

ವಿಜಯಪುರ: ನಗರ ಹೊರವಲಯದ ಕ್ಲಬ್‌ವೊಂದರಲ್ಲಿ ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಸಾಮೂಹಿಕವಾಗಿ ಜೂಜಾಡುತ್ತಿರುವ ಆರೋಪದ ಹಿನ್ನೆಲೆ ಶನಿವಾರ ಅಧಿಕಾರಿಗಳ ತಂಡ ದಾಳಿ ನಡೆಸಿದೆ.
ಉಪವಿಭಾಗಾಧಿಕಾರಿ ಬಲರಾಮ ಲಮಾಣಿ, ತಹಸೀಲ್ದಾರ್ ಸಿದ್ದರಾಮ ಭೋಸಗಿ ಹಾಗೂ ಡಿವೈಎಸ್‌ಪಿ ಕೆ.ಸಿ. ಲಕ್ಷ್ಮಿನಾರಾಯಣ ನೇತೃತ್ವದ ತಂಡ ದಾಳಿ ನಡೆಸಿದೆ. ದಾಳಿ ವೇಳೆ ಜೂಜಾಟ ಆಡುತ್ತಿರುವುದು ಕಂಡು ಬಂದಿಲ್ಲ ಎಂದು ಎಸಿ ಬಲರಾಮ ಲಮಾಣಿ ತಿಳಿಸಿದ್ದಾರೆ.
ರಾಯಲ್ ಕ್ಲಬ್‌ನಲ್ಲಿ ನಿಯಮ ಬಾಹಿರವಾಗಿ ಜೂಜಾಟವಾಡುತ್ತಿದ್ದರೆಂಬ ಮಾಹಿತಿ ಆಧರಿಸಿ ದಾಳಿ ನಡೆದಿದ್ದು, ಈ ವೇಳೆ ಸ್ಥಳದಲ್ಲಿ ಯಾರೂ ಇರಲಿಲ್ಲ. ಈ ಬಗ್ಗೆ ಜಿಲ್ಲಾಡಳಿತಕ್ಕೆ ವರದಿ ನೀಡಿದ್ದಾಗಿ ಲಮಾಣಿ ಹೇಳಿದ್ದಾರೆ.
ವಿಡಿಯೋ ವೈರಲ್
ಸದರಿ ಕ್ಲಬ್‌ನಲ್ಲಿ ಜೂಜಾಡುತ್ತಿದ್ದ ವಿಡಿಯೋ ವೈರಲ್ ಆಗಿದೆ. ಕೋಣೆ ಬಾಗಿಲು ಮುಚ್ಚಿ ಒಳಗಡೆ ಜೂಜಾಡುತ್ತಿದ್ದ ದೃಶ್ಯವಿದೆ. ಓರ್ವ ಇಸ್ಪೀಟ್ ಎಲೆ ಹಾಕುತ್ತಿದ್ದು, ಹತ್ತಕ್ಕೂ ಅಧಿಕ ಜನ ಸುತ್ತಲೂ ಕುಳಿತು ಜೂಜಾಡುತ್ತಿದ್ದಾರೆ. ಸದರಿ ಕ್ಲಬ್ ಪರವಾನಗಿ ಹೊಂದಿದೆ. ಇಂಥ ಕ್ಲಬ್‌ಗಳಲ್ಲಿ ಮನರಂಜನೆಗೆ ಮಾತ್ರ ಇಸ್ಪೀಟ್ ಆಡಲು ಅವಕಾಶ ಇದೆ. ಆದರಿಲ್ಲಿ ಜೂಜಾಡುತ್ತಿರುವುದು ಕಂಡು ಬಂದಿದೆ.
ಅಕ್ರಮವಾಗಿ ಜೂಜಾಟ
ಸದರಿ ಕ್ಲಬ್‌ನಲ್ಲಿ ನಿಯಮ ಉಲ್ಲಂಘಿಸಿ ಜೂಜಾಡುತ್ತಿದ್ದು, ಇದರಲ್ಲಿ ಪ್ರತಿಷ್ಠಿತ ವ್ಯಕ್ತಿಗಳ ಕೈವಾಡವಿದೆ ಎನ್ನಲಾಗುತ್ತಿದೆ. ಮಾತ್ರವಲ್ಲ, ಪೊಲೀಸ್ ಇಲಾಖೆಗೂ ತಿಂಗಳ ವಂತಿಗೆ ಹೋಗುತ್ತಿದ್ದು, ಯಾರೊಬ್ಬರೂ ದಾಳಿಗೆ ಮುಂದಾಗುತ್ತಿಲ್ಲ ಎಂಬುದು ಸ್ಥಳೀಯರ ಆರೋಪ. ಹೀಗಾಗಿ ಇನ್ನಾದರೂ ಪೊಲೀಸ್ ಇಲಾಖೆ ಇಂಥ ಕ್ಲಬ್‌ಗಳ ಮೇಲೆ ನಿಗಾ ಇರಿಸಿ ಕಾನೂನು ಸುವ್ಯವಸ್ಥೆ ಕಾಪಾಡಲಿದೆಯಾ ಕಾದು ನೋಡಬೇಕು.
ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ರಾಯಲ್ ಕ್ಲಬ್ ಮೇಲೆ ದಾಳಿ ನಡೆಸಲಾಗಿದೆ. ದಾಳಿ ವೇಳೆ ಯಾರೂ ಇರಲಿಲ್ಲ. ಬಾಗಿಲು ಬಂದ್ ಮಾಡಲಾಗಿತ್ತು. ಈ ಬಗ್ಗೆ ಜಿಲ್ಲಾಡಳಿತಕ್ಕೆ ವರದಿ ನೀಡಲಾಗಿದೆ.
ಬಲರಾಮ ಲಮಾಣಿ, ಉಪ ವಿಭಾಗಾಧಿಕಾರಿ