ಮಹಾತ್ಮ ಗಾಂಧೀಜಿ ಹೋರಾಟದ ಜೀವನ ಅನಾವರಣ

vjp-28-1 (1)
Published on

ವಿಜಯಪುರ: ನಗರದ ಡಾ.ಬಿ.ಆರ್. ಅಂಬೇಡ್ಕರ್ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಹಾತ್ಮ ಗಾಂಧೀಜಿ ಜೀವನ ಹಾಗೂ ಸ್ವಾತಂತ್ರ್ಯ ಪೂರ್ವದಲ್ಲಿನ ಅಪರೂಪದ ಸಂಗತಿಗಳ ಬಗ್ಗೆ ವಿಶೇಷ ಛಾಯಾಚಿತ್ರ ಪ್ರದರ್ಶನ ಹಮ್ಮಿಕೊಳ್ಳಲಾಯಿತು.

ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಹಮ್ಮಿಕೊಂಡ ಈ ಛಾಯಾಚಿತ್ರ ಪ್ರದರ್ಶನದಲ್ಲಿ ಗುಜರಾತ್‌ನ ಪೋರ್ ಬಂದರ್‌ನಲ್ಲಿ ಹುಟ್ಟಿದ ಮೋಹನದಾಸ ಕರಮಚಂದ ಗಾಂಧೀಜಿ ವಿದೇಶದಲ್ಲಿ ಕಾನೂನು ಉನ್ನತ ಪದವಿಯನ್ನು ಪಡೆದು ದಕ್ಷಿಣ ಆಫ್ರಿಕಾದಲ್ಲಿ ವಕೀಲಿ ವೃತ್ತಿ ನಡೆಸಲು ಹೋದ ಅಪರೂಪದ ಚಿತ್ರಗಳನ್ನು ಪ್ರದರ್ಶಿಸಲಾಯಿತು.

ವಕೀಲಿ ವೃತ್ತಿಯಲ್ಲಿ ಒಳ್ಳೆಯ ಹೆಸರು ಪಡೆದ ಮೋಹನದಾಸ ಕರಮಚಂದ ಗಾಂಧೀಜಿ ದಕ್ಷಿಣ ಆಫ್ರಿಕಾದ ಭಾರತೀಯ ಸಮುದಾಯದ ಗಣ್ಯರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡರು. ದಕ್ಷಿಣ ಆಫ್ರಿಕಾದಲ್ಲಿ ಭಾರತೀಯರಿಗೆ ಆಗುತ್ತಿದ್ದ ಅನನುಕೂಲತೆಗಳನ್ನು ಸರಿಪಡಿಸಲು ಹೋರಾಟದ ಮಾರ್ಗವನ್ನು ಕೈಗೆತ್ತಿಕೊಂಡರು. ಅದಕ್ಕೆ ರಾಷ್ಟ್ರ ನೇತಾರ ಗೋಪಾಲಕೃಷ್ಣ ಗೋಖಲೆಯವರು ಪ್ರೇರಣೆ ನೀಡಿರುವ ಚಿತ್ರಗಳು ಗಮನ ಸೆಳೆದವು.

1924ರ ಐತಿಹಾಸಿಕ ಬೆಳಗಾವಿ ಕಾಂಗ್ರೆಸ್ ಅಧಿವೇಶನ ಗಾಂಧೀಜಿ ಅಧ್ಯಕ್ಷತೆ ವಹಿಸಿದ ಏಕೈಕ ಕಾಂಗ್ರೆಸ್ ಅಧಿವೇಶನದ ಭಾವಚಿತ್ರಗಳು,ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದು ಸ್ವಾತಂತ್ರೃಕ್ಕಾಗಿ ದೇಶಾದ್ಯಂತ ನಡೆಸಿದ ಚಳವಳಿಗಳು, ಗ್ರಾಮಸ್ವರಾಜ್ಯ, ಕುಷ್ಠರೋಗ ನಿವಾರಣೆ, ಸ್ವದೇಶಿ ಆಂದೋಲನ, ಹೀಗೆ ಹಲವಾರು ಗಾಂಧಿ ಪ್ರಣೀತ ಕಾರ್ಯಕ್ರಮಗಳ ಛಾಯಾಚಿತ್ರಗಳನ್ನು ಯುವಜನರು ಕಣ್ತುಂಬಿಕೊಂಡರು.

ಬೆಂಗಳೂರಿನ ರಾಷ್ಟ್ರೀಯ ಹೈನುಗಾರಿಕೆ ಸಂಸ್ಥೆಯಲ್ಲಿ ಮಹಾತ್ಮ ಗಾಂಧೀಜಿಯವರು ಪಶುಪಾಲನೆ ಕುರಿತ ಮಾಹಿತಿ ಪಡೆದಿದ್ದು, 1932 ರಲ್ಲಿ ಆರಂಭಿಸಿದ ಹರಿಜನ ನಿಧಿ ಪ್ರವಾಸದಲ್ಲಿ ಸಂಗ್ರಹವಾದ ಹಣವನ್ನು ಹರಿಜನ ಅಭಿವೃದ್ಧಿ ಕಾರ್ಯಗಳಿಗಾಗಿ ಉಪಯೋಗಿಸಿದ್ದು, ಹರಿಜನರ ಏಳಿಗೆಗಾಗಿ ಕರ್ನಾಟಕದಲ್ಲಿ ಎರಡು ಬಾರಿ ನಿಧಿ ಪ್ರವಾಸ ಕೈಗೊಂಡಿದ್ದು, ವಿಜಯಪುರದಲ್ಲಿ ಪ್ರವಾಸ ನಡೆಸಿದ ಛಾಯಾಚಿತ್ರಗಳು ಗಾಂಧೀಜಿ ಹೋರಾಟದ ಬದುಕನ್ನು ಅನಾವರಣಗೊಳಿಸಿದವು.

ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ಎಸ್.ಜಿ . ಲೋಣಿ, ಸೈಕ್ಲಿಂಗ್ ಕ್ರೀಡಾಪಟುಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಛಾಯಾಚಿತ್ರ ವೀಕ್ಷಿಸಿ ಸಂತಸವ್ಯಕ್ತಪಡಿಸಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಸುಲೈಮಾನ ನದಾಫ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net