ರೈತರ ಸಮಸ್ಯೆಗೆ ಪ್ರಧಾನಿ ಮೋದಿ ಸ್ಪಂದಿಸಲಿ

Basavajaya Swamiji
Published on

ವಿಜಯಪುರ: ದೇಶದ ಸಣ್ಣಪುಟ್ಟ ವಿಷಯಗಳಿಗೆ ಟ್ವೀಟ್ ಮಾಡಿದರೂ ಸ್ಪಂದಿಸುವ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೂ ಸ್ಪಂದಿಸಲಿ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು. ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಅನುದಾನ ನೀಡುವಂತೆ, ಅನ್ಯಾಯ ಮಾಡದಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಧ್ವನಿ ಎತ್ತಿದ್ದಾರೆಯೇ ಹೊರತು ವೈಯಕ್ತಿಕ ಉದ್ದೇಶದಿಂದಲ್ಲ. ಅವರೊಬ್ಬ ಒಂಟಿ ಸಲಗ ಇದ್ದಂತೆ. ಅವರು ಎತ್ತಿದ ಎಲ್ಲ ವಿಷಯಗಳಿಗೆ ಸರ್ಕಾರ ಸ್ಪಂದಿಸಿರುವುದನ್ನು ಗಮನಿಸಬಹುದು ಎಂದು ಶ್ರೀಗಳು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಲ್ಲಿ ಪಂಚಮಸಾಲಿ ಸಮಾಜದ ಪಾತ್ರ ಮುಖ್ಯವಾಗಿದೆ. ಮೀಸಲಾತಿ ಕೊಟ್ಟರೆ ಸಮಾಜಕ್ಕೆ ಮುಖ್ಯಮಂತ್ರಿ ಸ್ಥಾನ ಕೊಟ್ಟಷ್ಟು, ಸಾವಿರ ಕೋಟಿ ರೂ. ಹಣ ಕೊಟ್ಟಿರುವುದಕ್ಕಿಂತ ಹೆಚ್ಚು ಖುಷಿಯಾಗುತ್ತದೆ ಎಂದು ಹೇಳಿದರು.

ಪಂಚ ಲಕ್ಷ ಪಾದಯಾತ್ರೆ

ಪಂಚಮಸಾಲಿ ಸಮಾಜವನ್ನು ರಾಜ್ಯ ಸರ್ಕಾರ 2ಎ ಹಾಗೂ ಲಿಂಗಾಯತ ಸಮಾಜವನ್ನು ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿಗೆ ಸೇರ್ಪಡಿಸುವಂತೆ ಒತ್ತಾಯಿಸಿ ಜ.14 ರಿಂದ ಕೂಡಲ ಸಂಗಮದ ಪೀಠದಿಂದ ವಿಧಾನಸೌಧದ ಆಡಳಿತ ಪೀಠದವರೆಗೆ ಪಂಚಲಕ್ಷ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಕೂಡಲಸಂಗಮದಿಂದ ಆರಂಭವಾಗುವ ಪಾದಯಾತ್ರೆ ಪ್ರತಿ ದಿನ 20 ಕಿ.ಮೀ. ಕ್ರಮಿಸಲಿದೆ. ಇಳಕಲ್ಲ, ಕುಷ್ಟಗಿ, ಯಲಬುರ್ಗಾ, ಕೊಪ್ಪಳ, ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ, ಹರಿಹರ, ದಾವಣಗೆರೆ, ಚಿತ್ರದುರ್ಗ, ತುಮಕೂರು ಮಾರ್ಗವಾಗಿ ಒಂದು ತಿಂಗಳು ಪಾದಯಾತ್ರೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಸಮಾಜದ ಮುಖಂಡರಾದ ಮಲ್ಲಿಕಾರ್ಜುನ ಹಿರೇಕೊಪ್ಪ, ಸೋಮಶೇಖರ ಆಲ್ಯಾಳ, ಅಮರೇಶ ನಾಗೂರ, ಡಾ. ಬಸನಗೌಡ ಪಾಟೀಲ, ಬಿ.ಎಂ. ಪಾಟೀಲ, ಸಂಗಮೇಶ ಬಬಲೇಶ್ವರ, ದಾನೇಶ್ವರ ಅವಟಿ, ಎಸ್.ಆರ್. ಬುಕ್ಕಣ್ಣಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net