ಉದ್ಯೋಗ ಮೇಳ ಇಂದು, ನಾಳೆ

HN 27-2
Published on

ವಿಜಯಪುರ: ನಗರದ ಐಟಿಐ ಕಾಲೇಜಿನ ಆವರಣದಲ್ಲಿ ೆ.28 ಹಾಗೂ 29 ರಂದು ನಡೆಯಲಿರುವ ಜಿಲ್ಲಾ ಮಟ್ಟದ ಉದ್ಯೋಗ ಮೇಳದ ಪೂರ್ವ ಸಿದ್ಧತೆಯನ್ನು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಗುರುವಾರ ಪರಿಶೀಲನೆ ನಡೆಸಿದರು.
ಈ ವೇಳೆ ಅಧಿಕಾರಿಗಳೊಂದಿಗೆ ಮಾತನಾಡಿದ ಅವರು, ಉದ್ಯೋಗ ಮೇಳಕ್ಕೆ ಈಗಾಗಲೇ 7 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಹಾಗೂ 3 ಸಾವಿರ ಅಭ್ಯರ್ಥಿಗಳು ಆಪ್‌ಲೈನ್ ಮೂಲಕ ನೋಂದಣಿ ಮಾಡಿಕೊಂಡಿದ್ದು, 60ಕ್ಕೂ ಹೆಚ್ಚು ಕಂಪನಿಗಳು ನೋಂದಣಿ ಮಾಡಿಕೊಂಡಿವೆ. ಉದ್ಯೋಗ ಮೇಳಕ್ಕೆ ಆಗಮಿಸುವ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಸೌಲಭ್ಯಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಉದ್ಯೋಗ ಮೇಳದ ಅಂಗವಾಗಿ ಅಭ್ಯರ್ಥಿಗಳ ಸಂದರ್ಶನ ಮತ್ತು ನೋಂದಣಿಗೆ ಸಂಬಂಧಪಟ್ಟಂತೆ ಹೆಚ್ಚು ಸ್ಟಾಲ್‌ಗಳಲ್ಲಿ ವಿವಿಧ ಕಂಪನಿಗಳ ಮೂಲಕ ನಡೆಸಲಾಗುವ ಸಂದರ್ಶನಕ್ಕಾಗಿ ಸುಮಾರು 70ಕ್ಕೂ ಹೆಚ್ಚು ಸ್ಟಾಲ್‌ಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಅಭ್ಯರ್ಥಿಗಳ ಆನ್‌ಲೈನ್ ನೋಂದಣಿ ಹಾಗೂ ಆಪ್‌ಲೈನ್ ನೋಂದಣಿ ಹಾಗೂ ಹೆಲ್ಪ್ ಡೆಸ್ಕ್‌ಗಾಗಿ 10 ಕೌಂಟರ್‌ಗಳ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ತಿಳಿಸಿದರು.

ಉದ್ಯೋಗ ಮೇಳದಲ್ಲಿ ಅಭ್ಯರ್ಥಿಗಳಿಗಾಗಿ ಊಟ-ಉಪಹಾರದ ವ್ಯವಸ್ಥೆ, ಕುಡಿಯುವ ನೀರು, ಉದ್ಘಾಟನಾ ಕಾರ್ಯಕ್ರಮದ ಮುಖ್ಯ ವೇದಿಕೆ, ಶಾಮಿಯಾನ, ಉದ್ಯೋಗದಾತರಿಗೆ ಪ್ರಮಾಣ ಪತ್ರ, ವಸತಿ ಸೌಲಭ್ಯ, ಆಗಮಿಸುವ ಅಭ್ಯರ್ಥಿಗಳಿಗೆ ಸೂಕ್ತ ಮಾಹಿತಿ ವ್ಯವಸ್ಥೆ, ಸ್ವಯಂ ಸೇವಕರ ಹಾಗೂ ಮೇಲ್ವಿಚಾರಕರ ನಿಯೋಜನೆಯನ್ನೂ ಮಾಡಲಾಗಿದ್ದು ಅವುಗಳ ಪೂರ್ವ ಸಿದ್ಧತೆಗಳನ್ನು ಪರಿಶೀಲಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಔದ್ರಾಮ, ಜಿಲ್ಲಾ ಕೌಶಲಾಭಿವೃದ್ಧಿಕಾರಿ ರಮೇಶ ದೇಸಾಯಿ, ಐಟಿಐ ಕಾಲೇಜಿನ ಪ್ರಾಂಶುಪಾಲೆ ಶಗುಪ್ತಾ ಮಲಾಡಕರ್ ಉಪಸ್ಥಿತರಿದ್ದರು.

ಉದ್ಘಾಟನೆ ಇಂದು

ಉದ್ಯೋಗ ಮೇಳದ ಉದ್ಘಾಟನೆ ಫೆ.28ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ ಪಾಟೀಲ ನೆರವೇರಿಸುವರು. ಉಪ ಮುಖ್ಯಮಂತ್ರಿ ಡಾ.ಅಶ್ವತ್ ನಾರಾಯಣ್ ಉಪಸ್ಥಿತರಿರುವರು. ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಧ್ಯಕ್ಷತೆ ವಹಿಸುವರು. ಎಂಎಲ್‌ಸಿ ಎಸ್.ಆರ್ ಪಾಟೀಲ, ಜಿಪಂ ಅಧ್ಯಕ್ಷ ಶಿವಯೋಗೆಪ್ಪ ನೇದಲಗಿ, ಸಂಸದ ರಮೇಶ ಜಿಗಜಿಣಗಿ, ಶಾಸಕರು, ವಿಧಾನ ಪರಿಷತ್ ಸದಸ್ಯರು ಭಾಗವಹಿಸುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net