ಆಯುರ್ವೇದ ಅಧ್ಯಯನಕ್ಕೆ ಒತ್ತು

hn 25-2
Published on

ವಿಜಯಪುರ: ಆಯುರ್ವೇದ ಕ್ಷೇತ್ರ ವಿಶ್ವದ ಗಮನ ಸೆಳೆದಿದ್ದು, ಜಪಾನಿಗರನ್ನು ಕರ್ನಾಟಕ, ಕೇರಳದಲ್ಲಿ ಯೋಗ ಮತ್ತು ಆಯುರ್ವೇದ ಕಲಿಕೆಗೆ ಉತ್ತೇಜಿಸುವ ಯೋಚನೆ ಇದೆ ಎಂದು ಜಪಾನ್ ರಾಯಭಾರಿ ಕಚೇರಿ ಡೆಪ್ಯೂಟಿ ಕೌನ್ಸುಲ್ ಕಾಟ್ಸುಮಸಾ ಮಾರುವಾ ಹೇಳಿದರು.

ಇಲ್ಲಿನ ಬಿಎಲ್‌ಡಿಇ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗಾಗಿ ನಿರ್ಮಿಸಿರುವ ನೂತನ ಕ್ರೀಡಾ ಸಂಕೀರ್ಣವನ್ನು ಬುಧವಾರ ಉದ್ಘಾಟಿಸಿ, ಭಾರತ ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಜಪಾನ್ ಕೂಡ ಪ್ರಜಾತಾಂತ್ರಿಕ ರಾಷ್ಟ್ರವಾಗಿದ್ದು, ಭಾರತದೊಂದಿಗಿನ ಮಧುರ ಬಾಂಧವ್ಯವನ್ನು ಸದಾ ಮುಂದುವರಿಸಲು ಬಯಸುತ್ತದೆ. ನಮ್ಮ ರಾಜತಾಂತ್ರಿಕ ಕಚೇರಿಯ ಮೂಲಕ ಸಾಂಸ್ಕೃತಿಕ ವಿನಿಮಯದ ಅಂಗವಾಗಿ ಸಂಸ್ಕೃತಿ, ಆಹಾರ, ಸಂಗೀತ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಿಗೆ ಆದ್ಯತೆ ನೀಡಲು ಬಯಸುತ್ತೇವೆ ಎಂದರು.

ಶಾಸಕ, ಬಿಎಲ್‌ಡಿಇ ಅಧ್ಯಕ್ಷ ಎಂ.ಬಿ. ಪಾಟೀಲ ಮಾತನಾಡಿ, ವಿಜಯಪುರ ಸಾಂಸ್ಕೃತಿಕ ಹಿರಿಮೆ ಹೊಂದಿದ್ದು, ನಮ್ಮ ರೈತರು ಕೃಷಿ, ತೋಟಗಾರಿಕಾ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ. ವಿಜಯಪುರದಲ್ಲಿ ನಿರ್ಮಾಣವಾಗುತ್ತಿರುವ ನೂತನ ಫುಡ್‌ಪಾರ್ಕ್‌ನಲ್ಲಿ ಜಪಾನ್ ತಂತ್ರಾಜ್ಞಾನವನ್ನು ಪರಿಚಯಿಸುವುದು ಮತ್ತು ಜಪಾನ್‌ನಲ್ಲಿ ಬೆಳೆಯುವ ಉತ್ಕೃಷ್ಟ ದ್ರಾಕ್ಷಿ ಮತ್ತು ಮಾವು ತಳಿಗಳನ್ನು ನಮ್ಮ ಜಿಲ್ಲೆಗೆ ಪರಿಚಯಿಸಲು ಮುಂದಾಗಬೇಕು ಎಂದು ತಿಳಿಸಿದರು.

ವಿಜಯಪುರ ಜಿಲ್ಲೆ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿದ್ದು, ಜಗತ್ತಿನ ವಿವಿಧ ರಾಷ್ಟ್ರಗಳ ಪ್ರವಾಸಿಗರಿಗೆ ನಮ್ಮ ಭಾಗವನ್ನು ಪರಿಚಯಿಸಲು ತಮ್ಮ ತಂತ್ರಜ್ಞಾನ, ನೆರವುಬೇಕು. ಕೃತಕ ಬುದ್ಧಿಮತ್ತೆ ಮುಂದಿನ 2ರಿಂದ 3 ದಶಕಗಳ ಕಾಲ ವಿಶ್ವದಲ್ಲಿ ಉನ್ನತ ಸ್ಥಾನದಲ್ಲಿ ಮುಂದುವರಿಯಲಿದೆ. ತಮ್ಮ ಜಪಾನ್ ರಾಷ್ಟ್ರ ಈ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದೆ. ಅದರ ನೆರವು ನಮ್ಮ ವೈದ್ಯಕೀಯ ಕಾಲೇಜಿಗೆ ಮತ್ತು ಇಲ್ಲಿನ ವೈದ್ಯರಿಗೆ ದೊರೆತರೆ ಇನ್ನೂ ಹೆಚ್ಚಿನ ಸೇವೆಯನ್ನು ನಮ್ಮ ಭಾಗದಲ್ಲಿ ಮಾಡಲು ಸಾಧ್ಯವಾಗುತ್ತದೆ ಎಂದರು.

ಬಿಎಲ್‌ಡಿಇ ಆವರಣದಲ್ಲಿ 6 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ನೂತನ ಕ್ರೀಡಾ ಸಂಕೀರ್ಣ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗಾಗಿ ಪ್ರತ್ಯೇಕ ಜಿಮ್ ವ್ಯವಸ್ಥೆ, ಬಾಸ್ಕೆಟ್ ಬಾಲ್, ಬ್ಯಾಡ್ಮಿಂಟನ್, ಟೇಬಲ್ ಟೆನಿಸ್ ಮತ್ತು ಈಜುಕೊಳ ಹೊಂದಿದೆ ಎಂದು ಮಾಹಿತಿ ನೀಡಿದರು.

ಉಪ ಕುಲಪತಿ ಡಾ. ಆರ್.ಎಸ್. ಮುಧೋಳ, ಸಂಸ್ಥೆ ನಿರ್ದೇಶಕರಾದ ಸಂಗು ಸಜ್ಜನ, ಬಸನಗೌಡ ಎಂ. ಪಾಟೀಲ, ಡಾ. ಅರುಣ ಇನಾಮದಾರ, ಡಾ. ರಾಘವೇಂದ್ರ ಕುಲಕರ್ಣಿ, ಪ್ರಮುಖರಾದ ಡಾ. ಕುಶಾಲ ದಾಸ, ಡಾ. ಶೋಲ್ಮೋನ್ ಚೋಪಡೆ, ಡಾ. ವಿಜಯಲಕ್ಷ್ಮೀ ಹಾದಿಮನಿ, ಡಾ. ಸಯ್ಯದ ಇನಾಮದಾರ, ಡಾ. ಪ್ರಮೋದ ಬರಗಿ, ಡಾ. ಸಾಕ್ಷಿ ಭಾಟಿಯಾ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net