ಖಾಸಗಿ ಆಸ್ಪತ್ರೆಗಳೆಲ್ಲ ಭಣಭಣ ..!

HN 17-1
Published on

ಹೀರಾನಾಯ್ಕ ಟಿ. ವಿಜಯಪುರ

ಕರೊನಾ ಮಹಾಮಾರಿ ಇದೀಗ ಆರೋಗ್ಯ ಸೇನಾನಿಗಳಿಗೂ ಕಾಡುತ್ತಿದ್ದು, ಅದಕ್ಕೆ ಹೆದರಿ ಇದೀಗ ಮರಳಿಗೂಡಿಗೆ ಎಂಬಂತೆ ತಮ್ಮ ಊರು ಸೇರಿಕೊಳ್ಳುತ್ತಿದ್ದಾರೆ. ಇನ್ನು ರೋಗಿಗಳು ಆಸ್ಪತ್ರೆಗಳತ್ತ ಮುಖ ಮಾಡುವವರ ಸಂಖ್ಯೆ ಕಡಿಮೆಯಾಗಿದ್ದು, ಖಾಸಗಿ ಆಸ್ಪತ್ರೆಗಳೆಲ್ಲ ಭಣಗುಡುತ್ತಿವೆ.

ರೋಗಿ, ಸಿಬ್ಬಂದಿ ಇಲ್ಲದೆ ಬಿಕೋ

ರೋಗಿಗಳಿಂದ ಹಾಗೂ ಆಸ್ಪತ್ರೆ ಸಿಬ್ಬಂದಿಗಳಿಂದ ಖಾಸಗಿ ಆಸ್ಪತ್ರೆಗಳು ಗಿಜಿಗುಡುತ್ತಿದ್ದ ಸನ್ನಿವೇಶ ಕಣ್ಮರೆಯಾಗಿದ್ದು, ಆಸ್ಪತ್ರೆಗಳೆಲ್ಲ ಭಣ ಭಣ ಎನ್ನುತ್ತಿವೆ. ರಾಜ್ಯದಲ್ಲಿ ಕೆಪಿಎಂಇ ಅಡಿಯಲ್ಲಿ ಒಟ್ಟು 27 ಸಾವಿರ ಖಾಸಗಿ ಆಸ್ಪತ್ರೆಗಳು ನೋಂದಣಿ ಮಾಡಿಸಿಕೊಂಡಿದ್ದು, ಭಾಗಶಃ ಖಾಸಗಿ ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆ ಕಾಡುತ್ತಿದೆ.
ರಾಜ್ಯದಲ್ಲಿ ಒಟ್ಟು 50 ಸಾವಿರ ಖಾಸಗಿ ವೈದ್ಯರು, 75 ಸಾವಿರ ಶುಶ್ರೂಷಕಿಯರು, 1.50 ಲಕ್ಷ ಪ್ಯಾರಾ ಮೆಡಿಕಲ್ ಸಿಬ್ಬಂದಿ ಸೇವೆ ಮಾಡುತ್ತಿದ್ದಾರೆ. ಅದರಲ್ಲಿ ಬಹುತೇಕ ಕೇರಳದವರೆ ಹೆಚ್ಚಾಗಿದ್ದು, ಅವರೆಲ್ಲ ತಮ್ಮ ಊರುಗಳಿಗೆ ತೆರಳಿದ್ದಾರೆ. ಇನ್ನುಳಿದಂತೆ ಸ್ಥಳೀಯವಾಗಿರುವ ಸಿಬ್ಬಂದಿಗಳಿಗೆ ಸೂಕ್ತ ವಾಹನದ ವ್ಯವಸ್ಥೆ, ಆರೋಗ್ಯ ಸುರಕ್ಷತೆ ಇಲ್ಲದೆ ಮನೆಯಿಂದ ಹೊರಬರಲು ಹಿಂದೇಟು ಹಾಕುವಂತಾಗಿದೆ ಎನ್ನುತ್ತಾರೆ ಭಾರತೀಯ ವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷ ಡಾ.ಮಧುಸೂದನ ಕರಿಗನೂರ.

ರೋಗಿಗಳ ಸಂಖ್ಯೆ ಇಳಿಮುಖ

ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ರೋಗಿಗಳು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಬರುತ್ತಾರೆ. ಆದರೆ ಕರೊನಾ ತಡೆಗಟ್ಟಲು ಕೇಂದ್ರ ಸರ್ಕಾರ ಮೇ 3ರ ವರೆಗೆ ಲಾಕ್‌ಡೌನ್ ವಿಸ್ತರಿಸಿದ್ದು, ಇದರಿಂದಾಗಿ ನಗರ, ಪಟ್ಟಣ ಅಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿ ವಾಹನ ಸಂಚಾರಕ್ಕೆ ಸ್ವಯಂ ಪ್ರೇರಿತವಾಗಿ ನಿರ್ಬಂಧ ಹೇರಿರುವುದರಿಂದ ಹಾಗೂ ಸಾರಿಗೆ ವ್ಯವಸ್ಥೆ ಇಲ್ಲದೆ ಇರುವುದರಿಂದ ಗ್ರಾಮೀಣ ಭಾಗದ ಜನರು ಆಸ್ಪತ್ರೆಗಳತ್ತ ಮುಖ ಮಾಡುವವರ ಸಂಖ್ಯೆ ಶೇ.90 ರಷ್ಟು ಕಡಿಮೆಯಾಗಿದೆ.
ಪ್ರತಿ ದಿನ ಸಾವಿರಕ್ಕೂ ಹೆಚ್ಚು ರೋಗಿಗಳು ಆಸ್ಪತ್ರೆಗೆ ಬರುತ್ತಿದ್ದರು ಅವರಿಗೆ ಸೂಕ್ತ ವ್ಯವಸ್ಥೆ ಇಲ್ಲದೆ ಆಸ್ಪತ್ರೆಗೆ ಬರದಂತಾಗಿದೆ. ಆಸ್ಪತ್ರೆಯಲ್ಲಿ 37 ಜನ ಸಿಬ್ಬಂದಿ ಕೆಲಸ ಮಾಡುತ್ತಿದ್ದರು. ಅವರೆಲ್ಲ ತಮ್ಮ ಊರುಗಳಿಗೆ ತೆರಳಿರುವುದರಿಂದ ಆಸ್ಪತ್ರೆಗೆ ಬರುವ ಬೆರಳೆಣಿಕೆಯಷ್ಟು ರೋಗಿಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಕಳುಹಿಸುವ ಪರಿಸ್ಥಿತಿ ಇದೆ ಎಂದು ವಿಜಯಪುರದ ಕಿಡ್ನಿಕೇರ್ ವೈದ್ಯ ಡಾ. ಸುರೇಶ ಕಾಗಲಕರ ರೆಡ್ಡಿ ಮಾಹಿತಿ ನೀಡುತ್ತಾರೆ.

ವಿಜಯಪುರದ ಸ್ಥಿತಿ

ರಾಜ್ಯದಲ್ಲಿ ದಿನೇ ದಿನೇ ಕರೊನಾಘಾತ ಹೆಚ್ಚುತ್ತಿದೆ. ವಿಜಯಪುರ ಜಿಲ್ಲೆಯಲ್ಲಿ 500ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆ, ಕ್ಲಿನಿಕ್‌ಗಳಿವೆ. ವಿಜಯಪುರದಲ್ಲಿ ಖಾಸಗಿ ಆಸ್ಪತ್ರೆಯೊಂದರಲ್ಲಿ ಶುಶ್ರೂಷಕಿಗೆ ಕರೊನಾ ಸೋಂಕು ದೃಢವಾದ ಹಿನ್ನೆಲೆಯಲ್ಲಿ ಪ್ರತಿಷ್ಠಿತ ಯಶೋದಾ, ಕಿಡ್ನಿಕೇರ್, ಡಾ. ಕರಿಗೌಡರ ಆಸ್ಪತ್ರೆ ಸೇರಿದಂತೆ ಬಹುತೇಕ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವ 1,700 ಶುಶ್ರೂಷಕಿಯರು ಕೆಲಸ ತೊರೆದು ಮನೆಕಡೆ ಮುಖಮಾಡಿದ್ದಾರೆ.

ಕರೊನಾ ಹೋರಾಟಕ್ಕೆ ನಾವೆಲ್ಲರೂ ಸಿದ್ಧರಿದ್ದೇವೆ. ಆದರೆ ಸರ್ಕಾರದಿಂದ ಆರೋಗ್ಯ ರಕ್ಷಣೆ ಅಗತ್ಯವಾಗಿದೆ. ವೈದ್ಯರಿಗೆ ಎನ್-95 ಮಾಸ್ಕ್, ಪಿಪಿಇ ಕಿಟ್ ಒದಗಿಸಬೇಕಿದೆ. ಪ್ಯಾರಾ ಮೆಡಿಕಲ್ ಸಿಬ್ಬಂದಿಗೆ ತಾತ್ಕಾಲಿಕವಾಗಿ ಸರ್ಕಾರದಿಂದ 5 ಲಕ್ಷ ರೂ.ಗಳ ಆರೋಗ್ಯ ಮತ್ತು ಜೀವ ವಿಮೆ ನೀಡುವಂತಾಗಬೇಕು.
ಡಾ. ಮಧುಸೂಧನ ಕರಿಗನೂರ, ರಾಜ್ಯಾಧ್ಯಕ್ಷ , ಭಾರತೀಯ ವೈದ್ಯಕೀಯ ಸಂಘ

ಖಾಸಗಿ ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆ ಬಹಳಷ್ಟಿದೆ. ಸಿಬ್ಬಂದಿಗೆ ಕರೆ ಮಾಡಿ ಕರೆದರು ಬರುತ್ತಿಲ್ಲ. ರೋಗಿಗಳಿಗೆ ಚಿಕಿತ್ಸೆ ನೀಡುವುದು ಕಷ್ಟಕರವಾಗಿದೆ. ಶಸಚಿಕಿತ್ಸೆ ಸಂದರ್ಭದಲ್ಲಿ ಶುಶ್ರೂಷಕಿಯರ ಅವಶ್ಯಕತೆ ಇದೆ. ಅವರು ಬರದ ಹಿನ್ನೆಲೆ ಕೆಲವೊಂದು ಶಸಚಿಕಿತ್ಸೆಯನ್ನು ಮುಂದೂಡುವ ಅನಿವಾರ್ಯತೆ ಎದುರಾಗಿದೆ.
ಡಾ. ರವೀಂದ್ರ ಮದರಕಿ, ಹೃದ್ರೋಗ ತಜ್ಞ, ವಿಜಯಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net