ಪ್ರತಿಭಟನೆ-ಮನವಿಗೆ ಸೀಮಿತವಾದ ಮುಷ್ಕರ

VJP Mushkara
Published on

ವಿಜಯಪುರ: ಕೇಂದ್ರ ಸರ್ಕಾರದ ಕಾರ್ಮಿಕ ನೀತಿ ವಿರೋಧಿಸಿ ವಿವಿಧ ಕಾರ್ಮಿಕ ಸಂಘಟನೆಗಳು ರಾಷ್ಟ್ರಾದ್ಯಂತ ಕರೆ ನೀಡಿದ್ದ ಮುಷ್ಕರ ಕೇವಲ ಪ್ರತಿಭಟನೆ ಹಾಗೂ ಮನವಿ ಸಲ್ಲಿಕೆಗೆ ಸೀಮಿತವಾಯಿತು.
ಬುಧವಾರ ಬೆಳಗ್ಗೆ ಮುಷ್ಕರದ ವಾತಾವರಣ ಎಳ್ಳಷ್ಟೂ ಇರಲಿಲ್ಲ. ಎಂದಿನಂತೆ ಅಂಗಡಿ-ಮುಂಗಟ್ಟುಗಳು ತೆರೆದುಕೊಂಡಿದ್ದವು. ಬಸ್, ಆಟೋ ಮತ್ತಿತರ ವಾಹನಗಳ ಸಂಚಾರ ಯಥಾವತ್ತಾಗಿತ್ತು. ಜನಜೀವನದಲ್ಲಿ ಯಾವುದೇ ವ್ಯತ್ಯಾಸ ಕಂಡುಬರಲಿಲ್ಲ. ಶಾಲೆ- ಕಾಲೇಜ್‌ಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಹೋಟೆಲ್, ವಸತಿ ಗೃಹ ಹಾಗೂ ಸರ್ಕಾರಿ ಕಚೇರಿಗಳು ಎಂದಿನಂತಿದ್ದವು.

ಪ್ರತಿಭಟನಾ ಮೆರವಣಿಗೆ

ನಗರದ ಸಿದ್ಧೇಶ್ವರ ದೇವಸ್ಥಾನದಿಂದ ವಿವಿಧ ಪ್ರಗತಿ ಪರ ಸಂಘಟನೆಗಳ ನೇತೃತ್ವ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಯಿತು. ಮಹಾತ್ಮ ಗಾಂಧಿ, ಬಸವೇಶ್ವರ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಪ್ರತಿಭಟನಾ ಮೆರವಣಿಗೆ ಜಿಲ್ಲಾಡಳಿತ ಕಚೇರಿ ತಲುಪಿತು. ಸಂಘಟನಾಕಾರರ ಪೈಕಿ ಕೆಲವರು ಕಾಲ್ನಡಿಗೆ ಮೂಲಕ ಮನವಿ ಸಲ್ಲಿಸಲು ತೆರಳಿದರೆ ಕೆಲವರು ಜಿಲ್ಲಾಡಳಿತ ಕಚೇರಿವರೆಗೆ ಬೈಕ್ ರ‌್ಯಾಲಿ ನಡೆಸಿದರು.
ಮಾರ್ಗದುದ್ದಕ್ಕೂ ಕಾರ್ಮಿಕ ಸಂಘಟನೆಗಳ ಕೆಂಪು ಧ್ವಜಗಳು ರಾರಾಜಿಸಿದವು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳು ಮೊಳಗಿದವು. ವಿವಿಧ ಬ್ಯಾನರ್‌ಗಳನ್ನು ಹಿಡಿದ ಕಾರ್ಯಕರ್ತರು ಸರ್ಕಾರದ ಧೋರಣೆ ಖಂಡಿಸಿ ಘೋಷಣೆ ಕೂಗಿದರು. ಬಳಿಕ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು. ಬ್ಯಾಂಕ್ ನೌಕರರ ಸಂಘ, ಸಿಐಟಿಯು, ಎಐಟಿಯುಸಿ, ಎಸ್‌ಯುಸಿಐ, ಅಖಂಡ ಕರ್ನಾಟಕ ರೈತ ಸಂಘ, ಪ್ರಾಂತ ರೈತ ಸಂಘ ಹೀಗೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಕಾರ್ಮಿಕರ ಬದುಕು ಬೀದಿಗೆ

ಪ್ರಾಂತ ರೈತ ಸಂಘದ ಅಧ್ಯಕ್ಷ ಭೀಮಶಿ ಕಲಾದಗಿ ಮಾತನಾಡಿ, ದೇಶದಲ್ಲಿ ಆರ್ಥಿಕ ಕುಸಿತದ ಪರಿಣಾಮವಾಗಿ ಅನೇಕ ಕಾರ್ಖಾನೆಗಳು ಮುಚ್ಚಲ್ಪಟ್ಟು ಕಾರ್ಮಿಕರ ಬದುಕು ಬೀದಿಗೆ ಬೀಳುವಂತಾಗಿದೆ. ರೈಲ್ವೆ, ಗಣಿ, ಸಂಪರ್ಕ, ಕಲ್ಲಿದ್ದಲು ಹೀಗೆ ಸರ್ಕಾರಿ ಸ್ವಾಮ್ಯದ ಉದ್ಯಮಗಳನ್ನೂ ಖಾಸಗೀಕರಣ ಮಾಡುವ ಹುನ್ನಾರ ನಡೆದಿದೆ. ಈ ಎಲ್ಲ ಕ್ಷೇತ್ರಗಳಲ್ಲಿಯೂ ಖಾಸಗಿಯವರು ಕಾಲಿಟ್ಟರೆ ಕಾರ್ಮಿಕರ ಪರಿಸ್ಥಿತಿ ಮತ್ತಷ್ಟು ತೊಂದರೆಗೀಡಾಗಲಿದೆ ಎಂದು ಆತಂಕ ತೋಡಿಕೊಂಡರು.
ಸಾರ್ವಜನಿಕ ಉದ್ಯಮಗಳಲ್ಲಿ ಖಾಸಗೀಕರಣಕ್ಕೆ ಅವಕಾಶ ನೀಡುತ್ತಿರುವುದು ಕಾರ್ಮಿಕ ಹಿತರಕ್ಷಣೆಗೆ ಮಾರಕವಾಗಿದೆ. ಇದು ಕಾರ್ಮಿಕರ ಸ್ಥಿತಿಯಾದರೆ, ರೈತ ಹಾಗೂ ಕೃಷಿ ಕೂಲಿಕಾರ್ಮಿಕರು ಇನ್ನೊಂದು ರೀತಿಯ ಗಂಭೀರ ಸಮಸ್ಯೆ ಎದುರಿಸುವಂತಾಗಿದೆ. ಉದ್ಯೋಗವಿಲ್ಲದೇ ಗುಳೆ ಹೋಗುವುದು ಸಾಮಾನ್ಯವಾಗಿದೆ. ರೈತ ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆಯೂ ಇಲ್ಲದಂತಾಗಿದೆ ಎಂದು ದೂರಿದರು.
ಮುಖಂಡರಾದ ಅರವಿಂದ ಕುಲಕರ್ಣಿ, ಬಿ. ಭಗವಾನರೆಡ್ಡಿ, ಅಣ್ಣಾರಾಯ ಈಳಿಗೇರ, ಪ್ರಕಾಶ ಹಿಟ್ಟಿನಹಳ್ಳಿ, ಸುರೇಖಾ ರಜಪೂತ, ಲಕ್ಷ್ಮಣ ಹಂದ್ರಾಳ, ಸುನೀಲ ಸಿದ್ರಾಮಶೆಟ್ಟಿ, ಪ್ರಭುಗೌಡ ಪಾಟೀಲ ಇತರರಿದ್ದರು.

ಬೇಡಿಕೆ ಈಡೇರಿಕೆಗೆ ಒತ್ತಾಯ

ಎಲ್ಲ ಕಾರ್ಮಿಕರಿಗೆ 21 ಸಾವಿರ ರೂ. ಕನಿಷ್ಠ ವೇತನ ನಿಗದಿಗೊಳಿಸುವುದು, ಆಶಾ, ಅಂಗನವಾಡಿ, ಬಿಸಿಯೂಟ ನೌಕರರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸುವುದು. ಬೆಲೆ ಏರಿಕೆಯನ್ನು ಕೂಡಲೇ ನಿಯಂತ್ರಿಸುವುದು, ಗುತ್ತಿಗೆ ಪದ್ಧತಿ ರದ್ಧುಮಾಡಿ ಕಾರ್ಮಿಕರ ಶೋಷಣೆ ತಪ್ಪಿಸುವುದು, ಆರ್ಥಿಕ ಹಿಂಜರಿತಕ್ಕೆ ಕಾರಣವಾಗುವ ಅಂಶಗಳನ್ನು ಅಧ್ಯಯನ ಮಾಡಿ ವೈಜ್ಞಾನಿಕ ಆರ್ಥಿಕ ನೀತಿ ರೂಪಿಸುವುದು, ಅಸಂಘಟಿತ ಕಾರ್ಮಿಕರಿಗೆ ಭವಿಷ್ಯನಿಧಿ, ಪಿಂಚಣಿ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸುವುದು, ಸಾರ್ವಜನಿಕ ಉದ್ಯಮಗಳನ್ನು ಖಾಸಗೀಕರಣಗೊಳಿಸದಿರುವುದು, ಎಲ್ಲ ಜಿಲ್ಲೆಗಳಲ್ಲಿ ಕಾರ್ಮಿಕ ನ್ಯಾಯಾಲಯಗಳ ಸ್ಥಾಪನೆ ಮಾಡುವುದು, ರೈತರಿಗೆ ವೈಜ್ಞಾನಿಕ ಬೆಲೆ ದೊರಕಿಸುವುದು ಸೇರಿದಂತೆ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಯಿತು.

ಕಾಂಗ್ರೆಸ್ ಕಾರ್ಮಿಕ ಘಟಕ

ಕಾಂಗ್ರೆಸ್‌ನ ಕಾರ್ಮಿಕ ಘಟಕದ ಅಧ್ಯಕ್ಷ ದತ್ತಾತ್ರೇಯ ಆಲಮೇಲಕರ ಹಾಗೂ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಆಲಗೂರ ನೇತೃತ್ವ ನೂರಾರು ಪದಾಧಿಕಾರಿಗಳು ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ರಾಜು ಆಲಗೂರ ಮಾತನಾಡಿ, ಕೇಂದ್ರ ಸರ್ಕಾರ ಬಂಡವಾಳ ಶಾಹಿ ಪರ ಕೆಲಸ ಮಾಡುತ್ತಿದೆ. ಕಾರ್ಮಿಕರ ಹಿತ ಕಡೆಗಣಿಸಿ ಯೋಜನೆಗಳನ್ನು ರೂಪಿಸುತ್ತಿದೆ. ಕಾರ್ಮಿಕರ ಶೋಷಣೆಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕುಮ್ಮಕ್ಕು ನೀಡುತ್ತಿದೆ ಎಂದು ಆಪಾದಿಸಿದರು.
ಕಾರ್ಮಿಕ ಘಟಕದ ಅಧ್ಯಕ್ಷ ದತ್ತಾತ್ರೇಯ ಆಲಮೇಲಕರ ಮಾತನಾಡಿ, ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಕಾರ್ಮಿಕರ ಪರ ಅನೇಕ ಕಾನೂನುಗಳನ್ನು ಹಾಗೂ ನೀತಿಗಳನ್ನು ರೂಪಿಸಿತ್ತು. ಇದೀಗ ಅಧಿಕಾರಕ್ಕೆ ಬಂದಿರುವ ಬಿಜೆಪಿ ಬಂಡವಾಳ ಶಾಹಿಗಳ ಹಿತ ರಕ್ಷಣೆಗೆ ಆದ್ಯತೆ ನೀಡುತ್ತಿದೆಯೇ ವಿನಃ ಕಾರ್ಮಿಕರ ರಕ್ಷಣೆಗೆ ಒಂದಿನಿತೂ ಕಾಳಜಿ ತೋರುತ್ತಿಲ್ಲವೆಂದರು.
ಮುಖಂಡರಾದ ಅಬ್ದುಲ್‌ಹಮೀದ್ ಮುಶ್ರೀಪ್, ಗಂಗಾಧರ ಸಂಬಣ್ಣಿ, ಬಾಬು ಯಾಳವಾರ, ಜ್ಯೋತಿರಾಮ ಪವಾರ, ಅಲ್ಲಾಭಕ್ಷ ಬಾಗಲಕೋಟ, ಜಿವಸಂತ ಹೊನಮೊಡೆ, ರವಿ ಹೊಸಳ್ಳಿ, ರ್ಇಾನ್ ಶೇಖ, ಭೀಮಾಶಂಕರ ಬಡಿಗೇರ, ಯಾಜ್ ಕಲಾದಗಿ, ಶಕುಂತಲಾ ಕಿರಸೂರ, ಸಂದಪಾಲ ರಾಠೋಡ, ಎಂ.ವೈ.ಹೂಗಾರ, ರಮೇಶ ಬಮ್ಮನಜೋಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net