ಕರೊನಾ ಭೀತಿ;ಶಾಲೆಗಳಲ್ಲಿ ಫಜೀತಿ

HN 5-1
Published on

ಹೀರಾನಾಯ್ಕ ಟಿ. ವಿಜಯಪುರ

ಕಳೆದ ಎಂಟು ತಿಂಗಳ ನಂತರ ಪ್ರಸಕ್ತ ಶೈಕ್ಷಣಿಕ ವರ್ಷ ಆರಂಭಗೊಂಡಿವೆ. ಕರೊನಾದಿಂದಾಗಿ ಈಗಾಗಲೇ ಅರ್ಧ ವರ್ಷ ಮೊಟಕುಗೊಂಡಿದ್ದು, ಇನ್ನುಳಿದ ಆರು ತಿಂಗಳ ಕಾಲ ಮಕ್ಕಳಿಗೆ ಶಿಕ್ಷಣ ನೀಡುವ ನಿಟ್ಟಿನಲ್ಲಿ ಸರ್ಕಾರ ಶಾಲೆಗಳನ್ನು ಆರಂಭಿಸಿದೆ. ಆದರೆ ಶಾಲೆಗಳಲ್ಲಿ ಸೂಕ್ತ ಕೊಠಡಿ ವ್ಯವಸ್ಥೆ ಇಲ್ಲ. ಶಿಥಿಲಾವಸ್ಥೆಯಲ್ಲಿರುವ ಕೊಠಡಿಗಳಲ್ಲಿ, ನೆಲದ ಮೇಲೆಯೇ ಮಕ್ಕಳು ಪಾಠ ಕೇಳುವಂತಾಗಿದೆ.

ನೆಲದ ಮೇಲೆಯೇ ಪಾಠ

ಶಾಲೆಗಳನ್ನು ತುರಾತುರಿಯಲ್ಲಿ ಆರಂಭಿಸಿದ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ಮೂಲ ಸೌಕರ್ಯದ ಕೊರತೆ ಎದುರಾಗಿದೆ.

ಮಕ್ಕಳಿಗೆ ಸೂಕ್ತವಾದ ಕುಡಿಯುವ ನೀರಿನ ವ್ಯವಸ್ಥೆ, ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಇಲ್ಲದಂತಾಗಿದೆ. ಮಕ್ಕಳಿಗೆ ಕುಳಿತುಕೊಳ್ಳಲು ಕುರ್ಚಿಗಳಿಲ್ಲ. ಹೀಗೆ ನಾನಾ ಸೌಕರ್ಯಗಳ ಕೊರತೆ ಸರ್ಕಾರಿ ಶಾಲೆಗಳಲ್ಲಿ ಕಾಡುತ್ತಿದೆ.

ವಿಜಯಪುರ ತಾಲೂಕಿನ ಕಗ್ಗೋಡ ಗ್ರಾಮದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಗಮ ಯೋಜನೆಯಡಿ ತರಗತಿಗಳು ಆರಂಭಗೊಂಡಿದ್ದು, ಮಕ್ಕಳು ನೆಲದ ಮೇಲೆಯೇ ಕುಳಿತು ಪಾಠ ಪ್ರವಚನಗಳನ್ನು ಕೇಳುವಂತಾಗಿದೆ.

ಮಹಾಮಾರಿಗೆ ಹೆದರಿದ ಮಕ್ಕಳು

ಪ್ರಸಕ್ತ ಸಾಲಿನಲ್ಲಿ ತರಗತಿಗಳು ಆರಂಭಗೊಂಡಿವೆ. ಆದರೆ ಕರೊನಾ ಮಹಾಮಾರಿ ಮಕ್ಕಳನ್ನು ಹಾಗೂ ಶಿಕ್ಷಕರನ್ನು ಕಾಡುತ್ತಿದೆ. ಇದರಿಂದಾಗಿ ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುವುದಕ್ಕೆ ಹಿಂದೇಟು ಹಾಕುವಂತಾಗಿದೆ. ಪದವಿ, ಸ್ನಾತಕೋತ್ತರ ಪದವಿ, ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ತರಗತಿಗಳು ಆರಂಭಗೊಂಡಿದ್ದು, ಒಟ್ಟು 21,749 ವಿದ್ಯಾರ್ಥಿಗಳ ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಲಾಗಿದೆ. ಅದರಲ್ಲಿ 68 ಮಕ್ಕಳಿಗೆ ಕರೊನಾ ಪಾಸಿಟಿವ್ ಬಂದಿದೆ. 28 ಉಪನ್ಯಾಸಕರು, ಶಿಕ್ಷಕರಿಗೆ ಕೋವಿಡ್ ಸೋಂಕು ದೃಢವಾಗಿದೆ. ವಿದ್ಯಾಗಮ ನಡೆಯುತ್ತಿರುವ ಕೆಲವು ಕೇಂದ್ರಗಳಲ್ಲಿ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದೆ. ಇದರಿಂದಾಗಿ ಮಕ್ಕಳ ಹಾಜರಾತಿ ಶೇ.60ರಷ್ಟು ಕುಸಿದಿದೆ.

ಶೇ.40 ರಷ್ಟು ಮಾತ್ರ ಹಾಜರಾತಿ

ಜಿಲ್ಲೆಯಲ್ಲಿ 6ನೇ ತರಗತಿಯಿಂದ 9ನೇ ತರಗತಿವರೆಗೆ ವಿದ್ಯಾಗಮ ಯೋಜನೆಯಡಿ ಶಿಕ್ಷಣ ನೀಡಲಾಗುತ್ತಿದೆ. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಶಾಲೆ ಆರಂಭಿಸಲಾಗಿದೆ. ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಒಟ್ಟು 1,34,459 ವಿದ್ಯಾರ್ಥಿಗಳು ದಾಖಲಾಗಿದ್ದು, ಅದರಲ್ಲಿ 53,828 ವಿದ್ಯಾರ್ಥಿಗಳು ಮಾತ್ರ ಹಾಜರಾಗುತ್ತಿದ್ದಾರೆ. ಶೇ.40.3 ರಷ್ಟು ಮಾತ್ರ ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ ಎಂದು ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.

ದುರಸ್ತಿ ಕಾಣದ 1308 ಶಾಲೆಗಳು

ಜಿಲ್ಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಒಟ್ಟು 1308 ಕೊಠಡಿಗಳು ಸಂಪೂರ್ಣ ಶಿಥಿಲಾವಸ್ಥೆಗೊಂಡಿವೆ. ಪ್ರತಿ ವರ್ಷ ಸುಣ್ಣಬಣ್ಣ ಕಾಣುತ್ತಿದ್ದ ಶಾಲೆಗಳು ಈ ವರ್ಷದಲ್ಲಿ ಅನೇಕ ಶಾಲೆಗಳು ಇನ್ನೂ ಸುಣ್ಣಬಣ್ಣವನ್ನೇ ಕಂಡಿಲ್ಲ.

ವಿಜಯಪುರ ನಗರ 17, ಮುದ್ದೇಬಿಹಾಳ 79, ಬಬಲೇಶ್ವರ 364, ದೇವರಹಿಪ್ಪರಗಿ 71, ಸಿಂದಗಿ 267, ಬಸವನಬಾಗೇವಾಡಿ 100, ನಾಗಠಾಣ 153, ಇಂಡಿ 257 ಶಾಲೆಗಳು ಸಂಪೂರ್ಣ ಶಿಥಿಲಗೊಂಡಿವೆ. 930 ಶಾಲೆಗಳಲ್ಲಿ ಸಣ್ಣಪುಟ್ಟ ರಿಪೇರಿಗಳಿವೆ. ಶಿಥಿಲಗೊಂಡ ಶಾಲೆಯನ್ನು ಹೊಸದಾಗಿ ನಿರ್ಮಿಸಲು ಸರ್ಕಾರ ಅಂದಾಜು 15.75 ಲಕ್ಷ ರೂ. ಹಾಗೂ ಸಣ್ಣಪುಟ್ಟ ರಿಪೇರಿಗೆ 1.50 ಲಕ್ಷ ರೂ. ನೀಡುತ್ತದೆ. ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.

ಬೊಳೆಗಾಂವ ಶಾಲೆ ಬಂದ್

ಇಂಡಿ ತಾಲೂಕಿನ ಬೊಳೆಗಾಂವ ಪ್ರಾಥಮಿಕ ಶಾಲೆ ಶಿಕ್ಷಕನಿಗೆ ಮಂಗಳವಾರ ಕರೊನಾ ದೃಢಪಟ್ಟಿದ್ದು, ಶಾಲೆಯನ್ನು ಬಂದ್ ಮಾಡಿ ಸ್ಯಾನಿಟೈಸ್ ಮಾಡಲಾಗಿದೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ. ಶಾಲೆಗಳಲ್ಲಿ ಮುಂಜಾಗ್ರತೆ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.

ಆರಂಭಿಕ ಹಂತ ಇರುವುದರಿಂದ ಮಕ್ಕಳಲ್ಲಿ ಕೋವಿಡ್ ಭಯ ಪೂರ್ಣ ಪ್ರಮಾಣದಲ್ಲಿ ಹೋಗಿಲ್ಲ. ಶಾಲೆ ಕೊಠಡಿಗಳ ಸ್ವಚ್ಛತೆ, ಸ್ಯಾನಿಟೈಸರ್ ಮಾಡಲು ತಿಳಿಸಲಾಗಿದೆ. ಮಕ್ಕಳ ಹಾಜರಾತಿ ಹೆಚ್ಚಿಸಲು ಮುಖ್ಯ ಶಿಕ್ಷಕರ ಸಭೆ ಕರೆದು ಸೂಚನೆ ನೀಡಲಾಗಿದೆ. ಎನ್.ವಿ.ಹೊಸೂರ ಡಿಡಿಪಿಐ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net