ಪ್ಲಾಸ್ಮಾ ಥೆರಪಿ ಆರಂಭಿಸಲು ಆಗ್ರಹ

VMS 23-8
Published on

ವಿಜಯಪುರ: ವಿಜಯಪುರದಲ್ಲಿ ಪ್ಲಾಸ್ಮಾ ಥೆರಪಿ ಆರಂಭಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಮುಖಂಡ ಅಬ್ದುಲ್‌ಹಮೀದ್ ಮುಶ್ರಿಫ್ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ್ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ಕಾಂಗ್ರೆಸ್ ಮುಖಂಡ ಅಬ್ದುಲ್‌ಹಮೀದ್ ಮುಶ್ರಿಫ್ ಮಾತನಾಡಿ, ಜಿಲ್ಲೆಯಲ್ಲಿ ಕರೊನಾದಿಂದ ಮೃತಪಡುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಅದರ ನಿಯಂತ್ರಣಕ್ಕಾಗಿ ಕರೊನಾದಿಂದ ಗುಣಮುಖರಾದವರು ಸ್ವಯಂ ಪ್ರೇರಿತರಾಗಿ ತಮ್ಮ ಪ್ಲಾಸ್ಮಾ ನೀಡಲು ಮುಂದಾಗುತ್ತಿದ್ದಾರೆ. ಅವರಿಂದ ಪ್ಲಾಸ್ಮಾ ಪಡೆದು ಸಾವಿನ ಸಂಖ್ಯೆ ನಿಯಂತ್ರಿಸಬಹುದು ಎಂದು ಹೇಳಿದರು.
ಉಸಿರಾಟ ಹಾಗೂ ತೀವ್ರ ಜ್ವರದಿಂದ ಬಳಲುತ್ತಿರುವ ರೋಗಿಗಳನ್ನು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿಲ್ಲ ಮತ್ತು ಕೋವಿಡ್ ಆಸ್ಪತ್ರೆಗಳಲ್ಲಿ ಇನ್ನಷ್ಟು ಬೆಡ್‌ಗಳ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿದರು.
ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ್ ಮನವಿ ಸ್ವೀಕರಿಸಿ, ಪ್ಲಾಸ್ಮಾ ಥೆರಪಿ ಪ್ರಾರಂಭಿಸುವ ಬಗ್ಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಬೆಡ್‌ಗಳ ಕೊರತೆ ನೀಗಿಸುವ ನಿಟ್ಟಿನಲ್ಲಿ ತಕ್ಷಣ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.
ಯಾವುದೇ ರೋಗಿಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಉಪಚಾರ ನೀಡಲು ಹಿಂದೆಟುಹಾಕುತ್ತಿರುವ ವಿಷಯ ನೇರವಾಗಿ ನನ್ನ ಗಮನಕ್ಕೆ ತಂದರೆ ತಕ್ಷಣ ವ್ಯವಸ್ಥೆ ಮಾಡುತ್ತೇನೆಂದು ಅವರು ತಿಳಿಸಿದರು.
ಅಬ್ದುಲ್‌ರಜಾಕ್ ಹೊರ್ತಿ, ಕೈಸರ್ ಇನಾಮದಾರ್, ಈರಪ್ಪ ಕುಂಬಾರ, ಇರ್ಫಾನ್ ಶೇಖ್, ಜಯೀಮ್ ಇನಾಮದಾರ್, ಮನ್ಸೂರ್ ಇನಾಮದಾರ್, ಅಲ್ತಾಫ್ ಬಾಂಬೆವಾಲೆ, ಅರ್ಜುನ ಕಾಳೆ, ಎಂ.ಬಿ. ದರ್ಗಾ, ಮನೋಜ ಉತ್ನಾಳ, ಅಲ್ಲಾಬಕ್ಷ ಮುಲ್ಲಾ, ಹಾಜಿ ನದಾಫ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net