

ಪರಶುರಾಮ ಭಾಸಗಿ
ವಿಜಯಪುರ: ಒಂದೆಡೆ ಕೆಲಸ ಕೊಡಿ ಎಂದು ಅಂಗಲಾಚುವ ಕಾರ್ಮಿಕರು, ಇನ್ನೊಂದೆಡೆ ಕಾರ್ಮಿಕರಿಲ್ಲದೇ ಬಳಲುತ್ತಿರುವ ಕಾಮಗಾರಿಗಳು ! ಇದು ಕರೊನಾ ಮಹಾಮಾರಿ ತಂದ ಸಂದಿಗ್ಧತೆ.
ನೆರೆಯ ರಾಜ್ಯಗಳಿಗೆ ಕೆಲಸವರಿಸಿ ಗುಳೆ ಹೋಗಿದ್ದ ಅಂದಾಜು 12575 ಕಾರ್ಮಿಕರು ತವರಿಗೆ ಮರಳಿದ್ದಾರೆ. ಅವರೆಲ್ಲರನ್ನೂ ಸಾಂಸ್ಥಿಕ ಬಂಧನದಲ್ಲಿರಿಸಲಾಗಿದೆ. ಹೀಗಾಗಿ ದುಡಿಯುವ ಕೈಗಳೀಗ ಕೆಲಸವಿಲ್ಲದೇ ಮುಂದೇನಪ್ಪ ಗತಿ ಎಂದು ತಲೆ ಮೇಲೆ ಕೈಹೊತ್ತು ಕುಳಿತಿವೆ. ವ್ಯತಿರಿಕ್ತವಾಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅರ್ಧಕ್ಕೆ ನಿಂತ 85 ಕಾಮಗಾರಿಗಳನ್ನು ಪುನಾರಂಭಿಸಬೇಕೆಂದರೆ ಕಾರ್ಮಿಕರೇ ಸಿಗುತ್ತಿಲ್ಲ.
ಕಾಮಗಾರಿ ವಿವರ
14ನೇ ಜಿಬಿಜಿ ಅನುದಾನದಡಿ 457.88 ಲಕ್ಷ ರೂ. ವೆಚ್ಚದ 29 ಕಾಮಗಾರಿ, 14ನೇ ಜಿಪಿಜಿ ಅನುದಾನದಡಿ 167.70 ಲಕ್ಷ ರೂ. ವೆಚ್ಚದ 14 ಕಾಮಗಾರಿ, ಎಸ್‌ಎಫ್‌ಸಿ ಶೇ.24.10 ಅನುದಾನದಡಿ 119.74 ಲಕ್ಷ ರೂ. ವೆಚ್ಚದ 10, ನಗರೋತ್ಥಾನ ಹಂತ 3 ರಡಿ 1661.74 ಲಕ್ಷ ರೂ. ವೆಚ್ಚದ 8, ಗುಲಬರ್ಗಾ ಕ್ಯಾಬಿನೆಟ್‌ನಿಂದ ಮಂಜೂರಿಸಲಾದ 1675.32 ರೂ. ವೆಚ್ಚದ 5, ಪಿಕೆಜಿಬಿವೈ ಅನುದಾನದಡಿ 465 ಲಕ್ಷ ರೂ. ವೆಚ್ಚದ 1, ಎಸ್‌ಎಫ್‌ಸಿ ವಿಶೇಷ ಅನುದಾನದಡಿ 1000.00 ಲಕ್ಷ ರೂ. ವೆಚ್ಚದ 2, ಆರ್‌ಓಬಿಯ 279.75, ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ 26.22 ಲಕ್ಷ ರೂ. ವೆಚ್ಚದ 3, ಕೆಎಚ್‌ಬಿಯಿಂದ 107.11 ಲಕ್ಷ ರೂ. ವೆಚ್ಚದ 3, ಎಸ್‌ಸಿಪಿ-ಟಿಎಸ್‌ಪಿ ಅಡಿ 720 ಲಕ್ಷ ರೂ. ವೆಚ್ಚದ 2, ಕೆರೆ ಅಭಿವೃದ್ಧಿ ಯೋಜನೆಯಡಿ 913 ಲಕ್ಷ ರೂ. ವೆಚ್ಚದ 1 ಸೇರಿ ಒಟ್ಟು 7593.46 ಲಕ್ಷ ರೂ. ವೆಚ್ಚದಲ್ಲಿ 85 ಕಾಮಗಾರಿ ಕೈಗೊಳ್ಳಲಾಗಿದೆ.
ಒಂದು ಕಾಮಗಾರಿ ಆರಂಭ
85 ಕಾಮಗಾರಿ ಚಾಲ್ತಿಯಲ್ಲಿರುವಾಗಲೇ ಕರೊನಾ ಒಕ್ಕರಿಸಿಕೊಂಡಿದ್ದು ಇದೀಗ ಪುನಾರಂಭಕ್ಕೂ ವಿಘ್ನ ಆವರಿಸಿದೆ. ಸದ್ಯಕ್ಕೆ ಮಹಾತ್ಮ ಗಾಂಧಿ ವೃತ್ತದಿಂದ ಇಂಡಿ ರಸ್ತೆವರೆಗಿನ ಕಾಮಗಾರಿ ಆರಂಭಿಸಲಾಗಿದೆ. ಇನ್ನುಳಿದ ಕಾಮಗಾರಿಗಳಿಗೆ ಕಾರ್ಮಿಕರು ಸಿಗದ ಸ್ಥಿತಿ. ಹಳ್ಳಿ ಕಾರ್ಮಿಕರು ನಗರಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ನಗರಕ್ಕೆ ಕೆಲಸಕ್ಕೆ ಹೋದರೆ ಮರಳಿ ಊರಲ್ಲಿ ಸೇರಿಸೋದಿಲ್ಲ ಎಂಬ ಆತಂಕ ಕಾರ್ಮಿಕರನ್ನು ಕಾಡುತ್ತಿದೆ. ಇನ್ನೊಂದೆಡೆ ಕೆಲಸವಿಲ್ಲದೇ ಜೀವನ ಸಾಗಿಸುವುದೂ ದುಸ್ತರವಾಗುತ್ತಿದೆ.
ಒಟ್ಟಿನಲ್ಲಿ ‘ಹಲ್ಲಿದ್ದರೆ ಕಡಲೆ ಇಲ್ಲ, ಕಡಲೆ ಇದ್ದರೆ ಹಲ್ಲಿಲ್ಲ’ ಎಂಬ ಸ್ಥಿತಿ ನಿರ್ಮಾಣವಾಗಿದ್ದು ಕಾರ್ಮಿಕರಿಲ್ಲದ ಕಾಮಗಾರಿಗಳು, ಕೆಲಸವಿಲ್ಲದ ಕೂಲಿ ಕಾರ್ಮಿಕರು ಕರೊನಾಗೆ ಹಿಡಿಶಾಪ ಹಾಕುತ್ತಿರುವುದಂತೂ ನಿಜ.
ಮೊದಲ ಹಂತವಾಗಿ ಮಹಾತ್ಮ ಗಾಂಧಿ ವೃತ್ತದಿಂದ ಇಂಡಿ ರಸ್ತೆವರೆಗಿನ ಕಾಮಗಾರಿ ಆರಂಭಿಸಲಾಗಿದೆ. ಆದರೆ, ಕಾರ್ಮಿಕರೇ ಸಿಗುತ್ತಿಲ್ಲ. ಸೂಕ್ತ ಸೌಲಭ್ಯ ಕಲ್ಪಿಸುವ ಭರವಸೆ ನೀಡಿದರೂ ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ. ಶೀಘ್ರದಲ್ಲೇ ಎಲ್ಲ ಕಾಮಗಾರಿಗಳು ಪುನಾರಂಭಗೊಳ್ಳಲಿವೆ.
ಶ್ರೀಹರ್ಷಾ ಶೆಟ್ಟಿ, ಆಯುಕ್ತರು ಮಹಾನಗರ ಪಾಲಿಕೆ
ಅರ್ಧಕ್ಕೆ ನಿಂತ ಕಾಮಗಾರಿಗಳನ್ನು ತ್ವರಿತವಾಗಿ ಆರಂಭಿಸಲು ಇದು ಸಕಾಲ. ವಾಹನ ಸಂಚಾರ, ವ್ಯಾಪಾರ ವಹಿವಾಟು ಮತ್ತು ಜನದಟ್ಟಣೆ ಕಡಿಮೆ ಇರುವ ಕಾರಣ ಸೂಕ್ತ ಮುಂಜಾಗ್ರತೆಯೊಂದಿಗೆ ಕಾಮಗಾರಿ ಪೂರ್ಣಗೊಳಿಸಬೇಕು.
ವಿರೂಪಾಕ್ಷಿ ಪಟ್ಟಣಶೆಟ್ಟಿ, ಸಾರ್ವಜನಿಕ