

ವಿಜಯಪುರ: ಸತತ ಎರಡು ಬಾರಿ ಕಾಯಕಲ್ಪ ಪ್ರಶಸ್ತಿಗೆ ಭಾಜನವಾಗಿರುವ ಜಿಲ್ಲಾ ಸರ್ಕಾರಿ ಆಸ್ಪತ್ರೆ ಈ ಬಾರಿ ರನ್ನರ್ ಅಪ್ ಆಗಿ ಹೊರಹೊಮ್ಮುವ ಮೂಲಕ ಮತ್ತೊಂದು ಹಿರಿಮೆಗೆ ಹೆಸರಾಗಿದೆ. 2019-20 ನೇ ಸಾಲಿನ ಕಾಯಕಲ್ಪ ಪ್ರಾಶಸ್ತಿಗೆ ಜಿಲ್ಲಾಸ್ಪತ್ರೆ ಆಯ್ಕೆಯಾಗಿದೆ.
ಕಳೆದ 2015-16 ಹಾಗೂ 2016-17ನೇ ಸಾಲಿನಲ್ಲಿ ಪ್ರಥಮ ಸ್ಥಾನ ಪಡೆದಿತ್ತು. ಬಳಿಕ 2018-19 ನೇ ಸಾಲಿನಲ್ಲಿ ಗುಣಮಟ್ಟದ ಸೇವೆಗೆ ನೀಡಲಾಗುವ ಎನ್‌ಕ್ಯೂಎಎಸ್ ಪ್ರಶಸ್ತಿಗೂ ಆಸ್ಪತ್ರೆ ಆಯ್ಕೆಯಾಗಿತ್ತು. ಆ ಮೂಲಕ ರಾಜ್ಯಕ್ಕೆ ಮಾದರಿಯಾಗಿತ್ತು.
ಇದೀಗ ಮತ್ತೊಮ್ಮೆ ಕಾಯಕಲ್ಪ ಪ್ರಶಸ್ತಿ ಪಡೆದಿದ್ದು ದ್ವಿತೀಯ ಸ್ಥಾನಕ್ಕೆ ನೀಡಲಾಗುವ 20 ಲಕ್ಷ ರೂ. ನಗದು ಹಾಗೂ ಪ್ರಮಾಣ ಪತ್ರ ತನ್ನದಾಗಿಸಿಕೊಂಡಿದೆ. ಸದರಿ ಮೊತ್ತದಲ್ಲಿ ಶೇ. 25ರಷ್ಟು ಸಿಬ್ಬಂದಿಗೆ ಪ್ರೋತ್ಸಾಹ ಧನ ನೀಡಲಾಗುವುದಲ್ಲದೇ ಇನ್ನುಳಿದ ಹಣವನ್ನು ಆಸ್ಪತ್ರೆ ಅಭಿವೃದ್ಧಿಗೆ ಬಳಸಿಕೊಳ್ಳಲಾಗುತ್ತದೆ.
ಪ್ರತೀ ವರ್ಷ ಸ್ವಚ್ಛತೆ ಹಾಗೂ ಗುಣಮಟ್ಟದ ಸೇವೆಗೆ ದೆಹಲಿಯಿಂದ ಈ ಪ್ರಶಸ್ತಿಗೆ ಆಸ್ಪತ್ರೆಗಳನ್ನು ಆಯ್ಕೆ ಮಾಡಲಾಗುತ್ತದೆ. ಎರಡು ಸುತ್ತಿನಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು ಮೊದಲ ಸುತ್ತಿನಲ್ಲಿ ಶೇ. 70ಕ್ಕಿಂತ ಅಧಿಕ ಅಂಕ ಪಡೆದ ಆಸ್ಪತ್ರೆಗಳನ್ನು ಗುರುತಿಸಲಾಗುತ್ತದೆ. ಅದರಲ್ಲಿ ಅತ್ಯುತ್ತಮ ಎರಡು ಆಸ್ಪತ್ರೆಗಳನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡಲಾಗುವುದು. ಆ ಪೈಕಿ ವಿಜಯಪುರ ಜಿಲ್ಲಾಸ್ಪತ್ರೆ ದ್ವಿತೀಯ ಸ್ಥಾನ ಪಡೆದಿದೆ. ಒಟ್ಟಿನಲ್ಲಿ ಸತತವಾಗಿ ಒಂದಿಲ್ಲಾ ಒಂದು ಪ್ರಶಸ್ತಿಗೆ ಆಯ್ಕೆಯಾಗುವ ಮೂಲಕ ಜಿಲ್ಲಾಸ್ಪತ್ರೆ ಇತರ ಜಿಲ್ಲೆಗಳಿಗೆ ಮಾದರಿಯಾಗಿದೆ.
ಕಾಯಕಲ್ಪ ಪ್ರಶಸ್ತಿಗೆ ಆಯ್ಕೆಯಾದ ಬಗ್ಗೆ ಸಂಜೆ 5ಕ್ಕೆ ಮಾಹಿತಿ ಲಭ್ಯವಾಯಿತು. ಪ್ರಶಸ್ತಿ ದೊರಕಿದ್ದು ಸಂತಸ ತಂದಿದೆ. ಇದರಲ್ಲಿ ಕಸಗುಡಿಸುವವರಿಂದ ಹಿಡಿದು ತಜ್ಞ ವೈದ್ಯರು ಸೇರಿ ಎಲ್ಲ ಸಿಬ್ಬಂದಿ ಶ್ರಮವಿದೆ. ಪ್ರಶಸ್ತಿ ನೀಡುವ ದಿನಾಂಕ ತಿಳಿಸಿಲ್ಲ. ದಿನ ನಿಗದಿಯಾಗುತ್ತಿದ್ದಂತೆ ಬೆಂಗಳೂರಿಗೆ ತೆರಳಿ ಪ್ರಶಸ್ತಿ ಪಡೆಯಲಾಗುವುದು.
ಡಾ. ಶರಣಪ್ಪ ಕಟ್ಟಿ, ಜಿಲ್ಲಾ ಶಸ್ತ್ರ ಚಿಕಿತ್ಸಕ