

ವಿಜಯಪುರ: ಯೂಕ್ರೇನ್ ವಿರುದ್ಧ ರಷ್ಯಾ ಯುದ್ಧ ಸಾರಿದ ಹಿನ್ನೆಲೆಯಲ್ಲಿ ಈಗ ಜಗತ್ತಿನಾದ್ಯಂತ ಆತಂಕದ ಕಾರ್ಮೋಡ ಆವರಿಸಿದೆ. ವಿಜಯಪುರ ಜಿಲ್ಲೆ ಏಳು ಜನರು ಯೂಕ್ರೇನ್‌ನಲ್ಲಿ ನೆಲೆಸಿದ್ದು, ಅವರ ಪಾಲಕರಲ್ಲಿ ತಳಮಳ ಉಂಟು ಮಾಡಿದೆ.ತಾಳಿಕೋಟೆ ತಾಲೂಕಿನ ತಮದಡ್ಡಿ ಗ್ರಾಮದ ಸುಚಿತ್ರಾ ಮಲ್ಲನಗೌಡ ಕವಡಿಮಟ್ಟಿ ಸೇರಿದಂತೆ ಏಳು ಜನರು ಯೂಕ್ರೇನ್‌ನಲ್ಲಿ ಇದ್ದಾರೆ. ಬಹುತೇಕರು ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾರೆ. ಡಿಸಿಸಿ ಬ್ಯಾಂಕ್ ನೌಕರ ಮಲ್ಲನಗೌಡ ಕವಡಿಮಟ್ಟಿ ಅವರ ಪುತ್ರಿ ಸುಚಿತ್ರಾ ಎಂದು ತಿಳಿದು ಬಂದಿದೆ. ಇನ್ನುಳಿದಂತೆ ಹಿರಿಯ ಪತ್ರಕರ್ತ ಅಲ್ಲಮಪ್ರಭು ಮಲ್ಲಿಕಾರ್ಜುನಮಠ ಹಾಗೂ ಬೆಂಗಳೂರಿನ ಬಿಎಂಎಸ್‌ಟಿ ಕಾಲೇಜಿನ ಕಂಪ್ಯೂಟರ್ ವಿಭಾಗದ ಮುಖ್ಯಸ್ಥೆ ಡಾ.ಭುವನೇಶ್ವರಿ ಅವರ ಪುತ್ರಿ ವಿವಿಧಾ ಅಲ್ಲಮಪ್ರಭು ಮಲ್ಲಿಕಾರ್ಜುನಮಠ ಅವರು 3ನೇ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾರೆ. ಅವರಲ್ಲದೆ ಜಿಲ್ಲೆಯ ಶ್ರದ್ಧಾ ದುಂಡಪ್ಪ ನಾಯ್ಕರ, ಪೂಜಾ ರಮೇಶ ಲೋಣಿ, ಅಮನ್ ಮಮದಾಪುರ, ರಕ್ಷಾ ಶಿವಪ್ಪ ಕಂಭಾಗಿ ಹಾಗೂ ಪ್ರೀತಿ ನಾಡಗೌಡ ಅವರು ಯೂಕ್ರೇನ್‌ನಲ್ಲಿ ನೆಲೆಸಿದ್ದಾರೆ. ಬಹುತೇಕರು ವೈದ್ಯಕೀಯ ವ್ಯಾಸಂಗಕ್ಕಾಗಿ ತೆರಳಿದ್ದಾರೆ.
ಯೂಕ್ರೇನ್‌ನ ಸ್ಥಿತಿ ಬಿಚ್ಚಿಟ್ಟ ವಿವಿಧಾ
ಯೂಕ್ರೇನ್‌ನಲ್ಲಿ ಮೂರನೇ ವರ್ಷದ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ವಿವಿಧಾ ಅಲ್ಲಮಪ್ರಭು ಮಲ್ಲಿಕಾರ್ಜುನಮಠ ವಿಜಯವಾಣಿಯೊಂದಿಗೆ ವ್ಯಾಟ್ಸ್ ಆ್ಯಪ್ ಕರೆ ಮೂಲಕ ಅಲ್ಲಿನ ಸ್ಥಿತಿಗತಿ ಬಗ್ಗೆ ಬಿಚ್ಚಿಟ್ಟರು. ಯೂಕ್ರೇನ್‌ನಲ್ಲಿ ಈಗ ಬಾಂಬ್‌ಗಳ ಶಬ್ದ ಕೇಳಿಸುತ್ತಿದೆ. ಭಾರತದ ಸಾವಿರಾರು ಜನರನ್ನು ಕೀವ್ ನಗರದ ಮೆಟ್ರೋ ಸ್ಟೇಷನ್‌ನಲ್ಲಿ ಸೇರಿಸಲಾಗಿದೆ. ಭಾರತಕ್ಕೆ ವಾಪಸಾಗುವ ಸಂಬಂಧ ತುರ್ತು ಅರ್ಜಿ ತುಂಬುವಂತೆ ಹೇಳಿದ್ದಾರೆ. ಇನ್ನೆರಡು ದಿನಗಳಲ್ಲಿ ನಮ್ಮನ್ನು ತಾಯಿ ನಾಡಿಗೆ ಕಳುಹಿಸುವುದಾಗಿ ತಿಳಿಸಿದ್ದಾರೆ. ಆದರೆ ವಿಮಾನ ಹಾರಾಟ ಸಂಪೂರ್ಣ ರದ್ದಾಗಿದ್ದು, ಹಾಗಾಗಿ ಆತಂಕಗೊಂಡಿದ್ದೇವೆ ಎಂದು ವಿವಿಧಾ ತಿಳಿಸಿದರು.
ಖಾರ್ಕಿವ್ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ 2ನೇ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತೇನೆ. ಯೂಕ್ರೇನ್‌ನಲ್ಲಿ ಯುದ್ಧ ನಡೆಯುತ್ತಿದ್ದು, ಅಲ್ಲಿಂದ ವಾಪಸ್ ಬರುವುದಕ್ಕೆ ಕಷ್ಟವಾಯಿತು. ಬಹಳ ಭಯಗೊಂಡಿದ್ದೆ. ಇದೀಗ ಸುರಕ್ಷಿತವಾಗಿ ಬೆಂಗಳೂರಿಗೆ ಬಂದಿದ್ದೇನೆ. ನಾಳೆ ವಿಜಯಪುರಕ್ಕೆ ಬರುತ್ತೇನೆ.
ಸ್ನೇಹಾ ಪಾಟೀಲ, ವಿಜಯಪುರ
ನನ್ನ ಮಗಳು ವೈದ್ಯಕೀಯ ವ್ಯಾಸಂಗಕ್ಕಾಗಿ ಯೂಕ್ರೇನ್‌ಗೆ ತೆರಳಿದ್ದಾಳೆ. ಮಗಳೊಂದಿಗೆ ಮಾತನಾಡಿದ್ದೇವೆ. ಕೇಂದ್ರ ಸರ್ಕಾರದೊಂದಿಗೆ ಸಂಪರ್ಕ ಸಾಧಿಸಿದ್ದು, ಮಗಳು ಸುರಕ್ಷತೆಯಿಂದ ತಾಯಿನಾಡಿಗೆ ವಾಪಸ್ ಮರಳುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು.
ಅಲ್ಲಮಪ್ರಭು ಮಲ್ಲಿಕಾರ್ಜುನಮಠ ವಿವಿಧಾ ಪಾಲಕರು
ಮಗಳು ಸುರಕ್ಷಿತವಾಗಿ ಇರುವುದಾಗಿ ತಿಳಿಸಿದ್ದಾಳೆ. ಆದರೂ ಆತಂಕ ಹೆಚ್ಚಾಗಿದೆ. ಮಗಳ ಬರುವಿಕೆಗಾಗಿ ಕಾಯುತ್ತಿದ್ದೇವೆ. ದೇವರ ದಯೆಯಿಂದ ಸುರಕ್ಷಿತವಾಗಿ ಬರಲಿ.
ಮಲ್ಲನಗೌಡ ಕವಡಿಮಟ್ಟಿ ಸುಚಿತ್ರಾ ಅವರ ತಂದೆ