

ವಿಜಯಪುರ: ಕರೊನಾ ನಿಯಂತ್ರಣ ಹಿನ್ನೆಲೆ ಸರ್ಕಾರ ಘೋಷಿಸಿದ ಎರಡು ದಿನದ ವಾರಾಂತ್ಯ ಕರ್ಫ್ಯೂ ಮುಗಿಯುತ್ತಿದ್ದಂತೆ ಗುಮ್ಮಟ ನಗರಿಯಲ್ಲಿ ಜನಜೀವನ ಎಂದಿನಂತೆ ಸಹಜ ಸ್ಥಿತಿಗೆ ಮರಳಿತು.
ಶನಿವಾರ ಮತ್ತು ಭಾನುವಾರ ಸ್ವಯಂ ಪ್ರೇರಿತವಾಗಿ ಮನೆಯಲ್ಲೇ ಉಳಿದಿದ್ದ ಜನರು ಸೋಮವಾರ ಬೆಳಗ್ಗೆ ನಿರಾತಂಕವಾಗಿ ಬೀದಿಗಿಳಿದರು. ಬೆಳಗ್ಗೆ ವಾಯು ವಿಹಾರಕ್ಕೆ, ಹಾಲು, ತರಕಾರಿ ಮಾರಾಟಕ್ಕೆ, ದಿನಸಿ ಖರೀದಿ ಮತ್ತಿತರ ವಹಿವಾಟು ಸಹಜವೆಂಬಂತೆ ನಡೆದವು. ಬೈಕ್, ಕಾರ್ ಮತ್ತು ಆಟೋಗಳು ಎಂದಿನಂತೆ ರಸ್ತೆ ತುಂಬ ಓಡಾಡಿದ್ದು ಕಂಡು ಬಂತು. ಕೂಲಿ ಕಾರ್ಮಿಕರು, ಸರ್ಕಾರಿ ನೌಕರರು, ವ್ಯಾಪಾರಸ್ಥರು ಕರೊನಾ ಭಯಬಿಟ್ಟು ಸಂಚರಿಸಿದರು.
ಪೊಲೀಸರಿಂದ ಎಚ್ಚರಿಕೆ
ವಾರಾಂತ್ಯ ಕರ್ಫ್ಯೂ ಮುಗಿದರೂ ಸರ್ಕಾರದ ಮಾರ್ಗಸೂಚಿ ಪಾಲನೆ ಕಡ್ಡಾಯಾವೆಂಬುದನ್ನು ಪೊಲೀಸರು ಮನವರಿಕೆ ಮಾಡಲೆತ್ನಿಸಿದರು. ಅತ್ಯಗತ್ಯ ವಸ್ತುಗಳ ಮಾರಾಟ ಹೊರತುಪಡಿಸಿ ಉಳಿದೆಲ್ಲ ಅಂಗಡಿ ಮುಂಗಟ್ಟುಗಳನ್ನು ತೆರೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದರು. ಬಾರ್, ಹೋಟೆಲ್, ಬೀದಿ ಬದಿಯ ಆಹಾರ ಮಳಿಗೆಗಳಲ್ಲಿ ಪಾರ್ಸಲ್‌ಗೆ ಅವಕಾಶ ಕಲ್ಪಿಸಲಾಗಿತ್ತು. ಮಾಂಸ ಮತ್ತು ಮೀನು ಮಾರಾಟ ಎಂದಿನಂತೆ ಸರಾಗವಾಗಿತ್ತು.
ಊರು ಸೇರಿದ ಕಾರ್ಮಿಕರು
ಮಂಗಳವಾರ ರಾತ್ರಿಯಿಂದ 14 ದಿನ ಜನತಾ ಕರ್ಫ್ಯೂ ಘೋಷಣೆ ಹಿನ್ನೆಲೆ ಕೂಲಿ ಕಾರ್ಮಿಕರು, ಗುಳೆಕಾರರು, ಬಾರ್ ಮತ್ತು ಹೋಟೆಲ್ ಕೆಲಸಗಾರರು ತಮ್ಮ ತಮ್ಮ ಊರುಗಳತ್ತ ದೌಢಾಯಿಸಿದರು. ಸಂಜೆ ಕೇಂದ್ರ ಬಸ್ ನಿಲ್ದಾಣ ಹಾಗೂ ನಗರದ ವಿವಿಧ ಭಾಗಗಳಲ್ಲಿರುವ ಖಾಸಗಿ ಬಸ್ ನಿಲ್ದಾಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಕಂಡು ಬಂದರು. ಟೆಂಪೋ, ಕ್ರೂಸರ್ ಮತ್ತು ಮಿನಿ ಬಸ್ ಸೇರಿ ಎದುರಾದ ಯಾವುದೇ ವಾಹನವಿರಲಿ ಕೈಮಾಡಿ ಹತ್ತುತ್ತಿರುವುದು ಊರು ಸೇರುವ ಆತುರತೆಯನ್ನು ಬಯಲಾಗಿಸಿತು.
ಕರೊನಾಗೆ ಮತ್ತಿಬ್ಬರು ಬಲಿ
ಮಹಾಮಾರಿ ಕರೊನಾಗೆ ಮತ್ತಿಬ್ಬರು ಬಲಿಯಾಗುವ ಮೂಲಕ ಜಿಲ್ಲೆಯಲ್ಲಿ ಕರೊನಾ ಅಟ್ಟಹಾಸ ಮುಂದುವರಿದಿದೆ.
ಕಳೆದ ಮೂರ‌್ನಾಲ್ಕು ದಿನಗಳಿಂದ ದಿನಕ್ಕೆ ಇಬ್ಬರು ಸಾವಿಗೀಡಾಗುತ್ತಿದ್ದಾರೆ. ಸೋಮವಾರ ಮತ್ತಿಬ್ಬರು ಅಸುನೀಗಿದ್ದಾರೆ. 73ರ ವಯೋಮಾನದ (ರೋಗಿ ಸಂಖ್ಯೆ 1198740) ಹಾಗೂ 71 ರ ವಯೋಮಾನದ (ರೋಗಿ ಸಂಖ್ಯೆ 1130845) ಪುರುಷ ರೋಗಿಗಳು ಮೃತಪಟ್ಟಿದ್ದಾರೆ. ಇವರು ತೀವ್ರ ಶ್ವಾಸಕೋಶ ತೊಂದರೆ, ರಕ್ತದೊತ್ತಡ, ಸಕ್ಕರೆ ಕಾಯಿಲೆಯಿಂದ ಬಳಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇವರಿಬ್ಬರ ಅಂತ್ಯ ಸಂಸ್ಕಾರವನ್ನು ಶಿಷ್ಟಾಚಾರದಂತೆ ನೆರವೇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
389 ಪಾಸಿಟಿವ್ ಪ್ರಕರಣ
ಕಳೆದ 24 ಗಂಟೆಯಲ್ಲಿ ಹೊಸದಾಗಿ 389 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಆ ಮೂಲಕ ಸೋಂಕಿತರ ಸಂಖ್ಯೆ 19746ಕ್ಕೆ ಏರಿಕೆಯಾಗಿದೆ. 319 ಜನ ಗುಣಮುಖರಾಗಿದ್ದು ಈವರೆಗೆ ಒಟ್ಟು 16525 ಜನ ಗುಣಮುಖರಾಗಿದ್ದಾರೆ. 227ಜನ ಮೃತಪಟ್ಟಿದ್ದಾರೆ. ಇನ್ನೂ 2994 ಜನ ಚಿಕಿತ್ಸೆ ಪಡೆಯುತ್ತಿದ್ದು, 3048 ಜನರ ವರದಿ ಬರಬೇಕಿದೆ.
ವಿಜಯಪುರ ನಗರದಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಪತ್ತೆಯಾಗುತ್ತಿದೆ. ವಿಜಯಪುರ ನಗರ-206, ಗ್ರಾಮೀಣ-44, ಬಬಲೇಶ್ವರ-2, ತಿಕೋಟಾ-10, ಬಸವನಬಾಗೇವಾಡಿ-15, ಕೊಲ್ಹಾರ-8, ಇಂಡಿ-15, ಚಡಚಣ-2, ಮುದ್ದೇಬಿಹಾಳ-37, ಸಿಂದಗಿ-47, ದೇವರಹಿಪ್ಪರಗಿ-1, ಇತರೆ ಜಿಲ್ಲೆಯ-1 ಜನರಲ್ಲಿ ಸೋಂಕು ದೃಢಪಟ್ಟಿದೆ.
ನೋಡಲ್ ಅಧಿಕಾರಿಗಳ ನೇಮಕ
ಬೆಡ್ ಸಮಸ್ಯೆ, ರೆಮ್‌ಡಿಸಿವಿವರ್ ಔಷಧ ಹಾಗೂ ಆಕ್ಸಿಜನ್ ಸಮಸ್ಯೆ ನೀಗಿಸಲು ಜಿಲ್ಲಾಡಳಿತ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿ ಆದೇಶಿಸಿದೆ.
ದಿನ ನಿತ್ಯ ಬೆಡ್‌ಗಳ ವಿವರ ನೀಡಲು ವಿಶೇಷ ಪೋರ್ಟಲ್ ರಚಿಸಲಾಗಿದ್ದು, ಖಾಸಗಿ ಆಸ್ಪತ್ರೆಗಳು ಸದರಿ ಪೋರ್ಟಲ್‌ನಲ್ಲಿ ಮಾಹಿತಿ ಅಳವಡಿಸಬೇಕು. ಜಿಲ್ಲಾಡಳಿತದ ತಾಂತ್ರಿಕ ಸಿಬ್ಬಂದಿ ಪೋರ್ಟಲ್ ನಿರ್ವಹಣೆ ಮಾಡಲಿದ್ದು ನೋಡಲ್ ಅಧಿಕಾರಿಗಳು ಆಯಾ ಖಾಸಗಿ ಆಸ್ಪತ್ರೆಗಳ ಉಸ್ತುವಾರಿ ನೋಡಿಕೊಳ್ಳಲಿದ್ದಾರೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಅಧಿಕಾರಿಗಳ ವಿವರ
ಬಿಎಲ್‌ಡಿಇ ಆಸ್ಪತ್ರೆಗೆ ಪ್ರಾಣೇಶ ಜಹಾಗೀರದಾರ(ಮೊ. 6362746378), ಅಲ್‌ನಬಿ ಆಸ್ಪತ್ರೆ- ಶ್ರೀಶೈಲ ಗಂಗನಳ್ಳಿ (ಮೊ.9845927110), ಡಾ. ಮುನೀರಬಾಂಗಿ ಆಸ್ಪತ್ರೆ-ವಿಲಿಯಂ ರಾಜಶೇಖರ(ಮೊ.9448776663), ಚೌಧರಿ ಆಸ್ಪತ್ರೆ-ಪಿ.ಆರ್. ಚವಾಣ್ (ಮೊ.8277930602), ಬಂಜಾರಾ ಆಸ್ಪತ್ರೆ-ಸಿದ್ದು ಖೈನೂರ (ಮೊ.7892539867), ಡಾ.ಬಿದರಿ ಅಶ್ವಿನಿ ಆಸ್ಪತ್ರೆ-ಸಿದ್ರಾಮಯ್ಯ ಬರಗಿಮಠ (ಮೊ.9448999232), ಮುಳವಾಡ ಆಸ್ಪತ್ರೆ-ಎನ್.ಗಿರೀಶ (ಮೊ.9448763844), ಹುಸೈನ್ ಆಸ್ಪತ್ರೆ-ರಮೇಶ ದೇಸಾಯಿ (ಮೊ.9886602794), ಅಲ್ ಅಮೀನ್ ಆಸ್ಪತ್ರೆ-ಎ.ಆಂಜನೇಯ (ಮೊ.9606240781), ಯಶೋಧಾ ಆಸ್ಪತ್ರೆ - ಎನ್. ವಿ. ಹೊಸೂರ (ಮೊ.9448999331), ಚಿರಾಗ್ ಆಸ್ಪತ್ರೆ- ಎಸ್.ಜಿ. ಲೋಣಿ (ಮೊ.9480886555), ನ್ಯಾಮಗೌಡ ಆಸ್ಪತ್ರೆ -ರಮೇಶ ದಡ್ಡಿ (ಮೊ.911153782), ವೇದಾಂತ ಆಸ್ಪತ್ರೆ -ಎ.ಎಸ್.ಹತ್ತಳ್ಳಿ (ಮೊ.9448959720), ಆಯುಷ್ ಆಸ್ಪತ್ರೆ-ಮಲ್ಲಿಕಾರ್ಜುನ ಭಜಂತ್ರಿ (ಮೊ.9880248139), ಭಾಗ್ಯವಂತಿ ಎಂ.ಎಸ್ ಆಸ್ಪತ್ರೆ - ಎಂ.ಬಿ. ಮೊರಟಗಿ (ಮೊ.9480695093), ಧನ್ವಂತರಿ ಆಸ್ಪತ್ರೆ-ಎಸ್.ಸಿ. ಮ್ಯಾಗೇರಿ (ಮೊ.9900692285), ಬಾಗಮಾರೆ ಆಸ್ಪತ್ರೆ-ಅಜಿತ ಮೇಘರಾಜ (ಮೊ.7892637074) ಹಾಗೂ ಕರ್ಪೂರಮಠ ಆಸ್ಪತ್ರೆ-ಚಿಕ್ಕಲಗಿ (ಮೊ.9448012982) ಇವರನ್ನು ಸಂಪರ್ಕಿಸಬಹುದು.