ಸಿರಿಧಾನ್ಯ ಬೆಳೆಯೇ ನಿಜವಾದ ಕಲ್ಪವೃಕ್ಷ

Rajshekhar
Published on

ವಿಜಯಪುರ: ಸಿರಿಧಾನ್ಯ ಬಳಕೆಯಿಂದ ಆರೋಗ್ಯ ಸಮೃದ್ಧಿ ಸಾಧ್ಯ. ಸಿರಿಧಾನ್ಯಗಳು ದೇಹದ ಸಮತೋಲನ ಕಾಪಾಡಿಕೊಳ್ಳುವ ಶ್ರೇಷ್ಠ ಆಹಾರ ಧಾನ್ಯಗಳು. ಆರೋಗ್ಯ ದೃಷ್ಟಿಯಿಂದ ನಿಜವಾದ ಕಲ್ಪವೃಕ್ಷವೆಂದರೆ ಸಿರಿಧಾನ್ಯ ಬೆಳೆ ಎಂದು ಪ್ರಗತಿಪರ ರೈತ ರಾಜಶೇಖರ ನಿಂಬರಗಿ ಹೇಳಿದರು.

ನಗರ ಹೊರವಲಯದ ಕೃಷಿ ಮಹಾವಿದ್ಯಾಲಯ (ಹಿಟ್ನಳ್ಳಿ ಫಾರ್ಮ್)ದಲ್ಲಿ ಧಾರವಾಡ ಕೃಷಿ ವಿವಿ ಸಹಯೋಗದಲ್ಲಿ ಆಯೋಜಿಸಿರುವ ಕೃಷಿ ಮೇಳ-2020ರ ಎರಡನೇ ದಿನವಾದ ಭಾನುವಾರದಂದು ಹಮ್ಮಿಕೊಂಡಿದ್ದ ‘ಸಿರಿಧಾನ್ಯ ಬಳಸಿ ಆರೋಗ್ಯ ವೃದ್ಧಿಸಿ’ ಎಂಬ ಗೋಷ್ಠಿಯಲ್ಲಿ ಅವರು ಉಪನ್ಯಾಸ ನೀಡಿದರು.

ಸಿರಿಧಾನ್ಯ ಬೆಳೆಯಲು ಖರ್ಚು ಕಮ್ಮಿ. ಲಾಭ ಜಾಸ್ತಿ. ಬಿತ್ತನೆ ಬೀಜಕ್ಕೆ ದುಡ್ಡು ಖರ್ಚು ಮಾಡುವ ಪ್ರಮೇಯವೇ ಬರಲ್ಲ. ಕೇವಲ ಮೂರು ತಿಂಗಳಲ್ಲಿ ಕಟಾವಿಗೆ ಬರುತ್ತದೆ ಎಂದರು.

ಸಿರಿಧಾನ್ಯದ ಹುಲ್ಲು ತಿನ್ನುವ ಜಾನುವಾರಿಗೂ ರೋಗ ಬರಲ್ಲ. ಹಾಲು ಹೆಚ್ಚಿಗೆ ಕೊಡುತ್ತವೆ. ಸಿರಿಧಾನ್ಯ ಬೆಳೆಗಳೇ ನಿಜವಾದ ಕಲ್ಪವೃಕ್ಷ. ಬೇಸಿಗೆಯಲ್ಲಿ ಸಿರಿಧಾನ್ಯ ಆಹಾರ ದೇಹದ ಸಮತೋಲನ ಕಾಯ್ದುಕೊಳ್ಳುತ್ತದೆ ಎಂದರು.

ಆತ್ಮಯೋಜನೆ ಸಂಯೋಜಕ ಪಟ್ಟಣಶೆಟ್ಟಿ ಮಾತನಾಡಿ, ಸರ್ಕಾರ ರೈತ ಸಿರಿ ಯೋಜನೆಯಡಿ ರೈತರಿಗೆ ಸಿರಿಧಾನ್ಯ ಬೆಳೆಯಲು ಸಹಾಯಧನ ನೀಡುತ್ತಿದೆ. ಸಿರಿ ಧಾನ್ಯಗಳಲ್ಲಿ ಹೆಚ್ಚಿನ ಪೌಷ್ಟಿಕಾಂಶ ಇರಲಿದೆ. ಹೀಗಾಗಿ ಸರ್ಕಾರ ಮಕ್ಕಳ ಮಧ್ಯಾಹ್ನದ ಬಿಸಿಊಟಕ್ಕೆ ಸಿರಿಧಾನ್ಯ ಬಳಸಲು ಮುಂದಾಗಿದೆ ಎಂದರು.

ಸಿರಿಧಾನ್ಯಗಳ ಸಂಸ್ಕರಣ ಸಮಸ್ಯೆ ಇದೆ. ಅಕ್ಕಿಯಂತೆ ಬಹಳ ದಿನ ಈ ಸಿರಿಧಾನ್ಯಗಳನ್ನು ಸಂಸ್ಕರಿಸಿ ಇಡುವಂತಿಲ್ಲ. ವೈದ್ಯರು ಸಿರಿಧಾನ್ಯಗಳ ಬಳಕೆಗೆ ಸಲಹೆ ನೀಡುತ್ತಿದ್ದಾರೆ. ಡಯಾಬಿಟಿಸ್ ತಡೆಯಲು ಸಿರಿಧಾನ್ಯ ಬಳಕೆ ಅವಶ್ಯ ಎಂದರು.

ಪ್ರಗತಿಪರ ರೈತ ಮುದ್ದುಗೌಡ ಪಾಟೀಲ ಮಾತನಾಡಿ, ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಸಿರಿಧಾನ್ಯ ಬಳಸಿ ಮತ್ತು ಬೆಳೆಸಿ. ಗುಣಮಟ್ಟದ ಸಿರಿಧಾನ್ಯ ಬೆಳೆದು ಸಮಾಜಕ್ಕೆ ನೀಡಬೇಕು. ಅಕ್ಕಿ ಉಂಬುವನು ಹಕ್ಕಿಯಂತೆ ಹಾರುವನು ಎಂದು ಸರ್ವಜ್ಞ ಹೇಳಿದ್ದಾನೆ. ಹೀಗಾಗಿ ಸಿರಿಧಾನ್ಯಗಳಾದ ನವಣೆ, ರಾಗಿ ಮುಂತಾದವುಗಳ ಬಳಕೆ ಹೆಚ್ಚಬೇಕು. ಕಡಿಮೆ ನೀರಿನಲ್ಲಿ ಹಾಗೂ ಕಡಿಮೆ ಅವಧಿಯಲ್ಲಿ ಸಿರಿಧಾನ್ಯ ಬೆಳೆಯಬಹುದು ಎಂದರು.

ಪ್ರಗತಿಪರ ರೈತ ಶೆಟ್ಟೆಪ್ಪ ನಾವಿ ಮಾತನಾಡಿ, ಸಿರಿಧಾನ್ಯ ಹುಲ್ಲಿನ ಜಾತಿಗೆ ಸೇರಿದ ಬೆಳೆ. ಇಳಿಜಾರಿಗೆ ಅಡ್ಡಲಾಗಿ ಬಿತ್ತನೆ ಮಾಡಬೇಕು. ನೈಸರ್ಗಿಕ ಮಳೆ ನೀರು ಹಿಡಿದಿಡಲು ಬೋದುಗಳನ್ನು ಹಾಕಬೇಕು. ಗೀಜಗನ ಹಾವಳಿ ಸಿರಿಧಾನ್ಯಕ್ಕೆ ಹೆಚ್ಚು. ಯಾವುದೇ ಕೀಟ ಸಿರಿಧಾನ್ಯಕ್ಕೆ ಕಾಡಲ್ಲ. ಎಲೆ ಹಳದಿ ಆದ ಕೂಡಲೇ ಕಟಾವಿಗೆ ಮುಂದಾಗಬೇಕು. ಕಟಾವಾದ ಕೂಡಲೇ ಮೌಲ್ಯವರ್ಧನೆ ಮಾಡಬೇಕು ಎಂದು ಸಲಹೆ ನೀಡಿದರು.

ಕೃಷಿ ಮೇಳದ ಅಧ್ಯಕ್ಷ ಡಾ.ಎಸ್.ಬಿ. ಕಲಘಟಗಿ, ನಾದ ಗ್ರಾಮದ ರೈತ ಎಸ್.ಬಿ. ಪಾಟೀಲ, ಹಿರೇಮಸಳಿಯ ಪ್ರಗತಿಪರ ರೈತ ಮಲ್ಲೇಶಗೌಡ ಪಾಟೀಲ, ಡಾ.ಆರ್.ಬಿ. ಬೆಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net