

ವಿಜಯಪುರ: ಕರೊನಾ ಮಹಾಮಾರಿ ಜಿಲ್ಲೆಯಲ್ಲಿ ದಿನೇ ದಿನೇ ಜನರಲ್ಲಿ ಆತಂಕ ಸೃಷ್ಟಿಸುತ್ತಿದ್ದು, ಕೋವಿಡ್-19 ಸೋಂಕು ನಿವಾರಣೆಗೆ ಸರ್ಕಾರಿ ಅಲ್ಲದೆ ಖಾಸಗಿ ಆಸ್ಪತ್ರೆಗಳು ಸಜ್ಜುಗೊಂಡಿವೆ. ಜಿಲ್ಲೆಯಲ್ಲಿ ಒಟ್ಟು 8 ಆಸ್ಪತ್ರೆಗಳಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಗೊಂಡಿದ್ದು, ಸೂಕ್ತ ಚಿಕಿತ್ಸೆಗೆ ನೀಡಲಾಗುತ್ತಿದೆ.
ಬಿಎಲ್‌ಡಿಇ ಸೇರಿದಂತೆ ಖಾಸಗಿ ಆಸ್ಪತ್ರೆಗಳಲ್ಲಿ ಕರೊನಾ ಸೋಂಕಿತರಿಗೆ ಹೈಟೆಕ್ ಚಿಕಿತ್ಸೆ ನೀಡಲಾಗುತ್ತಿದೆ. ಸರ್ಕಾರದ ಮಾರ್ಗಸೂಚಿಯಂತೆ ಚಿಕಿತ್ಸೆಗೆ ದರ ನಿಗದಿ ಪಡಿಸಲಾಗಿದ್ದು, ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತಿದೆ. ಬಿಎಲ್‌ಡಿಇ ಆಸ್ಪತ್ರೆಯಲ್ಲಿ 180 ಆಕ್ಸಿಜನ್ ಬೆಡ್ ವ್ಯವಸ್ಥೆ, 60 ವೆಂಟಿಲೆಟರ್ ಸೌಲಭ್ಯ ಮಾಡಲಾಗಿದೆ. ಇನ್ನುಳಿದಂತೆ ಅಲ್ ಅಮೀನ್, ಯಶೋದಾ, ಬಿದರಿ ಆಸ್ಪತ್ರೆಗಳಲ್ಲಿಯೂ ಉತ್ತಮ ಚಿಕಿತ್ಸೆ ನೀಡಲು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಬಿಎಲ್‌ಡಿಇ ಆಸ್ಪತ್ರೆ ವೈದ್ಯರು ರೋಗಿಗಳಿಗೆ ಮನೆಯಲ್ಲಿಯೇ ಸೂಕ್ತ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ. ಕರೊನಾ ಪಾಸಿಟಿವ್ ರೋಗಿಗಳು ಆಸ್ಪತ್ರೆಗೆ ಬರಲು ಹಿಂದೇಟು ಹಾಕಿದ್ದಲ್ಲಿ ಮನೆಯಲ್ಲಿಯೇ ಔಷಧೋಪಚಾರ ಮಾಡಲಾಗುತ್ತದೆ. ಅದಕ್ಕಾಗಿ ಪ್ರತ್ಯೇಕ ಆಂಬುಲೆನ್ಸ್ ವ್ಯವಸ್ಥೆ, ತಜ್ಞ ವೈದ್ಯರ ತಂಡವನ್ನು ನಿಯೋಜಿಸಲಾಗಿದೆ ಎಂದು ನುರಿತ ತಜ್ಞ ಡಾ. ಅರವಿಂದ ಪಾಟೀಲ ಮಾಹಿತಿ ನೀಡುತ್ತಾರೆ.
ಜೈನ ಸಮುದಾಯದಿಂದಲೂ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿದೆ. ಕರೊನಾ ನಿಯಂತ್ರಣಕ್ಕಾಗಿ ಪ್ರತ್ಯೇಕವಾಗಿ ತಮ್ಮ ಸಮುದಾಯದವರಿಗೆ ಮಾತ್ರ ಚಿಕಿತ್ಸೆ ದೊರಕಿಸಲು ಕೇರ್ ಸೆಂಟರ್ ತೆರೆಯಲಾಗಿದೆ. ವಿಜಯಪುರದ ಜೈನ್ ಕಾಲೇಜಿನಲ್ಲಿ 40 ಜನರಿಗೆ ಚಿಕಿತ್ಸೆ ನೀಡುವಂತಹ ವ್ಯವಸ್ಥೆ ಮಾಡಲಾಗಿದೆ. ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲು ನುರಿತ ವೈದ್ಯರಿಂದ ತಪಾಸಣೆ ಮಾಡಿಸಲಾಗುತ್ತದೆ. ಅಲ್ಲದೆ ಬೆಳಗ್ಗೆ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ನರ್ಸ್, ವೈದ್ಯರನ್ನು ನಿಯೋಜಿಸಲಾಗಿದ್ದು, ಪ್ರತಿ ದಿನ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ ಸಮಾಜದ ಮುಖಂಡ ಶಾಂತಿಲಾಲ ಒಸ್ವಾಲ ಮಾಹಿತಿ ನೀಡುತ್ತಾರೆ.
ವಿಜಯಪುರ ನಗರದ ಬಿಎಲ್‌ಡಿಇ ಆಸ್ಪತ್ರೆ, ಆಯುಷ್, ಅಲ್ ಅಮೀನ್, ಯಶೋದಾ, ಯಶೋಧರಾ, ಭಾಂಗಿ, ಬಿದರಿ ಹಾಗೂ ಚೌಧರಿ ಆಸ್ಪತ್ರೆ ವೈದ್ಯರು ಕರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟು 280 ಬೆಡ್ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ 250 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.