

ವಿಜಯಪುರ: ನರೇಂದ್ರ ಮೋದಿ ಮೊದಲ ಬಾರಿ ಪ್ರಧಾನಿಯಾದಾಗ 2014ರಲ್ಲಿ ನಡೆದ ವಿಜಯೋತ್ಸವದಲ್ಲಿನ ಗಲಾಟೆಗೆ ಸಂಬಂಧಿಸಿದಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸೇರಿದಂತೆ 134 ಜನರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.
ಇಲ್ಲಿನ ಪೊಲೀಸ್ ಚಿಂತನಾ ಸಭಾಂಗಣದಲ್ಲಿ ಆನ್‌ಲೈನ್ ಮೂಲಕ ಬುಧವಾರ ನಡೆದ ವಿಚಾರಣೆಯಲ್ಲಿ ನ್ಯಾಯಾಧೀಶ ಡಿ. ಜಯಂತಕುಮಾರ 134ಜನರನ್ನೂ ನಿರ್ದೋಷಿಗಳೆಂದು ತೀರ್ಪು ಪ್ರಕಟಿಸಿದರು. ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದಲೇ ಆನ್‌ಲೈನ್ ಮೂಲಕ ವಿಚಾರಣೆ ನಡೆಯಿತು.
ಘಟನೆ ವಿವರ: 2014 ಮೇ 26 ರಂದು ವಿಜಯಪುರದ ಸಿದ್ಧೇಶ್ವರ ದೇವಸ್ಥಾನದಿಂದ ಬೃಹತ್ ವಿಜಯೋತ್ಸವ ಆಚರಿಸಲಾಯಿತು. ಮೆರವಣಿಗೆ ಮಹಾತ್ಮ ಗಾಂಧಿ ವೃತ್ತ ತಲುಪುತ್ತಿದ್ದಂತೆ ಗಲಾಟೆ ಶುರುವಾಯಿತು. ಎರಡು ಗುಂಪುಗಳ ಮಧ್ಯೆ ಕಲಹ ಏರ್ಪಟ್ಟು ಪ್ರಕರಣ ಲಾಠಿ ಚಾರ್ಜ್ ಆಗುವವರೆಗೂ ಮುಂದುವರಿದಿತ್ತು. 134 ಜನರ ಮೇಲೆ ಗಾಂಧಿ ಚೌಕ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.
ಸುದೀರ್ಘ ವಿಚಾರಣೆ ಬಳಿಕ ಆರೋಪಿಗಳು ಖುಲಾಸೆಯಾಗಿದ್ದು, ಚಿಂತನಾ ಸಭಾಂಗಣದಿಂದ ಹೊರಬರುತ್ತಿದ್ದಂತೆ ಎರಡೂ ಗುಂಪಿನವರು ಪರಸ್ಪರ ಹಸ್ತಲಾಘವ ಮಾಡಿ ಸಂತಸ ವ್ಯಕ್ತಪಡಿಸಿದರು.