

ವಿಜಯಪುರ: ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಬೇಕೆಂಬ ಬೇಡಿಕೆಗೆ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ. ಹೀಗಾಗಿ ಪಕ್ಷಾತೀತ ಹೋರಾಟ ಆಗಲೇಬೇಕು. ಅಲ್ಲದೆ, ರಾಜ್ಯದ ಸಂಸದರು ಕೇಂದ್ರದ ಮೇಲೆ ಒತ್ತಡ ಹಾಕಬೇಕೆಂದು ಜೆಡಿಎಸ್ ರಾಷ್ಟ್ರೀಯ ಕಾರ್ಯದರ್ಶಿ ಎನ್.ಎಚ್.ಕೋನರೆಡ್ಡಿ ಆಗ್ರಹಿಸಿದರು.
ಹೋರಾಟದಿಂದಲೇ ಏನಾದರೂ ಪಡೆಯಬೇಕೆಂಬ ಸ್ಥಿತಿ ಉತ್ತರ ಕರ್ನಾಟಕದ್ದಾಗಿದೆ. ರಾಷ್ಟ್ರೀಯ ಯೋಜನೆಯಾಗಲು ಕೃಷ್ಣಾ ಯೋಜನೆ ಶೇ.100ರಷ್ಟು ಅರ್ಹತೆ ಹೊಂದಿದೆ. ಈ ಬಗ್ಗೆ ಹಿಂದಿನ ಸಿಎಂ ಯಡಿಯೂರಪ್ಪ , ಇಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರು ದೆಹಲಿಗೆ ಹೋಗಿ ಮನವಿ ಮಾಡಿಕೊಂಡರೂ ಕೇಂದ್ರ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಹಾಗೂ ಎಂ.ಬಿ.ಪಾಟೀಲರು ನೀರಾವರಿ ಸಚಿವರಾಗಿ ಕೃಷ್ಣಾ ನೀರಾವರಿ ಯೋಜನೆ ಕೆಲಸ ಮಾಡಿದ್ದಾರೆ. ಎಂ.ಬಿ.ಪಾಟೀಲರಿಗಿದ್ದ ಕಾಳಜಿಯನ್ನು ಇದೇ ಭಾಗದವರೇ ಆದ ಗೋವಿಂದ ಕಾರಜೋಳರು ಪ್ರದರ್ಶಿಸಬೇಕೆಂದು ಕೋನರೆಡ್ಡಿ ಆಗ್ರಹಿಸಿದರು.
ಆಲಮಟ್ಟಿ ಡ್ಯಾಂ ನಿರ್ಮಾಣಗೊಂಡು ಕಾಲುವೆ ಕಾಮಗಾರಿ ಪೂರ್ಣಗೊಂಡಿದೆ. ಆದರೆ ನೀರು ಬಳಸಿಕೊಳ್ಳಲಾಗುತ್ತಿಲ್ಲ. ಆಂಧ್ರಪ್ರದೇಶ, ತೆಲಂಗಾಣ ಸರ್ಕಾರಗಳು ಸಾಕಷ್ಟು ನೀರಾವರಿ ಕೆಲಸ ಮಾಡಿವೆ. ಅದೇ ರೀತಿ ನಮ್ಮಲ್ಲೂ ನೀರಾವರಿ ಕೆಲಸ ಆಗಬೇಕು. ಕೃಷ್ಣಾ ಯೋಜನೆ ಅನುಷ್ಠಾನಕ್ಕೆ ಮೂರು ಪಕ್ಷಗಳು ಕೇಂದ್ರದ ಗಮನ ಸೆಳೆಯಬೇಕೆಂದು ತಿಳಿಸಿದರು.
ಕೃಷ್ಣಾ ರಾಷ್ಟ್ರೀಯ ಯೋಜನೆಗೆ ಪಕ್ಷಾತೀತ ಹೋರಾಟ ಅನಿವಾರ್ಯ. ಈ ಬಗ್ಗೆ ಮೂರು ಪಕ್ಷಗಳು ಆಸಕ್ತಿ ವಹಿಸಬೇಕು. ಜತೆಗೆ ಏಳು ಜಿಲ್ಲೆಗಳ ಜನತೆ ಹೋರಾಟಕ್ಕೆ ಕೈಜೋಡಿಸಬೇಕೆಂದರು. ಆಲಮಟ್ಟಿ ಡ್ಯಾಂ ಎತ್ತರಿಸಿದರೆ ಮುಳುಗಡೆಯಾಗುವ ಜಮೀನಿಗೆ ಮಾರುಕಟ್ಟೆ ಬೆಲೆಗಿಂತ ನಾಲ್ಕು ಪಟ್ಟು ಹೆಚ್ಚಿನ ದರ ಅಥವಾ ಏಕರೂಪದ ಬೆಲೆ ನಿಗದಿಪಡಿಸಬೇಕೆಂದು ಆಗ್ರಹಿಸಿದರು.
ಜೆಡಿಎಸ್‌ನಲ್ಲೇ ಇದ್ದೀನಿ
ಪಕ್ಷದ ವರಿಷ್ಠರ ಜತೆ ನನಗೆ ಭಿನ್ನಾಭಿಪ್ರಾಯ ಇಲ್ಲ. ನಾನು ಜೆಡಿಎಸ್ ಬಿಡುತ್ತೇನೆಂದು ಎಲ್ಲೂ ಹೇಳಿಲ್ಲ. ಜೆಡಿಎಸ್‌ನಲ್ಲೇ ಇದ್ದೀನಿ ಎಂದು ಮಾಜಿ ಶಾಸಕ, ಜೆಡಿಎಸ್ ರಾಷ್ಟ್ರೀಯ ಕಾರ್ಯದರ್ಶಿ ಎನ್.ಎಚ್.ಕೋನರೆಡ್ಡಿ ತಿಳಿಸಿದರು.
ನಾನು ಜೆಡಿಎಸ್‌ನಲ್ಲಿರುವುದರಿಂದಲೇ ಇಂಡಿಯಲ್ಲಿ ನಡೆದ ನೀರಾವರಿ ಹೋರಾಟ ಸ್ಥಳಕ್ಕೆ ಕುಮಾರಸ್ವಾಮಿ ನನ್ನನ್ನು ಕಳುಹಿಸಿದ್ದಾರೆ. ಈಗಂತೂ ಪಕ್ಷ ಬಿಡುವ ವಿಚಾರ ಇಲ್ಲ. ಸೆ.27ರಿಂದ ನಡೆಯುವ ಪಕ್ಷದ ಕಾರ್ಯಾಗಾರದಲ್ಲಿ ಸಾಕಷ್ಟು ವಿಚಾರ ಚರ್ಚೆಯಾಗಲಿವೆ ಎಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ, ಮುಖಂಡರಾದ ರಿಯಾಜ್, ರಾಜು ಹಿಪ್ಪರಗಿ, ಸಿದ್ದು ಕಾಮತ್, ಖಾದ್ರಿ ಇನಾಮದಾರ, ಹುಸೇನ್ ಬಾಗಾಯತ್, ಬಿರಾದಾರ ಮತ್ತಿತರರಿದ್ದರು.