

ವಿಜಯಪುರ: ಅಭಿವೃದ್ಧಿ ಕಾಮಗಾರಿಗಳಿಗೆ ಎಲ್ಲ ಇಲಾಖೆಗಳು ಸಹಕರಿಸಬೇಕೆಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದ ಹಳೇ ಪ್ರವಾಸಿ ಮಂದಿರ ಆವರಣದಲ್ಲಿರುವ ಶಾಸಕರ ಜನಸಂಪರ್ಕ ಕಾರ್ಯಾಲಯದಲಿ ನಗರದ ವಿವಿಧೆಡೆ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಕುರಿತು ಸೋಮವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.
ಈಗಾಗಲೇ ರಸ್ತೆ ಕಾಮಗಾರಿ, ಒಳಚರಂಡಿ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಬಿಎಸ್‌ಎನ್‌ಎಲ್‌ನಿಂದ ಏನಾದರೂ ಕೇಬಲ್ ಅಳವಡಿಸುವುದು ಹಾಗೂ ಇತರೆ ಕಾಮಗಾರಿಗಳನ್ನು ಮಾಡುವುದಿದ್ದಲ್ಲಿ ರಸ್ತೆ ಹಾಗೂ ಡ್ರೈನೇಜ್ ಕಾಮಗಾರಿ ಮೊದಲೇ ಅಳವಡಿಸಿ ಮುಂದಿನ ಕಾರ್ಯಕ್ಕೆ ಸಹಕರಿಸಬೇಕೆಂದು ಶಾಸಕರು ಸೂಚಿಸಿದರು.
ನಗರಾಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯಾಗದಂತೆ ಕೆಇಬಿಯಿಂದ ವಿದ್ಯುತ್ ಕಂಬಗಳು, ಕೆಬಲಿಂಗ್ ಇತರೇ ಕೆಲಸಗಳಿದ್ದಲ್ಲಿ ಅವುಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ನಡೆಯುತ್ತಿರುವ ಕಾಮಗಾರಿಗಳಿಗೆ ಸಹಕರಿಸಬೇಕೆಂದು ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.
ಎಲ್ಲೆಲ್ಲಿ ರಸ್ತೆ ಕಾಮಗಾರಿಗಳು ನಡೆಯುತ್ತಿದೆಯೋ ನೀರು ಸರಬರಾಜು ಮಂಡಳಿಯಿಂದ 24 ಞ 7 ನೀರು ಪೂರೈಕೆ ಕಾಮಗಾರಿ ಪೈಪ್‌ಲೈನ್ ಅಳವಡಿಸುವುದನ್ನು ಪೂರ್ಣಗೊಳಿಸಿ ಸಿಸಿ ರಸ್ತೆ ಹಾಗೂ ಡಾಂಬರೀಕರಣ ಮಾಡಬೇಕೆಂದು ಶಾಸಕ ಯತ್ನಾಳ ಸೂಚಿಸಿದರು.
ಅರಣ್ಯ ಇಲಾಖೆಯಿಂದ ನಗರದಿಂದ ಸಂಗ್ರಹಿಸಿದ ಶುಲ್ಕವನ್ನು ನಗರದ ಯಾವ ಯಾವ ಉದ್ಯಾನ ಅಭಿವೃದ್ಧಿಗಾಗಿ ಬಳಕೆ ಮಾಡಿದ್ದೀರಿ ಹಾಗೂ ಇಲಾಖೆಯಿಂದ ಯಾವ ಯಾವ ಅಭಿವೃದ್ಧಿ ಕಾರ್ಯಗಳನ್ನು ಹಾಕಿಕೊಳ್ಳಲಾಗಿದೆ ಎಂಬ ವಿವರ ಪಡುವಂತೆ ಅರಣ್ಯಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಪಾಲಿಕೆ ಆಯುಕ್ತ ಶ್ರೀಹರ್ಷ ಶೆಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಜಿಪಂ ಉಪಾಧ್ಯಕ್ಷ ಪ್ರಭು ದೇಸಾಯಿ ಸೇರಿದಂತೆ ಆಯಾ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.