

ವಿಜಯಪುರ: ನಮ್ಮ ದೇಶದ ಜನ ಭಾವೈಕ್ಯ ಸಾರುವ ಹಲವು ಹಬ್ಬಗಳನ್ನು ಆಚರಿಸುತ್ತಾರೆ. ಅಂತಹ ಹಬ್ಬಗಳಲ್ಲಿ ಮೊಹರಂ ಕೂಡ ಒಂದು ಎಂದು ಹಾಸಿಂಪೀರ ದರ್ಗಾದ ಪೀಠಾಧ್ಯಕ್ಷ ಸೈಯದ್ ಷಹಾ ಮುರ್ತುಜಾ ಹುಸೇನಿ ಹಾಶ್ಮಿ ಹೇಳಿದರು.ನಗರದ ಬಡಿಕಮಾನ ರಸ್ತೆ ಹತ್ತಿರದ ಹಾಸಿಂಪೀರ ದರ್ಗಾದಲ್ಲಿ ಮಂಗಳವಾರ ಮೊಹರಂ ನಿಮಿತ್ತ ಹಜರತ ಇಮಾಮ ಹುಸೇನರ ಡೋಲಿ ದರ್ಶನ ಪಡೆದು ಮಾತನಾಡಿದ ಅವರು, ಇಸ್ಲಾಂ ಧರ್ಮದ ಸಂಸ್ಥಾಪಕ ಮಹಮ್ಮದ ಪೈಗಂಬರರ ಎರಡನೇ ಮೊಮ್ಮಗ ಇಮಾಮ ಹುಸೇನ ಖಲೀಫ ಪಟ್ಟಕ್ಕೆ ಬರಬೇಕಾಗಿತ್ತು. ಯಜೀದನು ತಾನೇ ಖಲೀಫನೆಂದು ಸಾರಿಕೊಂಡನು. ಈ ಅನ್ಯಾಯವನ್ನು ಇಮಾಮ ಹುಸೇನರು ಪ್ರತಿಭಟಿಸಿದರು. ಆದರೂ ಯಜೀದನು ಪ್ರಭುತ್ವವನ್ನು ಮನ್ನಿಸಲು ನಿರಾಕರಿಸಿದ. ಸತ್ಯ ನ್ಯಾಯ ಕಾಪಾಡಲು ಇಮಾಮ ಹುಸೇನರು ಮೊಹರಂ ತಿಂಗಳ ಹತ್ತನೇಯ ದಿನ ಕರಬಲಾ ಎಂಬ ಮರುಭೂಮಿ ಮೈದಾನದ ಯುದ್ಧದಲ್ಲಿ ಹುತಾತ್ಮರಾದರು. ಶಾಂತಿ ಹಾಗೂ ಧರ್ಮಕ್ಕಾಗಿ ತಮ್ಮನ್ನೇ ಸಮರ್ಪಿಸಿಕೊಂಡ ಹಜರತ ಇಮಾಮ ಹುಸೇನರ ಪುಣ್ಯ ಸ್ಮರಣೆಗೊಸ್ಕರ ಈ ಹಬ್ಬವನ್ನು ವಿಶ್ವಾದ್ಯಂತ ಆಚರಿಸಲಾಗುತ್ತದೆ ಎಂದರು.
ಮಾನವ ಹಕ್ಕುಗಳ ಕಲ್ಯಾಣ ಮಂಡಳಿ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ, ಇಸ್ಲಾಮಿಯರ ಹೊಸ ವರ್ಷ ಆರಂಭದ ಹತ್ತನೇಯ ದಿನ ಇಮಾಮ ಹುಸೇನ ಅವರ ಪುಣ್ಯಸ್ಮರಣೆಗೆ ಅಲಾಯಿ ಅಂತ ಗ್ರಾಮೀಣ ಪ್ರದೇಶದಲ್ಲಿ ಮೊಹರಂ ಆಚರಿಸುತ್ತಾರೆ. ಎಲ್ಲಿಯವರೆಗೆ ಮೊಹರಂ ಆಚರಣೆ ನಡೆಯುವುದೋ ಅಲ್ಲಿವರೆಗೆ ದೇಶದಲ್ಲಿ ಸಾಮರಸ್ಯ ಹಾಗೂ ಸಹೋದರತೆ ಭಾವನೆ ಗಟ್ಟಿಯಾಗಿರುತ್ತದೆ. ಧರ್ಮ, ಸತ್ಯ, ನ್ಯಾಯ, ನಂಬಿಕೆಯಿಟ್ಟು ಬದುಕಿದವರು ಶ್ರೇಷ್ಠ ಮಾನವರಾಗುತ್ತ್ತಾರೆ. ಹಬ್ಬಗಳು ಮಾನವೀಯತೆ ಸಾರುತ್ತವೆ ಎಂದು ತಿಳಿಸಿದರು.
ಗ್ರಾಮೀಣ ಪ್ರದೇಶದಲ್ಲಿ ಮೊಹರಂ ಆಚರಣೆಯಲ್ಲಿ ಬಹುಪಾಲು ಹಿಂದುಗಳೇ ಭಾಗವಹಿಸುತ್ತಾರೆ. ಈ ಹಬ್ಬದಲ್ಲಿ ಪ್ರಾದೇಶಿಕ ಜಾನಪದ ಕಲೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಂದ ಎಲ್ಲರನ್ನೂ ಸಮಾನವಾಗಿ ಕಾಣಲು ಸಾಧ್ಯ ಎಂದರು.
ಅಂಜುಮನ್ ಸಂಸ್ಥೆ ಅಧ್ಯಕ್ಷ ಜೈನುಲ್ ಆಬಿದ್ದೀನ ಪೀರಜಾದೆ, ನೂರುದ್ದೀನ ಪಾಷಾ ಜಹಾಗೀರದಾರ, ನ್ಯಾಯವಾದಿ ಇಂತಿಕಾಬ ಇಂಡಿಕರ, ಇಸ್ಲಾಂ ಬಾಂಗಿ, ದಾವಲ ಬಾಲೋನಿಕರ, ಅಬುಬಕರ ಬಾಡಗಂಡಿ, ಅಬುಲ್ ಫೈಜ ಖಾದ್ರಿ, ಸೈಯದ್ ಹಾಸಿಂಪೀರ ಪೀರಜಾದೆ, ಅಲ್ತಾ ಖಾದ್ರಿ ಇನಾಮದಾರ, ರಾಜಾ ಜಾನವೇಕರ ಮತ್ತಿತರರು ಇದ್ದರು.