ವಿಜಯಪುರ ಎಎಸ್‌ಪಿಗೆ ಗಂಭೀರ ಗಾಯ

VJP 4-2
Published on

ವಿಜಯಪುರ: ಕರ್ತವ್ಯ ನಿರತ ಹೆಚ್ಚುವರಿ ಪೊಲೀಸ್ ಅಧೀಕ್ಷಕರಿಗೆ ಬೈಕ್ ಡಿಕ್ಕಿ ಹೊಡೆದು ಗಂಭೀರ ಗಾಯವಾಗಿದ್ದು, ಅವರ ಅಂಗರಕ್ಷಕನಿಗೂ ಪೆಟ್ಟು ಬಿದ್ದಿದೆ.

ನಗರದ ಗೋಳಗುಮ್ಮಟ ರಸ್ತೆಯಲ್ಲಿರುವ ಕಾಮತ್ ಹೋಟೆಲ್ ಬಳಿ ಸೋಮವಾರ ಘಟನೆ ನಡೆದಿದ್ದು, ಎಎಸ್‌ಪಿ ಡಾ.ರಾಮ ಅರಸಿದ್ದಿ ಹಾಗೂ ಅಂಗರಕ್ಷಕ ರಾಘವೇಂದ್ರ ಜಾಧವ ಗಾಯಗೊಂಡಿದ್ದಾರೆ.
ಕರೊನಾ ನಿಯಂತ್ರಣ ಹಿನ್ನೆಲೆ ಕಂಟೇನ್‌ಮೆಂಟ್ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ. ರಾಮ ಅರಸಿದ್ದಿ ಅವರು ಕಾಮತ್ ಹೋಟೆಲ್ ಬಳಿ ಸಂಚರಿಸುವಾಗ ಅಲ್ಲಿ ಬ್ಯಾರಿಕೇಡ್ ಅಸ್ತವ್ಯಸ್ತವಾಗಿತ್ತು. ಅದನ್ನು ಗಮನಿಸಿ ತಮ್ಮ ಕಾರಿನಿಂದ ಇಳಿದು ರಸ್ತೆ ಬದಿಯಲ್ಲಿ ನಿಂತು ಸಿಬ್ಬಂದಿ ಮೂಲಕ ಬ್ಯಾರಿಕೇಡ್ ಸರಿಪಡಿಸುತ್ತಿದ್ದರು. ಇದೇ ಸಂದರ್ಭದಲ್ಲಿ ಬಸವೇಶ್ವರ ವೃತ್ತದಿಂದ ವೇಗವಾಗಿ ಬಂದ ಬೈಕ್ ಸವಾರ ಡಾ.ರಾಮ್ ಅರಸಿದ್ದಿ ಅವರಿಗೆ ಡಿಕ್ಕಿ ಹೊಡೆದಿದ್ದಾನೆ.
ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಮುಂಭಾಗ ನಜ್ಜುಗುಜ್ಜಾಗಿದೆ. ಡಾ. ರಾಮ್ ಅರಸಿದ್ದಿ ಅವರ ತಲೆ ಹಾಗೂ ತೊಡೆ ಭಾಗಕ್ಕೆ ಬಲವಾದ ಗಾಯವಾಗಿದೆ. ಅಂಗರಕ್ಷಕ ರಾಘವೇಂದ್ರನಿಗೂ ಪೆಟ್ಟು ಬಿದ್ದಿದ್ದು, ಕೂಡಲೇ ಅವರನ್ನು ಬಿಎಲ್‌ಡಿಇ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರು ತುರ್ತು ಚಿಕಿತ್ಸಾ ಘಟಕದಲ್ಲಿದ್ದು, ಬೈಕ್ ಚಾಲಕನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿರುವುದಾಗಿ ಎಸ್‌ಪಿ ಅನುಪಮ್ ಅಗರವಾಲ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net