರ ವಿತರಿಸಿದರು.
ಶಿಕ್ಷಕಿಯರಾದ ವೀಣಾ, ಡಯಾನಾ, ಜಿಲ್ಲಾ ನೆಹರು ಯುವ ಕೇಂದ್ರ ದೊಡ್ಡಬಳ್ಳಾಪುರ ತಾಲೂಕಿನ ಪೂರ್ವ ರಾಷ್ಟ್ರೀಯ ಸೇವಾ ಕಾರ್ಯಕರ್ತ ಎಚ್.ಜಿ.ಶ್ರೀಧರ್, ದೇವನಹಳ್ಳಿ ತಾಲೂಕಿನ ಸೇವಾ ಕಾರ್ಯಕರ್ತ ಕೆ.ಶ್ರೀಧರ್ ಜೆಸಿಐ ದೇವನಹಳ್ಳಿ ಡೈಮಂಡ್ಸ್ ಅಧ್ಯಕ್ಷ ಜೆಸಿ ಜಿ.ಎನ್. ಪ್ರಶಾಂತ್ ಕುಮಾರ್, ನಾಗಾರ್ಜುನ ಕಾಲೇಜ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡಿಸ್ ರಾಷ್ಟ್ರೀಯ ಸೇವಾ ಯೋಜನೆ ಸ್ವಯಂ ಸೇವಕರಾದ ವೈ.ಎಂ.ಸಿಂಧು, ಬಿ.ಎಂ. ಯಶ್ವಂತ್ ಕುಮಾರ್, ವೈ.ಆರ್. ಕುಸುಮಾ, ಎಸ್.ಎಂ. ರಂಜೀತ್, ವಿ.ದರ್ಶಿತ್, ಎಸ್.ಜಿ. ಶ್ರೇಯಸ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net