ವಸತಿ ನಿಲಯಗಳ ದುರಸ್ತಿಗೆ ಕ್ರಮಕೈಗೊಳ್ಳಿ

HN 31-2
Published on

ವಿಜಯಪುರ: ಜಿಲ್ಲೆಯ ವಿವಿಧ ತಾಲೂಕು ವ್ಯಾಪ್ತಿಯಲ್ಲಿ ಬರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿವಿಧ ವಸತಿ ನಿಲಯಗಳ ದುರಸ್ತಿ ಸೇರಿದಂತೆ ನಿವೇಶನ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಾರ್ಯದರ್ಶಿ ಮೊಹಮ್ಮದ್ ಮೋಸಿನ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಇಲ್ಲಿನ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಆಯಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ಹೆಚ್ಚು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು. ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿರುವ ಮತ್ತು ಶಂಕುಸ್ಥಾಪನೆಗೆ ಸಜ್ಜುಗೊಂಡಿರುವ ವಸತಿ ನಿಲಯಗಳ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು. ವಸತಿ ನಿಲಯಗಳಿಗೆ ಸರಬರಾಜು ಆಗುವ ಆಹಾರ ಧಾನ್ಯ ಗುಣಮಟ್ಟ ಮತ್ತು ಸಮರ್ಪಕವಾಗಿ ಇರುವಂತೆ ನಿರ್ವಹಣೆ ಮಾಡಬೇಕು. ಯಾವುದೇ ರೀತಿ ದೂರು ಬರದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.
ತಾಲೂಕು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಸರಿಯಾಗಿ ದೊರಕಿಸಬೇಕು. ಅರಿವು ಯೋಜನೆಯಡಿ ಪ್ರೋತ್ಸಾಹ ಧನ ನೀಡುವ ಕಾರ್ಯದಲ್ಲಿ ಪ್ರಗತಿ ಸಾಧಿಸಬೇಕು. ದೇವರಾಜ ಅರಸು ಭವನ, ಸಮುದಾಯ ಭವನಗಳಿಗೆ ಮಂಜುರಾದ ಅನುದಾನ ಸರಿಯಾಗಿ ಬಳಸಬೇಕು. ಚೈತನ್ಯ ಸಹಾಯಧನ ಯೋಜನೆಯಡಿ ವಿದ್ಯಾರ್ಥಿಗಳಿಗೆ ಸಹಾಯಧನ ದೊರಕಿಸಬೇಕು ಎಂದು ತಿಳಿಸಿದರು.
ಗಂಗಾ ಕಲ್ಯಾಣ ಯೋಜನೆಯಡಿ ಹೆಸ್ಕಾಂ ನಿಯಮಾವಳಿ ಅನ್ವಯ ವಿದ್ಯುತ್ ಸೌಲಭ್ಯ ಕಲ್ಪಿಸಬೇಕು. ವಿಶ್ವಕರ್ಮ ಸಮುದಾಯ ನಿಗಮದಡಿ ಸ್ವಯಂ ಉದ್ಯೋಗಕ್ಕೆ ಅರ್ಹ ಅಭ್ಯರ್ಥಿಗಳಿಗೆ ಸಾಲ ಸೌಲಭ್ಯ ಕಲ್ಪಿಸಬೇಕು. ಹಿಂದುಳಿದ ವರ್ಗಗಳ ಅರ್ಹ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲ ಸೌಲಭ್ಯ ಕುರಿತು ತಾಲೂಕುವಾರು ಅರಿವು ಮೂಡಿಸಿ ಸೌಲಭ್ಯ ಕಲ್ಪಿಸಬೇಕು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ.100 ರಷ್ಟು ಲಿತಾಂಶ ಸಾಧಿಸಬೇಕು ಎಂದು ಹೇಳಿದರು. ಇದೇ ವೇಳೆ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net