

ಹೀರಾನಾಯ್ಕ ಟಿ. ವಿಜಯಪುರ
ಕಳೆದ ವರ್ಷ ಈರುಳ್ಳಿ ಬೆಲೆ ಸಿಕ್ಕಾಪಟ್ಟೆ ಏರಿದ್ದನ್ನು ಕಂಡಿದ್ದು ಆಯಿತು. ಈ ವರ್ಷ ಟೊಮ್ಯಾಟೊ ಸರದಿ. ಕರೊನಾಂತಕದ ನಡುವೆಯೂ ತರಕಾರಿ ಬೆಲೆಯಲ್ಲಿ ಹೆಚ್ಚಳಗೊಂಡಿದ್ದು, ಕೆಜಿ ಟೊಮ್ಯಾಟೊ 50 ರೂ. ದಾಟಿದೆ. ಈಗಾಗಲೇ ಲಾಕ್‌ಡೌನ್‌ನಿಂದಾಗಿ ಸಾಕಷ್ಟು ನಷ್ಟ ಅನುಭವಿಸಿದ್ದ ತರಕಾರಿ ಬೆಳೆಗಾರರಲ್ಲಿ ಸ್ವಲ್ಪ ಬೆಲೆ ಏರಿಕೆಯಿಂದಾಗಿ ನಗುಮೊಗದಲ್ಲಿದ್ದಾರೆ.
ಕಳೆದ ವಾರವಷ್ಟೇ ವಿಜಯಪುರ ಮುಕ್ತ ಮಾರುಕಟ್ಟೆಯಲ್ಲಿ ಕೆಜಿಗೆ 30 ರೂ. ಇದ್ದ ಟೊಮ್ಯಾಟೊ ದರ ಇದೀಗ ಒಂದೇ ವಾರದಲ್ಲಿ 20 ರೂ. ಹೆಚ್ಚಳವಾಗಿದ್ದು, ಆ ಮೂಲಕ ಅರ್ಧ ಶತಕ ಬಾರಿಸಿದೆ. ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ ಹೆಚ್ಚಾಗಿ ತರಕಾರಿ ಬೆಳೆ ನಾಟಿ ಮಾಡುತ್ತಾರೆ. ಆದರೆ ಲಾಕ್‌ಡೌನ್ ಹಾಗೂ ಮಳೆ ಕೊರತೆಯಿಂದಾಗಿ ರೈತರು ತರಕಾರಿ ಬೆಳೆಯಲು ಮುಂದಾಗಲಿಲ್ಲ. ಅಲ್ಲದೆ ಕೆಲವರು ಬೆಳೆದ ತರಕಾರಿಗೆ ಉತ್ತಮ ಬೆಲೆ ಸಿಗದ ಹಿನ್ನೆಲೆಯಲ್ಲಿ ಈ ಬಾರಿ ತರಕಾರಿ ಬೆಲೆ ಹೆಚ್ಚಳಗೊಂಡಿದೆ.
ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ ಇನ್ನಿತರ ರಾಜ್ಯಗಳಲ್ಲಿ ಭಾರೀ ಮಳೆ ಕಾರಣಕ್ಕೆ ಪೂರೈಕೆಗೆ ಹೊಡೆತ ಬಿದ್ದಿದೆ. ಆ ಹಿನ್ನೆಲೆಯಲ್ಲಿ ಶುಕ್ರವಾರ ಕೆಜಿ ಟೊಮ್ಯಾಟೊ ವಿಜಯಪುರದ ಮುಕ್ತ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಕಂಡಿದೆ.
ಪೂರೈಕೆ ಮೇಲೆ ಪರಿಣಾಮ ಬೀರಿರುವ ಕಾರಣಕ್ಕೆ ಕಳೆದ ಕೆಲವು ದಿನಗಳಿಂದ ಟೊಮ್ಯಾಟೊ ಬೆಲೆಯಲ್ಲಿ ಏರಿಕೆ ಆಗಿದೆ. ಕರ್ನಾಟಕ, ತೆಲಂಗಾಣ ಸೇರಿದಂತೆ ಟೊಮ್ಯಾಟೊ ಬೆಳೆಯುವ ವಿವಿಧ ರಾಜ್ಯಗಳಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆ ಆಗುತ್ತಿದ್ದು, ಬೆಳೆ ಹಾನಿಯಾಗಿದೆ. ಪೂರೈಕೆ ಕುಂಠಿತವಾಗಿದೆ. ದೆಹಲಿ ಮಾತ್ರ ಅಲ್ಲದೇ ಮುಂಬೈ, ಚೆನ್ನೈ, ಕೋಲ್ಕತ್ತಾ, ಬೆಂಗಳೂರು ಭಾಗದಲ್ಲಿಯೂ ಬೆಲೆಯಲ್ಲಿ ಏರಿಕೆ ಕಂಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ದರ ಏರಿಕೆ ಆಗಲಿದೆ ಎನ್ನುತ್ತಾರೆ ತರಕಾರಿ ವ್ಯಾಪಾರಸ್ಥರು.
ಕಳೆದ ವರ್ಷದ ಗ್ರಾಹಕರ ಕಣ್ಣೀರು ತರಿಸಿದ್ದ ಈರುಳ್ಳಿ ಬೆಲೆ ಈ ವರ್ಷ ಇಳಿಕೆಯಾಗಿದೆ. ಕ್ವಿಂಟಾಲ್‌ಗೆ 800-1000 ರೂ. ಆಸುಪಾಸು ಇದ್ದು, ಮುಕ್ತ ಮಾರುಕಟ್ಟೆಯಲ್ಲಿ ಕಳೆದ ವಾರ ಕೆಜಿ ಈರುಳ್ಳಿಗೆ 10 ರೂ. ನಂತೆ ಮಾರಾಟ ಮಾಡಲಾಗುತ್ತಿತ್ತು. ಈ ವಾರ ಸ್ವಲ್ಪ ಚೇತರಿಕೆ ಕಂಡಿದ್ದು, ಕೆಜಿ ಈರುಳ್ಳಿ 20 ರೂ. ನಂತೆ ಮಾರಾಟ ಮಾಡಲಾಗುತ್ತಿದೆ. ಕಳೆದ ವರ್ಷ ವಿಜಯಪುರ ಎಪಿಎಂಸಿಯಲ್ಲಿ ಕ್ವಿಂಟಾಲ್ ಈರುಳ್ಳಿಗೆ 20 ಸಾವಿರ ರೂ. ಮಾರಾಟಗೊಂಡಿದ್ದು, ರಾಜ್ಯದಲ್ಲೇ ಸಾರ್ವಕಾಲಿಕ ದಾಖಲೆ ಬರೆದಿತ್ತು.
ಎಪಿಎಂಸಿ ಆವರಣದಲ್ಲಿ ವ್ಯಾಪಾರ ಮಾಡುವವರಿಗೆ ಶೇ. 1.5 ರಷ್ಟು ಸೆಸ್ ವಿಧಿಸಿರುವ ಸರ್ಕಾರದ ಧೋರಣೆ ಖಂಡಿಸಿ ಜು.13ರಿಂದ ರಾಜ್ಯಾದ್ಯಂತ ಎಪಿಎಂಸಿಗಳನ್ನು ಬಂದ್ ಮಾಡುವ ನಿರ್ಧಾರವನ್ನು ಕೈಗೊಂಡಿದ್ದು, ಇದರಿಂದಾಗಿ ತರಕಾರಿ ಬೆಲೆ ಮತ್ತಷ್ಟು ಏರಿಕೆಗೆ ಆಗುವ ಸಾಧ್ಯತೆ ಹೆಚ್ಚಿದೆ. ಎಪಿಎಂಸಿ ಹೊರತುಪಡಿಸಿ ಮುಕ್ತ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುವವರಿಗೆ ಯಾವುದೇ ಸೆಸ್ ಇಲ್ಲ. ಆದರೆ ಎಪಿಎಂಸಿ ಆವರಣದಲ್ಲಿ ಮಾರಾಟ ಮಾಡಿದರೆ ಸೆಸ್ ವಿಧಿಸಲಾಗುತ್ತಿದ್ದು, ಸರ್ಕಾರ ಸೆಸ್‌ನಲ್ಲಿ ಏಕರೂಪತೆ ತರಬೇಕು. ರಾಜ್ಯದಲ್ಲಿ 177 ಎಪಿಎಂಸಿ ಮಾರುಕಟ್ಟೆಗಳಿದ್ದು, ಸುಮಾರು 20 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಎಪಿಎಂಸಿ ಮಾರುಕಟ್ಟೆಯನ್ನು ಅವಲಂಬಿಸಿವೆ ಎಂದು ಜಿಲ್ಲಾ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ರವೀಂದ್ರ ಬಿಜ್ಜರಗಿ ಮಾಹಿತಿ ನೀಡುತ್ತಾರೆ.