

ವಿಜಯಪುರ: ಕರೊನಾ ಮಹಾಮಾರಿಯಿಂದಾಗಿ ಎರಡು ತಿಂಗಳಿಂದ ಬಾಗಿಲು ಮುಚ್ಚಿದ್ದ ದೇವಸ್ಥಾನಗಳು ಸೋಮವಾರ ಪುನರಾರಂಭಗೊಂಡಿದ್ದು, ಭಕ್ತರಲ್ಲಿ ಹರ್ಷ ವ್ಯಕ್ತವಾಯಿತು.
ಉತ್ತರ ಕರ್ನಾಟಕ ಭಾಗದ ಆರಾಧ್ಯ ದೈವ ಶ್ರೀ ಸಿದ್ಧೇಶ್ವರ ದೇವಸ್ಥಾನ, ಶ್ರೀ ಪ್ರಸನ್ನ ಗಣಪತಿ, ನಂಜನಗೂಡು ರಾಯರ ಮಠದಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.
ಬಹಳ ದಿನಗಳಿಂದ ಕರೊನಾದಿಂದಾಗಿ ಹೊರಗಡೆ ಬರಲು ಆಗದೆ ಭಕ್ತರು ಮನೆಯಲ್ಲೇ ದೇವರಿಗೆ ವಿಶೇಷ ಪೂಜೆ ಜತೆಗೆ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಲಾಕ್‌ಡೌನ್ ತೆರವುಗೊಳಿಸಿದ ಹಿನ್ನೆಲೆ ದೇವಸ್ಥಾನ ಅಲ್ಲದೆ ಮಸೀದಿ, ಹೋಟೆಲ್‌ಗಳೆಲ್ಲ ಆರಂಭಗೊಂಡಿದ್ದವು.
ಬೆಳಗ್ಗೆಯಿಂದಲೇ ತಮ್ಮ ಇಷ್ಟದ ದೇವರುಗಳಿಗೆ ಪೂಜೆ ಸಲ್ಲಿಸಲು ತೆರಳಿದ್ದ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುವಂತಾಯಿತು. ಕರೊನಾ ನಿಯಂತ್ರಣಕ್ಕಾಗಿ ಪರಸ್ಪರ ಅಂತರ ಕಾಯ್ದುಕೊಳ್ಳುವ ಮೂಲಕ ಭಕ್ತರು ದೇವರ ದರ್ಶನ ಮಾಡಿದರು. ಶ್ರೀ ಸಿದ್ಧೇಶ್ವರ ದೇವಸ್ಥಾನದ ಮುಂದೆ ಭಕ್ತರ ದಂಡು ನೋಡುಗರಲ್ಲಿ ಕಳೆಗಟ್ಟುವಂತೆ ಮಾಡಿತು. ದೇವಸ್ಥಾನದ ಪ್ರವೇಶದ್ವಾರದಲ್ಲಿ ಸ್ಯಾನಿಟೈಸರ್ ಹಾಗೂ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಗರ್ಭಿಣಿಯರಿಗೆ ಮತ್ತು ವೃದ್ಧರಿಗೆ ಅವಕಾಶ ಇಲ್ಲ ಎಂದು ದೇವಸ್ಥಾನದ ಕಮಿಟಿಗಳು ನಾಮಲಕ ಹಾಕಿದ ಹಿನ್ನೆಲೆಯಲ್ಲಿ ಗರ್ಭಿಣಿಯರು, ವೃದ್ಧರು ಆಗಮಿಸಿರಲಿಲ್ಲ.
ವಿಜಯಪುರದ ದೇವಸ್ಥಾನಗಳಲ್ಲಿ ತೀರ್ಥ, ಪ್ರಸಾದದ ವ್ಯವಸ್ಥೆ ಇರಲಿಲ್ಲ. ನಂಜನಗೂಡು ರಾಯರ ಮಠದಲ್ಲಿಯೂ ಅನೇಕ ಭಕ್ತರು ಬೆಳಗ್ಗೆ 6.30ಕ್ಕೆ ರಾಯರ ಪೂಜೆ ನೆರವೇರಿಸಿದರು. ಮಠಕ್ಕೆ ಆಗಮಿಸಿದ ಭಕ್ತರಿಗೆ ಕೇವಲ ರಾಯರ ದರ್ಶನವನ್ನು ಮಾತ್ರ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಮಂತ್ರಾಕ್ಷತೆ, ತೀರ್ಥ, ಪ್ರಸಾದಕ್ಕೆ ಅವಕಾಶ ಇರಲಿಲ್ಲ. ಇನ್ನು ಪ್ರತಿ ಗುರುವಾರ 108 ದೀಪಸ್ತಂಭ, ಪ್ರಾರ್ಥನೆ, ಕರೊನಾ ಸಂಕಷ್ಟ ನಿವಾರಿಸುವುದಕ್ಕೆ ವಿಶೇಷ ಪೂಜೆ ವ್ಯವಸ್ಥೆ ಮಾಡಲಾಗಿದೆ ಎಂದು ಮಠದ ವಿಚಾರಣಕರ್ತೃ ಗೋಪಾಲ ನಾಯಕ ಮಾಹಿತಿ ನೀಡಿದ್ದಾರೆ.