ಶಾಸಕ ಯತ್ನಾಳರ ಪೊಲೀಸ್ ಭದ್ರತೆ ಹಿಂಪಡೆದ ಸರ್ಕಾರ

Basangowda Patil
Published on

ವಿಜಯಪುರ: ಸಂಪುಟ ವಿಸ್ತರಣೆ ಬೆನ್ನಲ್ಲೇ ಯಡಿಯೂರಪ್ಪ ವಿರುದ್ಧ ಟೀಕಾ ಪ್ರಹಾರ ನಡೆಸಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳರಿಗೆ ಕಲ್ಪಿಸಿದ್ದ ಪೊಲೀಸ್ ಭದ್ರತೆಯನ್ನು ದಿಢೀರನೆ ಹಿಂಪಡೆಯಲಾಗಿದೆ.

ಈ ಕುರಿತು ಪೊಲೀಸ್ ಮಹಾ ನಿರ್ದೇಶಕರು, ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ, ಸಿಎಂ ಯಡಿಯೂರಪ್ಪ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿರುವ ಶಾಸಕ ಯತ್ನಾಳ, ದ್ವೇಷದ ರಾಜಕಾರಣಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಹಿಂದು ಪರ ಹೋರಾಟಗಳಲ್ಲಿ ಹಾಗೂ ಜನಪರ ಸಂಘಟನೆಗಳಲ್ಲಿ ಪಾಲ್ಗೊಂಡ ಹಿನ್ನೆಲೆ ಮತಾಂಧ ಶಕ್ತಿಗಳು ದಾಳಿ ಮಾಡುವ ದುರುದ್ದೇಶದ ಮುನ್ಸೂಚನೆ ಕಂಡು ಪೊಲೀಸ್ ಇಲಾಖೆಯಿಂದ ಭದ್ರತೆ ನೀಡಲಾಗಿತ್ತು. ಇದೀಗ ಮುಖ್ಯಮಂತ್ರಿಗಳ ವಿರುದ್ಧ ಹೇಳಿಕೆ ನೀಡಿರುವ ಕಾರಣಕ್ಕೆ ಪೊಲೀಸ್ ಭದ್ರತೆ ವಾಪಸ್ ಪಡೆಯಲಾಗಿದ್ದು, ಇದೊಂದು ದ್ವೇಷದ ರಾಜಕಾರಣ ಎಂದು ಶಾಸಕ ಯತ್ನಾಳ ಬಣ್ಣಿಸಿದ್ದಾರೆ.

ಭದ್ರತೆ ಹಿಂಪಡೆಯುವ ಹಿಂದಿನ ದುರುದ್ದೇಶ ಗೊತ್ತಾಗಿದೆ. ಇದು ತಮ್ಮ ಹಳೇ ಚಾಳಿ, ವಿಕೃತ ಮನಸ್ಸನ್ನು ಬಿಂಬಿಸುತ್ತದೆ. ಇದರಿಂದ ನನ್ನ ಹಿಂದುಪರ, ಜನಪರ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ. ಸರ್ಕಾರದ ಭದ್ರತೆ ನಂಬಿ ನಾನು ಹೋರಾಟ ಮಾಡುತ್ತಿಲ್ಲ. ನನ್ನ ಹೋರಾಟ ನಿರಂತರವಾಗಿದೆ. ಮುಂದಿನ ದಿನಗಳಲ್ಲಿ ಏನಾದರೂ ಅನಾಹುತವಾದಲ್ಲಿ ಅದಕ್ಕೆ ಸರ್ಕಾರವೇ ಹೊಣೆ ಎಂದು ಶಾಸಕ ಯತ್ನಾಳ ಪತ್ರದಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net