ರಾಹುಲ್-ಪ್ರಿಯಾಂಕ ಮೇಲಿನ ಹಲ್ಲೆಗೆ ಖಂಡನೆ

VJP 2-4
Published on

ವಿಜಯಪುರ: ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದೂರ್ ಶಾಸ್ತ್ರಿ ಜಯಂತಿ ಅಂಗವಾಗಿ ಶುಕ್ರವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ‘ಕಿಸಾನ್ ಮಜ್ದೂರ್ ಬಚಾವೋ ದಿವಸ’ ಆಚರಿಸಲಾಯಿತು.

ಬಳಿಕ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ರೈತ ಹಾಗೂ ಕಾರ್ಮಿಕ ವಿರೋಧಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು. ಜತೆಗೆ ಉತ್ತರ ಪ್ರದೇಶದಲ್ಲಿ ದಲಿತ ಮಹಿಳೆ ಮೇಲೆ ನಡೆದ ಅತ್ಯಾಚಾರ ಪ್ರಕರಣ ಖಂಡಿಸಿ ಸದರಿ ಸಂತ್ರಸ್ತೆ ಕುಟುಂಬಸ್ಥರಿಗೆ ಸಾಂತ್ವನ ಹೇಳಲು ಹೊರಟಿದ್ದ ಎಐಸಿಸಿ ಅಧ್ಯಕ್ಷ ಸಂಸದ ರಾಹುಲ್ ಗಾಂಧಿ ಹಾಗೂ ಪಕ್ಷದ ಉಸ್ತುವಾರಿ ಪ್ರಿಯಾಂಕ ಗಾಂಧಿ ವಾದ್ರಾ ಅವರ ಮೇಲೆ ಉತ್ತರ ಪ್ರದೇಶದ ಪೊಲೀಸರು ನಡೆಸಿದ ಗುಂಡಾವರ್ತನೆ ವಿರೋಧಿಸಿ ಘೋಷಣೆ ಕೂಗಿದರು.

ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ರೈತ ವಿರೋಧಿ, ಕಾರ್ಮಿಕ ವಿರೋಧಿ ಸರ್ಕಾರಗಳಾಗಿವೆ. ಈ ಸರ್ಕಾರಗಳು ಬಂಡವಾಳ ಶಾಹಿಗಳ ಕೈಗೊಂಬೆಯಾಗಿ ಇಡೀ ದೇಶದಲ್ಲಿ ಖಾಸಗೀಕರಣ ಮಾಡಲು ಹೊರಟಿವೆ. ಅಚ್ಚೇದಿನ ಹೆಸರಲ್ಲಿ ಅಧಿಕಾರಕ್ಕೆ ಬಂದಂತಹ ಬಿಜೆಪಿ ಸರ್ಕಾರಗಳು ರೈತರು, ಕಾರ್ಮಿಕರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಕಾನೂನುಗಳನ್ನು ರಚಿಸಿ ಜನ ವಿರೋಧಿಗಳಾಗಿವೆ. ತಕ್ಷಣ ಮಾನ್ಯ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ಈ ತಿದ್ದುಪಡಿ ಕಾಯ್ದೆಗಳನ್ನು ಜಾರಿಯಾಗದಂತೆ ತಡೆಹಿಡಿಯಬೇಕೆಂದರು.

ಅಬ್ದುಲ್ ಖಾದರ್ ಖಾದಿಂ, ಜ್ಯೋತಿರಾಮ ಪವಾರ, ವಿದ್ಯಾರಾಣಿ ತುಂಗಳ, ಡಿ.ಎಚ್. ಕಲಾಲ, ವೈಜನಾಥ ಕರ್ಪೂರಮಠ, ಶಬ್ಬೀರ ಜಾಗೀರದಾರ, ಚಾಂದಸಾಬ ಗಡಗಲಾವ, ಜಮೀರ್ ಬಕ್ಷೀ, ಶಹಜಹಾನ ದುಮಸಿ, ಜಯಶ್ರೀ ಭಾರತೆ, ವಿನೋದ ವ್ಯಾಸ, ಪೀರಪ್ಪ ನಡುವಿನಮನಿ, ಮಲ್ಲನಗೌಡ ಬಿರಾದಾರ, ಸುರೇಶ ಘೋಣಸಗಿ, ವಸಂತ ಹೊನಮೊಡೆ, ಈರಪ್ಪ ಜಕ್ಕಣ್ಣವರ, ಶರಣಪ್ಪ ಯಕ್ಕುಂಡಿ, ಸುಭಾಷ ಕಾಲೇಬಾಗ, ಜಮೀರ್ ಬಾಂಗಿ, ಅನ್ನಪೂರ್ಣ ಬೀಳಗೀಕರ, ಮಂಜುಳಾ ಗಾಯಕವಾಡ, ಮಂಜುಳಾ ಜಾಧವ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net