ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಿ

vijayvapura program
Published on

ವಿಜಯವಾಣಿ ಸುದ್ದಿಜಾಲ ವಿಜಯಪುರ
ಮಕ್ಕಳು ಹೆಚ್ಚಿನ ಅಂಕಗಳಿಸಲು ಆದ್ಯತೆ ನೀಡುವ ಜತೆಗೆ ಉತ್ತಮ ಸಂಸ್ಕಾರದೊಂದಿಗೆ ಗುರುಹಿರಿಯರನ್ನು ಗೌರವಿಸುವ ಹಾಗೂ ಮಾನವೀಯ ಗುಣ ಮೈಗೂಡಿಸಿಕೊಂಡರೆ ಸಮಾಜದಲ್ಲಿ ಮಾದರಿ ವ್ಯಕ್ತಿಯಾಗಲು ಸಾಧ್ಯ ಎಂದು ಹಿರಿಯ ಪತ್ರಕರ್ತ ರು.ಬಸಪ್ಪ ತಿಳಿಸಿದರು.
ಪಟ್ಟಣದ ಶ್ರೀ ನಗರೇಶ್ವರಸ್ವಾಮಿ ಪ್ರಾರ್ಥನಾ ಮಂದಿರದಲ್ಲಿ ಶ್ರೀ ವೀರಭದ್ರಸ್ವಾಮಿ ಗೋಷ್ಠಿ, ಅಕ್ಕನ ಬಳಗ ಸೇವಾ ಟ್ರಸ್ಟ್ ಮತ್ತು ಶ್ರೀ ವೀರೇಶ್ವರ ಚಾರಿಟಬಲ್ ಟ್ರಸ್ಟ್‌ನಿಂದ ಏರ್ಪಡಿಸಿದ್ದ 342ನೇ ಮಾಸಿಕ ಶಿವಾನುಭ ಗೋಷ್ಠಿ ಹಾಗೂ ಡಾ.ಜಚನಿ ಸ್ಮರಣೆ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಹಾಗೂ ಅಶಕ್ತ ಹಿರಿಯರಿಗೆ ಸಹಾಯಧನ ಮತ್ತು ವೀರೇಶ್ವರ ಟ್ರಸ್ಟ್‌ನಿಂದ ವೀರೇಶ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಸಹಕಾರ ರತ್ನ ರಾಜ್ಯ ಪ್ರಶಸ್ತಿ ಪುರಸ್ಕೃತ ಪಿ.ರುದ್ರಪ್ಪ ಮಾತನಾಡಿ, ಈ ಹಿಂದೆ ಪಟ್ಟಣದಲ್ಲಿ ಯಾವುದೇ ಕಟ್ಟಡ ಕಂಡರು ದಾನಿಗಳ ಹೆಸರು ಕೇಳಿ ಬರುತ್ತಿತ್ತು. ಆದರೆ ಈಗ ಎಲ್ಲವೂ ಬದಲಾಗಿದೆ. ಜೀವನದಲ್ಲಿ ಎಷ್ಟೇ ಸಂಪಾದನೆ ಮಾಡಿದರೂ ಬದುಕಿನಲ್ಲಿ ನೆಮ್ಮದಿ ದೊರೆಯದ ಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರಿಸಿದರು.
ಟ್ರಸ್ಟ್ ಕಾರ್ಯದರ್ಶಿ ಲಿಂಗರಾಜು ಮಾತನಾಡಿ, ಪ್ರತಿಯೊಬ್ಬರೂ ಭವಿಷ್ಯಕ್ಕಾಗಿ ಹಣ ಉಳಿಸಲು ಕಾಳಜಿವಹಿಸುವಂತೆ ಹಿರಿಯರು ಹಾಗೂ ಮಕ್ಕಳಿಗಾಗಿ ಸಮಯ ಮೀಸಲಿಡಬೇಕು. ಉತ್ತಮ ವಿಷಯಗಳನ್ನು ಚರ್ಚಿಸುವ ಮೂಲಕ ಹಿರಿಯರು ನಡೆದು ಬಂದ ದಾರಿ, ಸಮಾಜಕ್ಕೆ ನೀಡಿದ ಕೊಡುಗೆ ಬಗ್ಗೆ ಮಕ್ಕಳಿಗೆ ತಿಳಿಸಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net