

ವಿಜಯಪುರ: ಮಹಿಳೆ ಹಾಗೂ ಯುವತಿಯರ ರಕ್ಷಣೆಗಾಗಿ ನೇಮಕಗೊಂಡ ಪೊಲೀಸ್ ಸಿಬ್ಬಂದಿಗೆ ಸೋಮವಾರ ವಿಶೇಷ ಕೆಂಪು ವರ್ಣದ ಗ್ಯ್ಲಾಮರ್ ಬೈಕ್‌ಗಳನ್ನು ನೀಡಲಾಯಿತು. ನಿರ್ಭಯಾ ಯೋಜನೆಯಡಿ ಒಟ್ಟು 26 ಬೈಕ್‌ಗಳಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕ ಅನುಪಮ ಅಗರವಾಲ್ ಚಾಲನೆ ನೀಡಿದರು. ನೂತನ ಬೈಕ್‌ಗಳು ಮಹಿಳೆ, ಯುವತಿಯರ ರಕ್ಷಣೆಗಾಗಿ ಅಣಿಯಾಗುತ್ತಿದ್ದು, ಮಹಿಳೆ ಮೇಲಿನ ದೌರ್ಜನ್ಯ, ಮಹಿಳಾ ಅಪಹರಣ, ಮಾನವ ಕಳ್ಳ ಸಾಗಣೆ ಮೊದಲಾದ ಮಾಹಿತಿಗಳು ಬಂದರೆ ತಕ್ಷಣವೇ ಈ ಬೈಕ್‌ನಲ್ಲಿ ಪೊಲೀಸರ ತಂಡ ರಕ್ಷಣೆಗೆ ದಾಖಲಿಸಲಿದೆ ಎಂದು ಎಸ್‌ಪಿ ಅಗರವಾಲ್ ತಿಳಿಸಿದರು. ಮಹಿಳೆ, ಯುವತಿಯರ ರಕ್ಷಣೆ ಇಲಾಖೆ ಹೊಣೆಯಾಗಿದೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಹಲವಾರು ದಿಟ್ಟ ಕ್ರಮಗಳನ್ನು ಕೈಗೊಂಡಿದೆ. ಕೇಂದ್ರ ಸರ್ಕಾರ ಯುವತಿ-ಮಹಿಳೆಯರ ರಕ್ಷಣೆಗಾಗಿ ನಿರ್ಭಯಾ ನಿಧಿ ಸ್ಥಾಪಿಸಿದೆ. ಈ ನಿಟ್ಟಿನಲ್ಲಿ ವಿಜಯಪುರ ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗೆ ಒಂದರಂತೆ ಈ ವಿಶೇಷ ಬೈಕ್‌ಗಳನ್ನು ನೀಡಲಾಗಿದೆ ಎಂದು ವಿವರಿಸಿದರು. ಪ್ರಸ್ತುತ 26 ಬೈಕ್‌ಗಳು ಬಂದಿವೆ. ಅವಶ್ಯಕತೆ ಬಿದ್ದರೆ ಬಜೆಟ್ ಆಧರಿಸಿ ಸರ್ಕಾರ ಇನ್ನೂ ಹೆಚ್ಚಿನ ಬೈಕ್‌ಗಳನ್ನು ನೀಡಲಿದೆ ಎಂದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಾ.ರಾಮ ಅರಿಸಿದ್ಧಿ, ಡಿವೈಎಸ್‌ಪಿ ಕೆ.ಸಿ. ಲಕ್ಷ್ಮಿನಾರಾಯಣ, ಸಿಪಿಐ ರವೀಂದ್ರ ನಾಯ್ಕೋಡಿ, ಬಸವರಾಜ ಮೂಕರ್ತಿಹಾಳ, ಸಂಗಮೇಶ ಪಾಲಭಾವಿ ಮತ್ತಿತರರಿದ್ದರು.
ಸಂಚಾರಿ ಪೊಲೀಸರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಕುರ್ಚಿ ಹಾಗೂ ನೆರಳು ಒದಗಿಸುವ ವಿಶೇಷ ಬ್ಯಾರಿಕೇಡ್ ಮಾದರಿಗಳನ್ನು ನಗರದ ಪ್ರಮುಖ ರಸ್ತೆಗಳಲ್ಲಿ ಇರಿಸಲಾಗುವುದು ಎಂದು ಎಸ್‌ಪಿ ಅನುಪಮ ಅಗರವಾಲ್ ತಿಳಿಸಿದರು.
ಸಂಚಾರಿ ಪೊಲೀಸರು ಸಂದಿಗ್ಧ ಪರಿಸ್ಥಿತಿಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಬಿಸಿಲು, ಮಳೆ ಲೆಕ್ಕಿಸದೆ ಕಾರ್ಯನಿರ್ವಹಿಸಬೇಕಾಗುತ್ತದೆ. ಬೇಸಿಗೆಯಲ್ಲಿ ನೆರಳು ಸಹ ಸಿಗುವುದಿಲ್ಲ. ಈ ಹಿನ್ನೆಲೆಯಲ್ಲಿ ಕುರ್ಚಿ, ಮೊಬೈಲ್ ಚಾರ್ಜರ್ ಮೊದಲಾದ ಉಪಕರಣಗಳನ್ನು ಅಳವಡಿಸಿದ ಮೂವಿಂಗ್ ವಿಶೇಷ ಬ್ಯಾರಿಕೇಡ್ ಸ್ಥಾಪಿಸಲಾಗುತ್ತದೆ. ಈ ಬ್ಯಾರಿಕೇಡ್ ಮೇಲ್ಭಾಗದಲ್ಲಿ ಸೋಲಾರ್ ಪೆನಲ್ ಸಹ ಅಳವಡಿಸಲಾಗುತ್ತಿದೆ ಎಂದು ವಿವರಿಸಿದರು.