

ವಿಜಯಪುರ: ಪಾಲಿಕೆಯಲ್ಲಿ ಜನನ- ಮರಣ ನೋಂದಣಾಧಿಕಾರಿಗಳ ಕಾರ್ಯಾಲಯದಲ್ಲಿ ಪ್ರಮಾಣಪತ್ರ ಕೊಡುವಲ್ಲಿ ಅನುಸರಿಸುತ್ತಿರುವ ವಿಳಂಬನೀತಿ ಹಾಗೂ ತಾಂತ್ರಿಕ ದೋಷಗಳಿಂದ ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆ ನಿವಾರಿಸುವಂತೆ ಆಗ್ರಹಿಸಿ ಕರವೇ ಜಿಲ್ಲಾ ಸಮಿತಿ ಪದಾಧಿಕಾರಿಗಳು ಹಳೇ ಪಾಲಿಕೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ನೋಂದಣಾಧಿಕಾರಿ ಬಿ.ಎಸ್. ಮಂಗಸೂಳಿ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಜಿಲ್ಲಾಧ್ಯಕ್ಷ ಎಂ.ಸಿ. ಮುಲ್ಲಾ ಮಾತನಾಡಿ, ಸಾರ್ವಜನಿಕರು ಸೂಕ್ತ ದಾಖಲೆಗಳನ್ನು ನೀಡಿದರೂ ಇಲ್ಲಿನ ಸಿಬ್ಬಂದಿ ಸರಿಯಾದ ಸಮಯಕ್ಕೆ ಪ್ರಮಾಣಪತ್ರ ನೀಡುತ್ತಿಲ್ಲ. 3-4 ತಿಂಗಳಿಂದ ತಾಂತ್ರಿಕ ತೊಂದರೆ ನೆಪಹೇಳಿ ಜನರನ್ನು ಸತಾಯಿಸುತ್ತಿದ್ದಾರೆ. ಏಪ್ರಿಲ್ ತಿಂಗಳಿಂದ ಪೌರತ್ವ ತಿದ್ದುಪಡಿ ಕಾರ್ಯ ಆರಂಭವಾಗಲಿದ್ದು, ಈ ಪ್ರಕ್ರಿಯೆಯಿಂದ ಜನರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಕುಂಬಾರ ಮಾತನಾಡಿ, ಇಲ್ಲಿನ ಸಿಬ್ಬಂದಿ ಮಾಡಿದ ತಾಂತ್ರಿಕ ಪ್ರಮಾದಗಳಿಂದ ಜನರು ತೊಂದರೆ ಅನುಭವಿಸುತ್ತಿರುವುದಲ್ಲದೇ, ಕಚೇರಿಗೆ ಅಲೆಯುವುದು ಸಾಮಾನ್ಯವಾಗಿದೆ. ಚಿಕ್ಕಪುಟ್ಟ ತಿದ್ದುಪಡಿಗಾಗಿ ನ್ಯಾಯಾಲಯ ಮತ್ತು ಪ್ರಮಾಣಪತ್ರ ಪಡೆಯುವುದು ಜನರಿಗೆ ನುಂಗಲಾರದ ತುತ್ತಾಗಿದೆ. ಹೆಚ್ಚಿನ ಸಿಬ್ಬಂದಿ ನೇಮಿಸಿ ಸಾರ್ವಜನಿಕರಿಗೆ ಸೂಕ್ತ ಸಮಯದಲ್ಲಿ ಪ್ರಮಾಣಪತ್ರಗಳು ದೊರೆಯುವಂತಾಗಬೇಕೆಂದು ಆಗ್ರಹಿಸಿದರು.
ನಗರಾಧ್ಯಕ್ಷ ಯಾಜ್ ಕಲಾದಗಿ ಹಾಗೂ ಜಿಲ್ಲಾ ಕಾರ್ಯದರ್ಶಿ ದಸ್ತಗೀರ್ ಸಾಲೋಟಗಿ ಮಾತನಾಡಿದರು. ಎಚ್.ಎಸ್. ಕಬಾಡೆ, ರಜಾಕ್ ಕಾಖಂಡಕಿ, ನಸೀಮ್ ರೋಜಿನ್ದಾರ್, ಮಲ್ಲು ಮಡಿವಾಳರ, ದಾದಾಪೀರ್ ಮುಜಾವರ್, ಬಸವರಾಜ ಬಿ.ಕೆ. ಆಸ್ೀ ಪೀರವಾಲೆ, ಸಂತೋಷ ಮುಧೋಳ, ಆಜಾದ್ ಅಗಸಿಮನಿ, ಫಿದಾ ಕಲಾದಗಿ ಮತ್ತಿತರರು ಉಪಸ್ಥಿತರಿದ್ದರು.