

ವಿಜಯಪುರ : ನಾಗಠಾಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಿಟ್ನಳ್ಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರವನ್ನು ಸ್ಥಳಾಂತರ ಮಾಡಲು ಹೊರಟಿರುವ ಸರ್ಕಾರದ ನಡೆಯನ್ನು ನಾಗಠಾಣ ಶಾಸಕ ದೇವಾನಂದ ಚವ್ಹಾಣ ತೀವ್ರವಾಗಿ ಖಂಡಿಸಿದರು.
ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರ ನಾಗಠಾಣ ವಿಧಾನಸಭಾ ಕ್ಷೇತ್ರದ ಬಗ್ಗೆ ತಾರತಮ್ಯ ಧೋರಣೆ ಅನುಸರಿಸುತ್ತಿದೆ. ವಿನಾಕಾರಣ ಮುದ್ದೇಬಿಹಾಳ, ತಾಳಿಕೋಟೆ ರೈತರಿಗೆ ದೂರವಾಗುತ್ತದೆ ಎಂಬ ನೆಪವೊಡ್ಡಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರವನ್ನು ವಿಜಯಪುರದಿಂದ ಮುದ್ದೇಬಿಹಾಳಕ್ಕೆ ಸ್ಥಳಾಂತರಿಸಲು ಹೊರಟಿರುವುದು ಸರಿಯಲ್ಲ . ಬೇಕಿದ್ದರೆ ಹೊಸದಾಗಿ ಕೇಂದ್ರ ಸ್ಥಾಪನೆಗೆ ಸರ್ಕಾರ ಅನುಮತಿ ನೀಡಲಿ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಹಿಟ್ನಳ್ಳಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಉತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ ರೈತರಿಗೆ ವರದಾನವಾಗಿದೆ. ಈ ಕೇಂದ್ರವನ್ನು ಸ್ಥಳಾಂತರಗೊಳಿಸುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ತಾರತಮ್ಯ ಧೋರಣೆಗೆ ಇದೊಂದು ನಿದರ್ಶನ ಮಾತ್ರ ಎಂದು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ 62 ಹಳ್ಳಿಗಳಿಗೆ ಜೀವನಾಡಿಯಾಗಿರುವ ಹೊರ್ತಿ-ರೇವಣಸಿದ್ದೇಶ್ವರ ಯೋಜನೆಗೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ 250 ಕೋಟಿ ರೂ. ಅನುದಾನ ಮೀಸಲಿರಿಸಲಾಗಿತ್ತು. ಆದರೆ ವರ್ಷ ಉರುಳಿದರೂ ಕಾಮಗಾರಿ ಮಾತ್ರ ಆರಂಭಗೊಂಡಿಲ್ಲ. ನೂತನ ತಾಲೂಕು ಕೇಂದ್ರ ಚಡಚಣದಲ್ಲಿ ತಹಸೀಲ್ದಾರ್ ಕಚೇರಿ ಹೊರತುಪಡಿಸಿದರೆ ಮತ್ತೆ ಬೇರೆ ಕಚೇರಿಗಳು ಆರಂಭಗೊಂಡಿಲ್ಲ. ಪ್ರಸಕ್ತ ವರ್ಷದ ಆಯವ್ಯಯದಲ್ಲಾದರೂ ಹೆಚ್ಚಿನ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.
ಜೆಡಿಎಸ್ ನಾಯಕ ಪ್ರಜ್ವಲ್ ರೇವಣ್ಣ ಭೇಟಿ
ಶಾಸಕ ಎಂ.ಸಿ.ಮನಗೂಳಿ ನಿಧನ ಹಿನ್ನೆಲೆ ಅವರ ನಿವಾಸಕ್ಕೆ ಜೆಡಿಎಸ್ ಯುವನಾಯಕ, ಸಂಸದ ಪ್ರಜ್ವಲ್ ರೇವಣ್ಣ ಫೆ.22ರಂದು ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಲಿದ್ದಾರೆ. ನಂತರ ವಿಜಯಪುರದ ಸೊಲ್ಲಾಪುರ ರಸ್ತೆಯಲ್ಲಿರುವ ಬೆಳಮಕರ ಮಂಗಲ ಕಾರ್ಯಾಲಯದಲ್ಲಿ ಮಧ್ಯಾಹ್ನ 3 ಗಂಟೆಗೆ ಜೆಡಿಎಸ್ ಕಾರ್ಯಕರ್ತರ, ಮುಖಂಡರ ಸಭೆ ಜರುಗಲಿದೆ. ಜಿಲ್ಲೆಯ ಜನಪ್ರತಿನಿಧಿಗಳು ಇತರರು ಭಾಗವಹಿಸಲಿದ್ದಾರೆ ಎಂದರು.