5ರಿಂದ ಮಹಿಳಾ ವಿವಿಯಲ್ಲಿ ಸಾಂಸ್ಕೃತಿಕ ಹಬ್ಬ

Mhila VV
Published on

ವಿಜಯಪುರ: ಇಲ್ಲಿನ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಅಹಲ್ಯಾಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಾ. 5ರಿಂದ 8 ರವರೆಗೆ ‘ಮಹಿಳಾ ಸಾಂಸ್ಕೃತಿಕ ಹಬ್ಬ-2021 ಹಮ್ಮಿಕೊಳ್ಳಲಾಗಿದೆ ಎಂದು ಪ್ರೊ. ವಿಜಯಾ ಕೋರಿಶೆಟ್ಟಿ ತಿಳಿಸಿದ್ದಾರೆ.

ಮ್ಯಾರಾಥಾನ್, ಯೋಗ ತರಬೇತಿ, ಸೈಕಲ್ ಜಾಥಾ, ಮಹಿಳಾ ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆ ಮತ್ತು ಆಹಾರ ಮೇಳ, ಸಮಗ್ರ ಕೃಷಿ ಕೌಶಲ ತರಬೇತಿ ಹಾಗೂ ಕಾರ್ಯಾಗಾರ, ಪೋಸ್ಟರ್ ಮೇಕಿಂಗ್ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಮಹಿಳಾ ಆರೋಗ್ಯ ಉಪನ್ಯಾಸ, ವಿಡಿಯೋ ಮೇಕಿಂಗ್ ಸ್ಪರ್ಧೆ, ಕವಿಗೋಷ್ಠಿ, ಆರೋಗ್ಯ ತಪಾಸಣೆ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಮಾ. 5ರಂದು ಬೆಳಗ್ಗೆ 6 ಗಂಟೆಗೆ ವಿಜಯಪುರ ನಗರದ ನಾಲ್ಕು ಕಡೆಗಳಿಂದ ಆರಂಭವಾಗುವ ಮ್ಯಾರಾಥಾನ್ ಗಾಂಧಿ ಚೌಕ್‌ನಲ್ಲಿ ಸಮಾರೋಪಗೊಳ್ಳಲಿದೆ. 6ರಂದು ಮಹಿಳಾ ವಿವಿಯ ಜ್ಞಾನಶಕ್ತಿ ಆವರಣದಲ್ಲಿ ವಿವಿ ವಿಶ್ರಾಂತ ಕುಲಪತಿ ಪ್ರೊ. ಮೀನಾ ಆರ್. ಚಂದಾವರಕರ ಅವರು ಮಹಿಳಾ ಸಾಂಸ್ಕೃತಿಕ ಹಬ್ಬ-2021 ಉದ್ಘಾಟಿಸುವರು. ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ ಬಿ.ಕೆ. ತುಳಸಿಮಾಲಾ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.

8ರಂದು ನಡೆಯುವ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಹೆಣ್ಣು ಮಕ್ಕಳ ಅನೈತಿಕ ಸಾಗಣೆ ತಡೆಗಟ್ಟುವಿಕೆ ಕುರಿತು ರಾಷ್ಟ್ರೀಯ ಕಾರ್ಯಾಗಾರದಲ್ಲಿ ಶಿವಮೊಗ್ಗದ ಪ್ರಾಂಶುಪಾಲರಾದ ಡಾ. ಸಂಧ್ಯಾ ಕಾವೇರಿ ಉಪನ್ಯಾಸ ಮಾಡಲಿದ್ದಾರೆ. ಜಿ.ಪಂ. ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಕುಲಸಚಿವೆ ಪ್ರೊ. ಆರ್. ಸುನಂದಮ್ಮ, ಮೌಲ್ಯಮಾಪನ ಕುಲಸಚಿವ ಪ್ರೊ. ಪಿ.ಜಿ. ತಡಸದ ಅವರು ಉಪಸ್ಥಿತರಿರಲಿದ್ದಾರೆ ಎಂದು ವಿವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net