ಪೊಲೀಸರ ಕಾರ್ಯವೈಖರಿಗೆ ಮೆಚ್ಚುಗೆ

vjp-Lockdown-1
Published on

ವಿಜಯಪುರ: ಲಾಕ್‌ಡೌನ್ ಮೊದಲ ದಿನದಂದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದ ಪೊಲೀಸರು ಎರಡನೇ ದಿನದಂದು ವ್ಯಾಪಕ ಪ್ರಶಂಸೆಗೆ ಒಳಗಾದರಲ್ಲದೆ, ಲಾಠಿ ಏಟಿನ ರುಚಿ ತೋರದೆ ಲಾಕ್‌ಡೌನ್ ಸಫಲಗೊಳಿಸಿದ್ದಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಯಿತು.

ಮೊದಲ ದಿನದಂದು ಬೆಳಗ್ಗೆಯೇ ದಾರಿಹೋಕರನ್ನು ಹಿಗ್ಗಾಮುಗ್ಗಾ ಥಳಿಸಲಾಗಿತ್ತು. ಅಗತ್ಯ ಹಾಗೂ ಅನಗತ್ಯ ಓಡಾಟಗಾರರನ್ನು ಸೇರಿಸಿ ಬೆತ್ತದ ರುಚಿ ತೋರಿಸಿದ್ದರು. ಸಾರ್ವಜನಿಕರು ತೀವ್ರ ಆಕ್ರೋಶ ಹೊರಹಾಕಿದ್ದರು. ಎರಡನೇ ದಿನ ಮಂಗಳವಾರ ಯಾವುದೇ ಲಾಠಿ ಏಟಿಲ್ಲದೆ ಪರಿಸ್ಥಿತಿ ನಿಭಾಯಿಸಿದ್ದು ಪ್ರಶಂಸೆಗೆ ಪಾತ್ರವಾಯಿತು.

ದಂಡಕ್ಕೆ ಮೊರೆ
ನಗರದ ಮಹಾತ್ಮ ಗಾಂಧಿ ವೃತ್ತ ಸೇರಿದಂತೆ ವಿವಿಧೆಡೆ ಕಟ್ಟುನಿಟ್ಟಿನ ತಪಾಸಣೆ ನಡೆಸಿದ ಪೊಲೀಸರು ಅನಗತ್ಯವಾಗಿ ಹೊರಬಿದ್ದವರಿಗೆ ದಂಡ ವಿಧಿಸಿದರು. ಕೆಲವು ವಾಹನಗಳನ್ನು ಜಪ್ತಿ ಮಾಡಿಕೊಂಡರು. ಕೆಲವರಿಗೆ ತಿಳಿಹೇಳಿ ಕಳುಹಿಸಿದರು. ಇನ್ನೂ ಕೆಲವರಿಗೆ ಮುಂಜಾಗ್ರತೆ ವಹಿಸಿ ಮನೆಯಲ್ಲಿಯೇ ಇರಿ ಎಂದು ಜಾಗೃತಿ ಮೂಡಿಸಿದರು. ತುರ್ತು ಕಾರ್ಯಗಳಿಗೆ ತೆರಳುತ್ತಿರುವವರಿಗೆ ಅನುವು ಮಾಡಿಕೊಟ್ಟರು.

ಅಗತ್ಯ ವಸ್ತುಗಳ ಮಾರಾಟ
ಬೆಳಗ್ಗೆ 6 ರಿಂದ 10ರವರೆಗೆ ಅಗತ್ಯ ವಸ್ತುಗಳ ಮಾರಾಟ ಸಾಂಗವಾಗಿ ನಡೆಯಿತು. ತರಕಾರಿ ವ್ಯಾಪಾರಸ್ಥರು ಹೆಚ್ಚಾಗಿ ತಳ್ಳುಗಾಡಿ ಉಪಯೋಗಿಸಿದ್ದರಿಂದ ಎಲ್ಲೂ ಜನ ಜಂಗುಳಿ ಏರ್ಪಡಲಿಲ್ಲ. ಬಡಾವಣೆಗಳಲ್ಲಿ ತಳ್ಳುಗಾಡಿ ಸಂಚರಿಸಿದ್ದರಿಂದ ಬಹುತೇಕರು ಮಾರುಕಟ್ಟೆ ಪ್ರದೇಶಗಳತ್ತ ಮುಖ ಮಾಡಲಿಲ್ಲ. ಆಯಾ ಭಾಗದಲ್ಲಿಯೇ ದಿನಸಿ ಮತ್ತು ತರಕಾರಿ ಖರೀದಿಸಿ ಮನೆ ಸೇರಿದರು. ತೀರ ಅಗತ್ಯ ಕಂಡು ಬಂದಲ್ಲಿ ಮಾತ್ರ ಜನ ಮನೆಯಿಂದ ಹೊರಬಿದ್ದರು. ಹೀಗಾಗಿ ಬಹುತೇಕ ರಸ್ತೆಗಳು ವಾಹನ ಸಂಚಾರದಿಂದ ಮುಕ್ತವಾಗಿದ್ದವು. ಪ್ರಮುಖ ಮಾರ್ಗಗಳೆಲ್ಲ ಬಿಕೋ ಎನ್ನುತ್ತಿದ್ದವು. ಆಟೋ ಸಂಚಾರ ಬಂದ್ ಇದ್ದ ಕಾರಣ ಕೆಲವರು ತುರ್ತು ಕಾರ್ಯಗಳಿಗೆ ಟಾಂಗಾ ಬಳಸಿದ್ದು ಕಂಡು ಬಂತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net