ವಿಜಯಪುರ ಮಹಾನಗರ ಪಾಲಿಕೆ ಬಿಜೆಪಿ ತೆಕ್ಕೆಗೆ, ಮೇಯರ್-ಉಪಮೇಯರ್ ಯಾರು ಗೊತ್ತಾ?

PALIKE ELECTION
ವಿಜಯಪುರ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ನೂತನ ಮೇಯರ್ ಎಂ.ಎಸ್. ಕರಡಿ ಹಾಗೂ ಉಪಮೇಯರ್ ಸುಮಿತ್ರಾ ಜಾಧವ ಅವರಿಗೆ ಪ್ರಾದೇಶಿಕ ಆಯುಕ್ತ ಸಂಜಯ ಶೆಟ್ಟೆಣ್ಣವರ ಹೂಗುಚ್ಚ ನೀಡಿ ಶುಭಕೋರಿದರು. ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಮತ್ತಿತರರಿದ್ದಾರೆ.
Published on

ವಿಜಯಪುರ: ಕಳೆದ ಆರೇಳು ತಿಂಗಳಿನಿಂದ ಏಳು-ಬೀಳು ಕಾಣುತ್ತಲೇ ಇದ್ದ ವಿಜಯಪುರ ಮಹಾನಗರ ಪಾಲಿಕೆ ಮೇಯರ್-ಉಪಮೇಯರ್ ಚುನಾವಣೆ ಪ್ರಕ್ರಿಯೆಗೆ ಕೊನೆಗೂ ತೆರೆ ಬಿದ್ದಿದ್ದು, ಪಾಲಿಕೆ ಗದ್ದುಗೆ ಅಲಂಕರಿಸುವಲ್ಲಿ ಬಿಜೆಪಿ ಸಫಲವಾಗಿದೆ.

ಮೇಯರ್ ಸ್ಥಾನಕ್ಕೆ ಬಿಜೆಪಿ ಸದಸ್ಯ ಎಂ.ಎಸ್. ಕರಡಿ ಹಾಗೂ ಉಪಮೇಯರ್ ಸ್ಥಾನಕ್ಕೆ ಸುಮಿತ್ರಾ ಜಾಧವ ಆಯ್ಕೆಯಾಗಿದ್ದಾರೆಂದು ಪ್ರಾದೇಶಿಕ ಆಯುಕ್ತ ಸಂಜಯ ಶೆಟ್ಟೆಣ್ಣವರ ಸೋಮವಾರ ಅಧಿಕೃತವಾಗಿ ಘೋಷಣೆ ಹೊರಡಿಸಿದರು. ಮುಚ್ಚಿದ ಲೋಕೋಟೆಯಲ್ಲಿದ್ದ ಫಲಿತಾಂಶವನ್ನು ನ್ಯಾಯಾಲಯದ ಆದೇಶದ ಮೇರೆಗೆ ಪ್ರಕಟಪಡಿಸಲಾಗಿದೆ. ಫಲಿತಾಂಶ ಪ್ರಕಟಗೊಂಡ ದಿನದಿಂದ ಒಂದು ವರ್ಷದ ಅವಧಿಗೆ ಎಂ.ಎಸ್. ಕರಡಿ ಹಾಗೂ ಸುಮಿತ್ರಾ ಜಾಧವ ಅನುಕ್ರಮವಾಗಿ ಮೇಯರ್ ಹಾಗೂ ಉಪಮೇಯರ್ ಆಗಿ ಮುಂದುವರಿಯಲಿದ್ದಾರೆ. ಸಂವಿಧಾನಾತ್ಮಕವಾಗಿ ಎಲ್ಲ ಅಧಿಕಾರ ಚಲಾಯಿಸಲು ಅರ್ಹರಾಗಿದ್ದಾರೆಂದು ತಿಳಿಸಿದ ಶೆಟ್ಟೆಣ್ಣವರ, ಇನ್ನೇನು ಸ್ಥಾಯಿ ಸಮಿತಿಗಳ ರಚನೆಯಾಗಬೇಕಿದ್ದು ಶೀಘ್ರದಲ್ಲೇ ರಚನೆ ಮಾಡುವುದಾಗಿ ಪ್ರತಿಕ್ರಿಯಿಸಿದರು. ಅಲ್ಲದೇ ಸದಸ್ಯತ್ವ ರದ್ದತಿಗೆ ಸಂಬಂಧಿಸಿದಂತೆ ಪ್ರಕರಣವೊಂದು ನ್ಯಾಯಾಲಯದ ವಿಚಾರಣೆಯಲ್ಲಿರುವ ಕಾರಣ ಆ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದರು.

ಕಳೆದ ಜ. 27 ರಂದೇ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆದಿದ್ದು ಬಿಜೆಪಿಯಿಂದ ನಾಮಪತ್ರ ಸಲ್ಲಿಸಿದ್ದ ಎಂ.ಎಸ್. ಕರಡಗಿ ಹಾಗೂ ಕಾಂಗ್ರೆಸ್‌ನಿಂದ ಅಶೋಕ ನ್ಯಾಮಗೊಂಡ ನಾಮಪತ್ರ ಸಲ್ಲಿಸಿದ್ದರು. ತುರುಸಿನ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಎಸ್. ಕರಡಿ 24 ಮತ ಪಡೆದಿದ್ದರೆ ಕಾಂಗ್ರೆಸ್ ಅಭ್ಯರ್ಥಿ ನ್ಯಾಮಗೊಂಡ 22 ಮತ ಪಡೆದಿದ್ದರು. ಬಳಿಕ ಫೆ. 12ರಂದು ಉಪಮೇಯರ್ ಸ್ಥಾನಕ್ಕೆ ಚುನಾವಣೆ ನಡೆದಿದ್ದು ಬಿಜೆಪಿಯಿಂದ ಸ್ಪರ್ಧಿಸಿದ್ದ ಸುಮಿತ್ರಾ ಜಾಧವ 24 ಮತ ಪಡೆದರೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ವಿಮಲಾ ರಫೀಕ ಖಾನೆ ಚುನಾವಣೆ ಪ್ರಕ್ರಿಯೆಯಿಂದಲೇ ದೂರ ಉಳಿದಿದ್ದರು. ನ್ಯಾಯಾಲಯದ ಆದೇಶದಂತೆ ಫಲಿತಾಂಶ ಗೌಪ್ಯವಾಗಿರಿಸಲಾಗಿತ್ತು. ಇದೀಗ ಮುಚ್ಚಿದ ಲಕೋಟೆ ತೆರೆದು ಫಲಿತಾಂಶ ಘೋಷಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net