ಬುಡಕಟ್ಟು ವೇಷ ಧರಿಸಿ ಬೃಹತ್ ಹೋರಾಟ

VJP 31-2
Published on

ವಿಜಯಪುರ: ಕೇಂದ್ರ ಸರ್ಕಾರದ ಗೆಜೆಟ್ ಆಧರಿಸಿ ತಳವಾರ ಮತ್ತು ಪರಿವಾರ ಸಮುದಾಯಕ್ಕೆ ಎಸ್‌ಟಿ ಪ್ರಮಾಣ ಪತ್ರ ನೀಡಲು ಆಗ್ರಹಿಸಿ ತಳವಾರ ಮತ್ತು ಪರಿವಾರ ಸಮುದಾಯದಿಂದ ಸೋಮವಾರ ಬುಡಕಟ್ಟು ವೇಷ ಧರಿಸಿ ವಿನೂತನ ಹೋರಾಟ ಹಮ್ಮಿಕೊಳ್ಳಲಾಯಿತು.
ಅರೆಬೆತ್ತಲೆಯಾಗಿ ಬೇವಿನ ತೊಪ್ಪಲು ಕಟ್ಟಿಕೊಂಡು ಕೈಯಲ್ಲಿ ದೊಣ್ಣೆ ಹಾಗೂ ಬಿಲ್ಲು ಬಾಣ ಹಿಡಿದ ಸಾವಿರಾರು ಜನ ಬೃಹತ್ ಮೆರವಣಿಗೆ ನಡೆಸಿದರು. ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಿಂದ ಆರು ಕಿಮೀ ಮೆರವಣಿಗೆ ನಡೆಸಿದ ಸಾವಿರಾರು ಜನರು ದರಬಾರ್ ಮೈದಾನದಲ್ಲಿ ಸಮಾವೇಶಗೊಂಡರು.
ಮಾರ್ಗದುದ್ದಕ್ಕೂ ಎಸ್‌ಟಿ ಪ್ರಮಾಣ ಪತ್ರಕ್ಕಾಗಿ ಘೋಷಣೆ ಕೂಗಿದರಲ್ಲದೆ, ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಎಸ್‌ಟಿ ಕೊಡಿ ಇಲ್ಲವೇ ಹೋರಾಟ ಎದುರಿಸಿ ಎಂದು ಎಚ್ಚರಿಕೆ ನೀಡಿದರು.

ನೇತೃತ್ವ ವಹಿಸಿದ್ದ ಮುಖಂಡ ಶಿವಾಜಿ ಮೆಟಗಾರ ಮಾತನಾಡಿ, ಕೇಂದ್ರ ಸರ್ಕಾರ ತಳವಾರ ಮತ್ತು ಪರಿವಾರ ಸಮುದಾಯವನ್ನು ಎಸ್‌ಟಿಗೆ ಸೇರ್ಪಡೆ ಮಾಡಿ ರಾಜ್ಯಪತ್ರ ಹೊರಡಿಸಿ ಆರು ತಿಂಗಳು ಗತಿಸಿವೆ. ಆದರೆ, ರಾಜ್ಯ ಸರ್ಕಾರದ ಕೆಲ ಮಂತ್ರಿಗಳು ಮತ್ತು ಅಧಿಕಾರಿ ವರ್ಗ ಅನಾವಶ್ಯಕವಾಗಿ ಗೊಂದಲ ಸೃಷ್ಟಿಸುತ್ತಿದೆ. ತಳವಾರ ಮತ್ತು ಪರಿವಾರ ಎಂಬುದು ನಾಯಕ ಮತ್ತು ನಾಯಕಡ ಪದದ ಪರ್ಯಾಯ ಪದ ಎಂದು ಕೇಂದ್ರದ ರಾಜ್ಯಪತ್ರದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಅದಾಗ್ಯೂ ಕೆಲ ಹಿತಾಸಕ್ತಿಗಳು ತಳವಾರ ಮತ್ತು ಪರಿವಾರ ಎಂಬುದು ಕೋಲಿ, ಕಬ್ಬಲಿಗ, ಗಂಗಾಮತ, ಅಂಬಿಗ ಸಮುದಾಯದ ಜತೆ ತಳಕು ಹಾಕಿ ಮೀಸಲಾತಿಯಿಂದ ವಂಚಿತಗೊಳಿಸುವ ಹುನ್ನಾರ ನಡೆಸಿವೆ. ತಳವಾರ ಮತ್ತು ಪರಿವಾರ ಎಂಬುದು ನಾಯಕ ಸಮುದಾಯದ ಪಂಗಡ ಎಂಬುದಕ್ಕೆ ಹಲವು ಸಾಕ್ಷ್ಯ ಒದಗಿಸಲಾಗಿದ್ದರೂ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಈಗಾಗಲೇ ಶೈಕ್ಷಣಿಕ ಪ್ರಕ್ರಿಯೆ ಪ್ರಾರಂಭಗೊಂಡಿದ್ದು, ಇನ್ನೊಂದೆಡೆ ವಿವಿಧ ನೇಮಕಾತಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆದ್ದರಿಂದ ಕೂಡಲೇ ಜಾತಿ ಪ್ರಮಾಣ ಪತ್ರ ನೀಡಬೇಕೆಂದು ಒತ್ತಾಯಿಸಿದರು.

ಈಗಾಗಲೇ ರಕ್ತದಾನ ಚಳವಳಿ, ಪತ್ರ ಚಳವಳಿ ಹಾಗೂ ಎಲ್ಲ ಜನಪ್ರತಿನಿಧಿಗಳ ಮನೆ ಮುಂದೆ ಧರಣಿ ನಡೆಸಲಾಗಿದೆ. ಇದೀಗ ಸಮುದಾಯ ಮೂಲ ವೇಷ ತೊಟ್ಟು ವಿನೂತನವಾಗಿ ಪ್ರತಿಭಟಿಸಲಾಗಿದ್ದು, ಇದಕ್ಕೂ ಜಗ್ಗದೆ ಹೋದಲ್ಲಿ ಹಂತ ಹಂತವಾಗಿ ಉಗ್ರ ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ. 15 ದಿನಗಳಲ್ಲಿ ಸಮಾಜಕ್ಕೆ ನ್ಯಾಯ ಒದಗಿಸಬೇಕು. ಇಲ್ಲವಾದಲ್ಲಿ ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ ಅವರ ಕ್ಷೇತ್ರ ಮುಧೋಳದಲ್ಲಿ ಮತ್ತೆ ಅರೆಬೆತ್ತಲೆ ಹೋರಾಟ ಹಮ್ಮಿಕೊಳ್ಳಲಾಗುವುದು. ಅದಕ್ಕೂ ಜಗ್ಗದಿದ್ದರೆ ಬೆತ್ತಲೆ ಹೋರಾಟಕ್ಕೂ ಹಿಂಜರಿಯುವುದಿಲ್ಲ ಎಂದು ಎಚ್ಚರಿಸಿದರು.
ಮೆರವಣಿಗೆಯುದ್ದಕ್ಕೂ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಹಾಗೂ ಎಸ್‌ಪಿ ಅನುಪಮ್ ಅಗರವಾಲ್ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿದರು. ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಮಾತನಾಡಿ, ಈಗಾಗಲೇ ತಳವಾರ ಮತ್ತು ಪರಿವಾರ ಸಮುದಾಯದ ಗೊಂದಲ ಬಗೆ ಹರಿಸುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಇದೀಗ ಮತ್ತೊಮ್ಮೆ ಪತ್ರ ಬರೆದು ಶೀಘ್ರದಲ್ಲೇ ಗೊಂದಲ ನಿವಾರಿಸುವ ಭರವಸೆ ನೀಡಿದರು.
ಜಿಲ್ಲೆಯ ಎಲ್ಲ ತಾಲೂಕು ಸೇರಿ ನೆರೆಯ ಬಾಗಲಕೋಟೆ, ಬೆಳಗಾವಿ, ಶಹಾಪುರ, ಸುರಪುರ, ಯಾದಗಿರಿ ಭಾಗಗಳಿಂದ ಸಾವಿರಾರು ಜನ ಭಾಗವಹಿಸಿದ್ದರು.

ತಳವಾರ ಸಮುದಾಯ 35 ವರ್ಷಗಳಿಂದ ಶೋಷಣೆಗೆ ಒಳಗಾಗುತ್ತ ಬಂದಿದೆ. ಇದೀಗ ಕೇಂದ್ರ ಸರ್ಕಾರ ಎಸ್‌ಟಿ ಸೇರ್ಪಡೆ ಮಾಡಿದ್ದರೂ ರಾಜ್ಯ ಸರ್ಕಾರ ಮೀನಮೇಷ ಎಣಿಸುತ್ತಿದೆ. ಇದರಿಂದ ಸಮುದಾಯದ ಮಕ್ಕಳು ತೀವ್ರ ತೊಂದರೆಗೆ ಸಿಲುಕಿದ್ದಾರೆ. ಅತ್ತ ಪ್ರವರ್ಗ-1ರ ಪ್ರಮಾಣ ಪತ್ರವೂ ನೀಡುತ್ತಿಲ್ಲ. ಇತ್ತ ಎಸ್‌ಟಿ ಪ್ರಮಾಣ ಪತ್ರವೂ ಇಲ್ಲ. ಆರು ತಿಂಗಳಿಂದ ಕಚೇರಿಗೆ ಅಲೆದಾಡುತ್ತಿದ್ದೇವೆ. ಅನಿವಾರ್ಯವಾಗಿ ಸಾಮಾನ್ಯ ವರ್ಗದಡಿ ಹೆಚ್ಚಿನ ಶುಲ್ಕ ನೀಡಿ ಶಾಲೆ ಪ್ರವೇಶ ಪಡೆಯುವಂತಾಗಿದೆ.
ನಿಂಗಪ್ಪ ತಿಳಗೂಳ, ಇಂಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net