ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳಿ

HN 26-3
Published on

ವಿಜಯಪುರ: ವಿದ್ಯಾರ್ಥಿ ಜೀವನದಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಹೇಳಿದರು.
ಇಲ್ಲಿನ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ 2019-20ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪರೀಕ್ಷಾ ಸುಧಾರಣೆ ಹಾಗೂ ಜಿಲ್ಲಾಮಟ್ಟದ ಕೌನ್‌ಬನೇಗಾ ವಿದ್ಯಾಪತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣ ವ್ಯವಸ್ಥೆಯಲ್ಲಿ ಕೌನ್ ಬನೇಗಾ ವಿದ್ಯಾಪತಿ ಒಂದು ಹೊಸ ಪರಿಕಲ್ಪನೆಗೆ ನಾಂದಿ ಹಾಡಿದ್ದು ನಿಜಕ್ಕೂ ಶ್ಲಾಘನೀಯ. ದೇಶದಲ್ಲಿ ಜ್ಞಾನಕ್ಕೆ ಸಂಬಂಧಿಸಿದ ಸ್ಪರ್ಧೆಗಳು ಹೆಚ್ಚು ಹೆಚ್ಚು ಜರಗುತ್ತಿರುವುದು ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯಗಳಿಗೆ ಪೂರಕವಾಗಿವೆ. ವಿದ್ಯಾರ್ಥಿಗಳು ಆತಂಕ ಮತ್ತು ಒತ್ತಡ ರಹಿತರಾಗಿ ಪರೀಕ್ಷೆ ಎದುರಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಮಾತನಾಡಿ, ತಾಳ್ಮೆ ಮತ್ತು ಸಹನೆ ವಿದ್ಯಾರ್ಥಿಗಳ ಮೂಲ ಗುಣವಾಗಬೇಕು. ಮಾತು ಕಡಿಮೆಯಾದರೆ ಸಾಧನೆಗೆ ಬಲಬರುತ್ತದೆ. ಹರಟೆ ಮಾತುಗಳಿಗಿಂತ ಮೌಲ್ಯಯುತವಾದ ಮಾತು ವಿದ್ಯಾರ್ಥಿಗಳಿಗೆ ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಲ ನೀಡಲಿದೆ. ಮೌನ ಎಂಬುದು ಸಾಧಕನ ಮೂಲಗುಣವಾಗಿದೆ. ಮೌನಿಯಾದವನು ಹೆಚ್ಚು ಹೆಚ್ಚು ವಿಷಯ ವಿಚಾರಗಳನ್ನು ಮನನ ಮಾಡಿಕೊಳ್ಳಲು ಸಾಧ್ಯವಿದೆ ಎಂದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಕಲು ರಹಿತವಾಗಿ ನಡೆಯಬೇಕು. ಇದು ಮತ್ತೆ ಸಾಧಕರ ಜಿಲ್ಲೆಯಾಗಿ ಬೆಳಗಬೇಕು. ಕಂಠಪಾಠ ವಿಧಾನವು ಯಾವತ್ತು ವಿದ್ಯಾರ್ಥಿಗೆ ಪ್ರಯೋಜವಿಲ್ಲ. ಹೆಚ್ಚು ಓದುವ ಮೂಲಕ ಅದನ್ನು ಮನಸ್ಸಿನಲ್ಲಿ ಧಾರಣ ಮಾಡಿದಾಗ ಕಲಿಕೆ ಸುಲಭವಾಗಲಿದೆ ಎಂದು ತಿಳಿಸಿದರು.

ಜಿಪಂ ಸಿಇಒ ಗೋವಿಂದ ರೆಡ್ಡಿ ಮಾತನಾಡಿದರು. ಕಾರ್ಯಕ್ರಮದ ನೊಡಲ್ ಅಧಿಕಾರಿ ಮಂಜುನಾಥ ಗುಳೇದಗುಡ್ಡ, ಪ್ರೌಢಶಾಲಾ ಶಿಕ್ಷಕ ಸಂಘ ಜಿಲ್ಲಾಧ್ಯಕ್ಷ ಸಿದ್ದು ಹಂಚಿನಾಳ, ಮಾಧ್ಯಮಿಕ ಶಿಕ್ಷಕ ಸಂಘದ ಅಶೋಕ ಬಿರಾದಾರ, ಹಿರಿಯ ಉಪನ್ಯಾಸಕ ಆರ್.ವೈ. ಕೊಣ್ಣೂರ, ಡಿಡಿಪಿಐ ಪ್ರಸನ್ನಕುಮಾರ, ಡಯಟ್ ಪ್ರಾಚಾರ್ಯ ಪಿ.ಐ.ಬೊಂಗಾಳೆ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net