ಪಾಲಿಕೆ ಮಾಜಿ ಸದಸ್ಯನಿಗೆ ಥಳಿತ…!

VJP PRAKASH MIRJI
Published on

ವಿಜಯಪುರ: ಮಾಸ್ಕ್ ವಿಚಾರವಾಗಿ ಸಾರ್ವಜನಿಕರೊಂದಿಗೆ ಅಸಭ್ಯವಾಗಿ ನಡೆದುಕೊಂಡ ಪೊಲೀಸ್ ಪೇದೆ ವರ್ತನೆ ಬಗ್ಗೆ ವಿಚಾರಿಸಲು ಹೋದ ಪಾಲಿಕೆ ಮಾಜಿ ಸದಸ್ಯನ ಮೇಲೆ ಪೊಲೀಸರು ದೌರ್ಜನ್ಯ ಎಸಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಸ್ಥಳೀಯ ವಾರ್ಡ್ ನಂ.14 ರ ಮಾಜಿ ಸದಸ್ಯ ಪ್ರಕಾಶ ಮಿರ್ಜಿ ಮೇಲೆ ಹಲ್ಲೆ ನಡೆದಿದ್ದು, ಕಾಲಿನ ಮೂಳೆಗೆ ಬಲವಾದ ಪೆಟ್ಟು ಬಿದ್ದಿದೆ. ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಎಂಎಲ್‌ಸಿಯಾದರೂ ಈವರೆಗೆ ಪೊಲೀಸ್ ಸಿಬ್ಬಂದಿ ಮಾತ್ರ ದೂರು ದಾಖಲಿಸಿಕೊಳ್ಳಲು ಆಸ್ಪತ್ರೆಗೆ ಧಾವಿಸಿಲ್ಲ ಎಂದು ಮಿರ್ಜಿ ಅಳಲು ತೋಡಿಕೊಂಡಿದ್ದಾರೆ.

ಭಾನುವಾರ ಸಂಜೆ 5.30ರ ಸುಮಾರಿಗೆ ಮಹಿಳೆಯೊಬ್ಬರು ಮಾಸ್ಕ್ ಧರಿಸದೆ ವಾಹನ ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ಪೊಲೀಸ್ ಸಿಬ್ಬಂದಿ ದಂಡ ವಿಧಿಸುವ ಬದಲು ಅನುಚಿತವಾಗಿ ವರ್ತಿಸಿದ್ದಾರೆ. ಮಹಿಳೆ ಮೈಮೇಲಿನ ಬಟ್ಟೆ ಎಳೆದು ಅವಾಚ್ಯವಾಗಿ ನಿಂದಿಸಿದ್ದಾರೆ. ಅಲ್ಲದೆ, ದಂಡವನ್ನೂ ಕಟ್ಟಿಸಿಕೊಳ್ಳದೆ ಬೈಕ್ ತೆಗೆದುಕೊಂಡು ಠಾಣೆಗೆ ಹೋಗಿದ್ದಾರೆ. ಈ ಬಗ್ಗೆ ವಿಚಾರಿಸಲು ಹೋದರೆ ಪಾಲಿಕೆ ಮಾಜಿ ಸದಸ್ಯರೆನ್ನದೆ ಪ್ರಕಾಶ ಮಿರ್ಜಿ ಅವರನ್ನು ಪಿಎಸ್‌ಐ ಚೌರ್ ಮೈಮೇಲಿನ ಬಟ್ಟೆ ಹಿಡಿದು ಗಾಂಧಿ ಚೌಕ್‌ವರೆಗೆ ಎಳೆದುಕೊಂಡು ಹೋಗಿ ಹೊಡೆದಿದ್ದಾರೆ. ಸಂಚಾರಿ ಎಎಸ್‌ಐ ಕೇಶ್ವಾಪುರ ಹಾಗೂ ಹಿರಿಯ ಪೊಲೀಸ್ ಸಿಬ್ಬಂದಿಯೊಬ್ಬರು ಲಾಠಿಯಿಂದ ಥಳಿಸಿದ್ದಾರೆ. ಬಳಿಕ ಠಾಣೆಗೆ ಕರೆತಂದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇದರಿಂದ ಕಾಲಿಗೆ ಬಲವಾದ ಪೆಟ್ಟು ಬಿದ್ದಿದೆ ಎಂದು ಮಿರ್ಜಿ ಆರೋಪಿಸಿದ್ದಾರೆ.

ಪೊಲೀಸರ ವಿರುದ್ಧ ಆಕ್ರೋಶ
ಮಾಸ್ಕ್ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರ ನಡೆಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಕಳೆದೆರೆಡು ದಿನಗಳ ಹಿಂದೆ ಮಹಾತ್ಮ ಗಾಂಧಿ ವೃತ್ತದಲ್ಲಿ ಸಾರ್ವಜನಿಕರು ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದರು. ಸರ್ಕಾರದ ಆದೇಶಾನುಸಾರ 1000 ರೂ. ದಂಡ ವಿಧಿಸಲು ಮುಂದಾದ ಪೊಲೀಸರಿಗೆ ಸಾರ್ವಜನಿಕರು ತರಾಟೆಗೆ ತೆಗೆದುಕೊಂಡರಲ್ಲದೆ ನಡುರಸ್ತೆಯಲ್ಲೇ ಪ್ರತಿಭಟನೆಗೆ ಮುಂದಾದರು. ಬಳಿಕ ಸಂಚಾರಿ ಪಿಎಸ್‌ಐ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಪೊಲೀಸರು ಜಾಗೃತಿ ಮೂಡಿಸುವುದಕ್ಕಿಂತ ಹೆಚ್ಚಾಗಿ ದಂಡಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಮಾಸ್ಕ್ ಹಾಕುವುದು ಕಡ್ಡಾಯವಾದರೂ ಏಕಾಏಕಿ 1000 ರೂ.ದಂಡ ಕೇಳಿದರೆ ಎಲ್ಲಿಂದ ತರೋದು. ಅದೂ ಅಲ್ಲದೆ, ಕೋರ್ಟ್‌ಗೆ ಹೋಗಿ ಕಟ್ಟುವುದಾಗಿ ಹೇಳಿದರೂ ಪೊಲೀಸರು ಕೇಳಲ್ಲ. ಎಲ್ಲರೂ ಹಣ ಇಟ್ಟುಕೊಂಡು ತಿರುಗಲು ಸಾಧ್ಯವೇ? ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಇದೀಗ ಮಹಾನಗರ ಪಾಲಿಕೆ ಸಿಬ್ಬಂದಿಗೂ ದಂಡ ವಿಧಿಸುವ ಅಧಿಕಾರ ನೀಡಿದ್ದರಿಂದ ಜಗಳದ ಪ್ರಮಾಣವೂ ಹೆಚ್ಚಾಗುತ್ತಿದೆ.

ಎಸ್‌ಪಿ ನಿರುತ್ತರ
ಪಾಲಿಕೆ ಮಾಜಿ ಸದಸ್ಯ ಪ್ರಕಾಶ ಮಿರ್ಜಿ ಅವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧೀಕ್ಷಕ ಅನುಪಮ್ ಅಗರವಾಲ್ ಅವರನ್ನು ಸಂಪರ್ಕಿಸಲಾಗಿ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ಪೊಲೀಸ್ ಸಿಬ್ಬಂದಿ ದೌರ್ಜನ್ಯದ ಬಗ್ಗೆ ಮಿರ್ಜಿ ಅವರು ಮುಖ್ಯಮಂತ್ರಿ ಯಡಿಯೂರಪ್ಪ, ಐಜಿಪಿ ಸೇರಿ ಸರ್ವರಿಗೂ ವಿಡಿಯೋ ಧ್ವನಿಸುರುಳಿ ಮೂಲಕ ದೂರು ನೀಡಿದ್ದಾರೆ. ಈ ಬಗ್ಗೆ ಮೇಲಧಿಕಾರಿಗಳಿಂದ ಏನಾದರೂ ಸೂಚನೆ ನೀಡಿದ್ದಾರೆಯೇ? ಸಿಬ್ಬಂದಿ ವರ್ತನೆ ಸರಿಯೇ? ಪ್ರಕರಣದಲ್ಲಿ ಯಾರದು ತಪ್ಪು? ಯಾರದು ಸರಿ? ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಎಸ್‌ಪಿ ಅಗರವಾಲ್ ಅವರನ್ನು ‘ವಿಜಯವಾಣಿ’ ಸಂಪರ್ಕಿಸಿದಾಗ ಆನಂತರ ಪ್ರತಿಕ್ರಿಯಿಸುವುದಾಗಿ ಹೇಳಿದರು ವಿನಾ ಅವರಿಂದ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net