ವಿಜಯಪುರ : ಗ್ರಾಮೀಣ ಮಹಿಳೆಯರಿಗೆ ಯೋಜನೆಗಳು ತಲುಪಲಿ

hhh
ವಿಜಯಪುರದ ಹಿಟ್ನಳ್ಳಿಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕೃಷಿ ಸಖಿ ತರಬೇತಿ ಕಾರ್ಯಕ್ರಮವನ್ನು ಧಾರವಾಡ ಕೃಷಿ ವಿಶ್ವವಿದ್ಯಾಲಯ ವ್ಯವಸ್ಥಾಪನಾ ಮಂಡಳಿ ಸದಸ್ಯ ಪಿ.ಮಲ್ಲೇಶ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು. ಡಾ.ಆರ್.ಬಿ.ಬೆಳ್ಳಿ, ಡಾ. ಶುಭಾ. ಎಸ್, ಆರ್.ಎಸ್.ಅಥಣಿ ಮತ್ತಿತರರಿದ್ದರು.
Published on

ವಿಜಯಪುರ : ಕೃಷಿ ಅಭಿವೃದ್ಧಿಯಲ್ಲಿ ಗ್ರಾಮೀಣ ಮಹಿಳೆಯರ ಪಾತ್ರ ಪ್ರಮುಖವಾಗಿದ್ದು, ಅವರ ಸಬಲೀಕರಣ ಕಾರ್ಯಕ್ರಮಗಳು ಹೆಚ್ಚಾಗಬೇಕಾಗಿದೆ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯ ವ್ಯವಸ್ಥಾಪನಾ ಮಂಡಳಿ ಸದಸ್ಯ ಪಿ.ಮಲ್ಲೇಶ ಹೇಳಿದರು.

ನಗರದ ಹಿಟ್ನಳ್ಳಿಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯ, ಕೌಶಲಾಭಿವೃದ್ಧಿದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ- ಕರ್ನಾಟಕ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ, ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕೃಷಿ ಸಖಿ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕೃಷಿ ಸಖಿಯರು ಕೃಷಿ ಮತ್ತು ಕೃಷಿ ಸಂಬಂಧಿಸಿದ ಇಲಾಖೆಗಳೊಂದಿಗೆ ಕೊಂಡಿಯಂತೆ ಕೆಲಸ ನಿರ್ವಹಿಸಿ ಇಲಾಖೆಯ ಯೋಜನೆಗಳನ್ನು ಗ್ರಾಮೀಣ ಮಹಿಳೆಯರಿಗೆ ತಲುಪಿಸಲು ಶ್ರಮಿಸಬೇಕೆಂದು ಸಲಹೆ ನೀಡಿದರು.

ಕೃಷಿ ಮಹಾವಿದ್ಯಾಲಯದ ಸಹ ವಿಸ್ತರಣಾ ನಿರ್ದೇಶಕ ಡಾ.ಆರ್.ಬಿ.ಬೆಳ್ಳಿ ಮಾತನಾಡಿ, ಗ್ರಾಮೀಣ ಪ್ರದೇಶದ ಸಣ್ಣ ಮತ್ತು ಅತಿಸಣ್ಣ ಮಹಿಳಾ ರೈತರ ಕುಟುಂಬಗಳಿಗೆ ಅವಶ್ಯವಾಗಿ ದೊರೆಯಬೇಕಾಗಿರುವ ಕೃಷಿ ಮತ್ತು ಸಂಬಂಧಿತ ವಿಸ್ತರಣಾ ಸೇವೆಗಳನ್ನು ಪರಿಣಾಮಕಾರಿಯಾಗಿ ನಿಗದಿತ ಸಮಯದಲ್ಲಿ ಒದಗಿಸಬೇಕು. ಆ ಮೂಲಕ ಅವರ ಉತ್ಪಾದನೆ ಮತ್ತು ಆದಾಯದಲ್ಲಿ ಹೆಚ್ಚಳ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಕೃಷಿ ವಿಶ್ವವಿದ್ಯಾಲಯ ಧಾರವಾಡ ಸಾಕಷ್ಟು ತರಬೇತಿ ಕಾರ್ಯಕ್ರಮಗಳನ್ನು, ಪ್ರಾತ್ಯಕ್ಷಿಕೆಗಳನ್ನು , ಕೃಷಿಮೇಳಗಳನ್ನು ಆಯೋಜಿಸುವ ಮೂಲಕ ಕೃಷಿ ಸಖಿಯರ ಸಬಲೀಕರಣದತ್ತ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ ಎಂದರು.

ಜಿಪಂ ಮುಖ್ಯ ಲೆಕ್ಕಾಧಿಕಾರಿ ಆರ್.ಎಸ್.ಅಥಣಿ ಮಾತನಾಡಿ, ಸ್ವಸಹಾಯ ಗುಂಪಿನ ಸದಸ್ಯ ಮಹಿಳಾ ರೈತರಿಗೆ ಕೃಷಿ, ತೋಟಗಾರಿಕೆ, ರೇಷ್ಮೆ, ಪಶು ಸಂಗೋಪನೆ, ಮೀನುಗಾರಿಕೆ ಇಲಾಖಾ ಕಾರ್ಯಮಗಳ ವಿಸ್ತರಣಾ ಸೇವೆಗಳನ್ನು ಪರಿಣಾಮಕಾರಿಯಾಗಿ ಒದಗಿಸುವ ಉದ್ದೇಶ ಹೊಂದಲಾಗಿದ್ದು, ಕಾರ್ಯಕ್ರಮ ಯಶಸ್ವಿಗೊಳಿಸಲು ಶ್ರಮಿಸಬೇಕಾಗಿದೆ ಎಂದರು.

ಸಾಹಿತಿ ಫ.ಗು.ಸಿದ್ದಾಪುರ ಅವರು ಕೃಷಿಯಲ್ಲಿ ಮಹಿಳೆಯರ ಪಾತ್ರದ ಬಗ್ಗೆ ಹಾಗೂ ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರದ ಬಗ್ಗೆ ವಿವರವಾಗಿ ತಿಳಿಸಿದರು.

ಕೃಷಿ ವಿಶ್ಯವಿದ್ಯಾಲಯದಿಂದ ಪುರಸ್ಕೃತಗೊಂಡ ಜಿಲ್ಲಾಮಟ್ಟದ ಶ್ರೇಷ್ಠ ಕೃಷಿಕ ಬಸವರಾಜ ಸಿದ್ದಾಪುರ ಹಾಗೂ ಕೃಷಿ ಮಹಿಳೆ ಸುಲೋಚನಾ ಮಮದಾಪುರ ಅವರನ್ನು ಸನ್ಮಾನಿಸಲಾಯಿತು.

ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥೆ ಡಾ. ಶುಭಾ. ಎಸ್, ಜಿಪಂ ಕಾರ್ಯಕ್ರಮ ವ್ಯವಸ್ಥಾಪಕ ವಿಶ್ವನಾಥ್, ಡಾ. ಸಂಗೀತಾ ಜಾಧವ, ಡಾ.ವೀವೇಕ ದೇವರನಾವದಗಿ, ಡಾ.ಶಿವಲಿಂಗಪ್ಪ ಹೊಟಕರ, ಡಾ.ಕುಶಾಲ, ಶ್ರೀಶೈಲ ರಾಠೋಡ, ಬಿ.ಸಿ ಕೊಲ್ಹಾರ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಕೃಷಿ ಸಖಿಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net