

ವಿಜಯಪುರ: ಸಾಧನೆ ಯಾವುದೇ ಆಗಿರಲಿ ಮೊದಲು ಆ ಕ್ಷೇತ್ರದ ಸಂಪೂರ್ಣ ಅರಿವಿರಬೇಕು. ಸ್ವಸಾಮರ್ಥ್ಯದ ಮೇಲೆ ನಂಬಿಕೆ ಇರಬೇಕು. ಅದೇ ರೀತಿ ಟಿವಿ ನಿರೂಪಕರಾಗಲು ಬೇಕಾದ ಅರ್ಹತೆಗಳಿವೆಯಾ ಎಂಬುದನ್ನು ಆಸಕ್ತರು ಅರಿತುಕೊಳ್ಳಬೇಕೆಂದು ಹಿರಿಯ ಪತ್ರಕರ್ತ ರಾಜಾ ಸೈಲೇಶಚಂದ್ರ ಗುಪ್ತಾ ಹೇಳಿದರು.
ಇಲ್ಲಿನ ಅಕ್ಕಮಹಾದೇವಿ ಮಹಿಳಾ ವಿವಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂಯುಕ್ತಾಶ್ರಯದಲ್ಲಿ ನಾಲ್ಕು ದಿನಗಳ ಕಾಲ ಹಮ್ಮಿಕೊಂಡಿದ್ದ ‘ಟಿವಿ ನಿರೂಪಣಾ ಕೌಶಲಗಳು’ ಕುರಿತ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಸುದ್ದಿ ವ್ಯಕ್ತಪಡಿಸುವ ಶೈಲಿ, ಮಾಹಿತಿ ಕುರಿತು ನಿರೂಪಕ ತಿಳಿದಿರಬೇಕು. ಸಾಮಾನ್ಯ ಜ್ಞಾನ ಹೊಂದಿರಬೇಕು. ರೂಪದಿಂದ ಬರೀ ನೋಡುಗರನ್ನು ಸೆಳೆಯಬಹುದೇ ವಿನಃ ಅತ್ಯುತ್ತಮ ಜ್ಞಾನ ನೀಡಲು ಸಾಧ್ಯವಿಲ್ಲ. ನಿರೂಪಕರಾಗಲು ರೂಪ ಎಷ್ಟು ಮುಖ್ಯವೋ ಜ್ಞಾನವೂ ಅಷ್ಟೇ ಮುಖ್ಯ ಎಂದರು.
ಭಾಷೆ ಮೇಲೆ ಹಿಡಿತ
ನಿರೂಪಕರಾದವರಿಗೆ ಹಾವಭಾವ, ಭಾಷೆ ಮೇಲೆ ಹಿಡಿತ ಇರಬೇಕು. ನಿರೂಪಣೆ ಎಂಬುದು ಸಮಾಜದ ಜವಾಬ್ದಾರಿಯುತವಾದ ಒಂದು ಕಾರ್ಯ. ನಿರೂಪಕರಾದವರು ಮೈಯೆಲ್ಲಾ ಕಣ್ಣಾಗಿ ಕೆಲಸ ಮಾಡಬೇಕಾಗಿರುವುದು ಅಗತ್ಯ. ನಾವು ಏನೇ ಕೆಲಸ ಬಂದರೂ ಅದನ್ನು ನಿಭಾಯಿಸಲು ಎದೆಗುಂದದೆ ಸಿದ್ಧರಾಗಿರಬೇಕು. ಧೈರ್ಯವಾಗಿ ಎದುರಿಸಬೇಕು. ನಿರೂಪಣೆ ಮಾಡುವುದು ಅಷ್ಟು ಸುಲಭದ ಮಾತಲ್ಲ. ಲೈವ್ ಕಾರ್ಯಕ್ರಮಗಳನ್ನು ನೀಡುವಾಗ ದಿಢೀರ್ ಬೆಳವಣಿಗೆಗಳಾಗಬಹುದು. ಅವುಗಳನ್ನು ಎದುರಿಸುವ ಸಾಮರ್ಥ್ಯ ನಿರೂಪಕರಿರಬೇಕು ಎಂದರು.
ಸಾಮಾನ್ಯ ಜ್ಞಾನ ಅವಶ್ಯ
ನಿರೂಪಣೆ ಮಾಡುವಾಗ ಸಾಕಷ್ಟು ಅಡೆ-ತಡೆಗಳು ಬರಬಹುದು. ವಿಷಯ ಸೂಚಕರು ಹೊಸ-ಹೊಸ ವಿಷಯಗಳನ್ನು ನಿಮಗೆ ನೀಡಿದರೆ ಅವುಗಳನ್ನು ನಿಯಂತ್ರಿಸುವ ಕಲೆ ಗೊತ್ತಿರಬೇಕು. ನಿರೂಪಣೆ ಎನ್ನುವುದು ಜನರೊಡನೆ ನೇರವಾಗಿ ನಡೆಯುವ ಸಂಪರ್ಕ ಅಲ್ಲ. ಯಾವತ್ತೂ ಎಡವಬಾರದು ಮತ್ತು ತಪ್ಪು ಮಾಹಿತಿಗಳನ್ನು ರವಾನಿಸುವಂತಹ ಕೆಲಸ ಮಾಡಬಾರದು. ಮನಸ್ಸಿಗೆ ಬಂದ ಹಾಗೆ ನಿರೂಪಣೆ ಮಾಡಲು ಆಗುವುದಿಲ್ಲ. ನಿರೂಪಕರು ಅತೀ ಮುಖ್ಯವಾಗಿ ಜ್ಞಾನ ಸಾಮರ್ಥ್ಯ ಹಾಗೂ ಭಾಷಾ ಕೌಶಲ್ಯ ಹೊಂದಿರಬೇಕು. ನಿರೂಪಕರಾದ ಮಾತ್ರಕ್ಕೆ ಸ್ವತಂತ್ರರಾಗಲು ಸಾಧ್ಯವಿಲ್ಲ. ಅವರಿಗೂ ಒತ್ತಡಗಳು ಇರುತ್ತವೆ. ಅವುಗಳನ್ನು ನಿಭಾಯಿಸುವ ಚಾಕಚಕ್ಯತೆ ಇರಬೇಕು. ಅತ್ಯುತ್ತಮ ನಿರೂಪಕರಾಗಿ ಹೊರಹೊಮ್ಮಿದಾಗ ಮಾತ್ರ ನಾವು ಪರಿಣಾಮಕಾರಿಯಾಗಿ ನೋಡುಗರನ್ನು ಮುಟ್ಟಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಸಿದ್ದ ವಿಭಾಗದ ಮುಖ್ಯಸ್ಥ ಪ್ರೊ.ಓಂಕಾರ ಕಾಕಡೆ ಮಾತನಾಡಿ, ನಾಲ್ಕು ದಿನದ ಕಾರ್ಯಾಗಾರದಲ್ಲಿ ಅನೇಕ ಸಂಪನ್ಮೂಲ ವ್ಯಕ್ತಿಗಳು ನಿರೂಪಣೆ ಬಗ್ಗೆ ಅಗಾಧ ಮಾಹಿತಿ ನೀಡಿದ್ದಾರೆ. ಇದೆಲ್ಲಾ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಮನದಟ್ಟಾಗಿದೆ ಎಂಬ ವಿಶ್ವಾಸವಿದೆ. ಮಹಿಳಾ ವಿವಿಯ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿನಿಯರು ಮಾಧ್ಯಮ ಕ್ಷೇತ್ರಗಳಲ್ಲಿ ಹೆಚ್ಚಿನ ಸಾಧನೆ ಮಾಡಲಿ ಎಂಬುದೇ ನಮ್ಮ ಆಶಯ ಎಂದರು.
ಸಹಾಯಕ ಪ್ರಾಧ್ಯಾಪಕಿ ಡಾ. ತಹಮೀನಾ ಕೋಲಾರ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಸಂದೀಪ ವರದಿ ವಾಚಿಸಿದರು. ಸಂಶೋಧನಾ ವಿದ್ಯಾರ್ಥಿನಿ ಜ್ಞಾನಜ್ಯೋತಿ ಚಾಂದಕವಠೆ ಪರಿಚಯಿಸಿದರು. ಸುಷ್ಮಾ ನಾಯಕ ನಿರೂಪಿಸಿದರು. ದೀಪಾ ತಟ್ಟಿಮನಿ ವಂದಿಸಿದರು.
ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ರಾಜ್ಯದ ವಿವಿಧ ಕಾಲೇಜ್ ವಿದ್ಯಾರ್ಥಿನಿಯರು ಹಾಗೂ ವಿಭಾಗದ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
EndFragment