ಯೋಗಾಭ್ಯಾಸ ಅನಿವಾರ್ಯ ಜೀವನ ಕ್ರಮ

VJP_Exclent
Published on

ವಿಜಯಪುರ: ಯೋಗ ದೇಹ ಮತ್ತು ಮನಸ್ಸುಗಳ ಏಕಾವಸ್ಥೆಯ ಸ್ಥಿತಿಯಾಗಿದೆ. ಇಂದಿನ ಒತ್ತಡದ ದಿನಮಾನದಲ್ಲಿ ಮನಸ್ಸು ಮತ್ತು ದೇಹವನ್ನು ಸುಸ್ಥಿತಿಯಲ್ಲಿಡಲು ಪ್ರತಿಯೊಬ್ಬರಿಗೂ ಯೋಗಾಭ್ಯಾಸ ಅನಿವಾರ್ಯ ಜೀವನ ಕ್ರಮವಾಗಿದೆ ಎಂದು ಬಾಲಂಗಾವ ಕಾತ್ರಾಳ ಆಶ್ರಮದ ಯೋಗಗುರು ಪರಮ ಪೂಜ್ಯ ಶ್ರೀ ಅಮೃತಾನಂದ ಮಹಾಸ್ವಾಮೀಜಿ ಹೇಳಿದರು.
ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಸಂಸ್ಥೆ ಚೇರ್ಮನ್ ಬಸವರಾಜ ಕೌಲಗಿ ಅವರ 51ನೇ ವರ್ಷದ ಜನ್ಮದಿನದ ಅಂಗವಾಗಿ, ಪಿಯುಸಿ ವಿದ್ಯಾರ್ಥಿಗಳಿಗೆ ಸೋಮವಾರ ಬೆಳಗ್ಗೆ ಹಮ್ಮಿಕೊಳ್ಳಲಾಗಿದ್ದ ಒಂದು ತಿಂಗಳ ಆನ್ ಲೈನ್ ಯೋಗಾಭ್ಯಾಸ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕರೊನಾ ನಿಯಂತ್ರಣ ದೃಷ್ಟಿಯಿಂದ ವಿದ್ಯಾರ್ಥಿಗಳು ಸದ್ಯ ಮನೆಯಲ್ಲಿಯೇ ಇದ್ದು ನಾಲ್ಕಾರು ತಾಸು ಟಿವಿ, ಮೊಬೈಲ್ ಮುಂತಾದ ವಿದ್ಯುನ್ಮಾನ ಮಾಧ್ಯಮಗಳ ಮೂಲಕ ವಿದ್ಯಾರ್ಜನೆಯಲ್ಲಿ ತೊಡಗಿರುವುದು ಅನಿವಾರ್ಯವಾಗಿರುವುದರಿಂದ ಅವರಿಗೆ ಯೋಗ ಅವಶ್ಯವಾಗಿದೆ ಎಂದು ಹೇಳಿದರು.
ಅಮ್ಮನ ಮಡಿಲು ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿ, ವಿದ್ಯಾರ್ಥಿಗಳು ಆರೋಗ್ಯ ಶ್ರೀಮಂತಿಕೆಯನ್ನು ಹೆಚ್ಚಿಸಿಕೊಳ್ಳಲು ಯೋಗವನ್ನು ನಿತ್ಯ ಮಾಡಬೇಕು ಎಂದರು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶಿವಾನಂದ ಕೆಲೂರ ಮಾತನಾಡಿ, ಯೋಗದಿಂದ ರೋಗ ದೂರ ಎಂಬುದನ್ನು ಎಲ್ಲರೂ ಮನದಟ್ಟುಮಾಡಿಕೊಳ್ಳಬೇಕು, ಜೊತೆಗೆ ಸಂಸ್ಥೆಯ ಆನ್‌ಲೈನ್ ಯೋಗ ಕಾರ್ಯಕ್ರಮ ಸಮಯೋಚಿತ ಹಾಗೂ ಸ್ತುತ್ಯಾರ್ಹ ಎಂದು ಹೇಳಿದರು.

ಸಂಸ್ಥೆಯ ಮುಖ್ಯಸ್ಥ ಬಸವರಾಜ ಕೌಲಗಿ ಮಾತನಾಡಿ, ಯೋಗ ನಮ್ಮ ವಿದ್ಯಾಭ್ಯಾಸದ ಒಂದು ಕ್ರಮ. ಭಾರತೀಯ ಸಂಸ್ಕೃತಿಯ ತಳಹದಿಯ ಮೇಲೆ ಶಿಕ್ಷಣದ ಗುಮ್ಮಟಕಟ್ಟಬೇಕಾಗಿದೆ. ಪಾಲಕರ ಒತ್ತಾಸೆ ಮೇರೆಗೆ ವಿದ್ಯಾರ್ಥಿಗಳ ಆರೋಗ್ಯ ಗಮನದಲ್ಲಿಟ್ಟುಕೊಂಡು ಒಂದು ತಿಂಗಳ ಕಾಲ ಯೋಗ ಶಿಬಿರ ಆಯೋಜಿಸಲಾಗಿದೆ. ನಿತ್ಯ ಬೆಳಗ್ಗೆ 6-15 ರಿಂದ 7 ಗಂಟೆಯವರೆಗೆ ಯೋಗ ಶಿಬಿರ ನಡೆಯಲಿದ್ದು, ಸಾವಿರಾರು ವಿದ್ಯಾರ್ಥಿಗಳು, ಪಾಲಕರು ಏಕ ಕಾಲಕ್ಕೆ ಯೋಗ ತರಬೇತಿಯನ್ನು ದಿನಂಪ್ರತಿ ವೀಕ್ಷಣೆ ಮಾಡುವುದರೊಂದಿಗೆ ಯೋಗ ಮಾಡಲಿದ್ದಾರೆ ಎಂದರು. ವೇದಿಕೆ ಮೇಲೆ ಪ್ರೊ. ಶಿವಾನಂದ ಕಲ್ಯಾಣಿ ಉಪಸ್ಥಿತರಿದ್ದರು.
ಸುಮಾರು ಒಂದು ಗಂಟೆ ಕಾಲ ಯೋಗಾಭ್ಯಾಸ ಹೇಳಿಕೊಡಲಾಯಿತು. ನಂತರ ಶ್ರೀಗಳನ್ನು ಗೌರವಿಸಲಾಯಿತು. ಸಂಸ್ಥೆಯ ಆಡಳಿತ ವರ್ಗ, ಕಾಲೇಜಿನ ಆಡಳಿತಾಧಿಕಾರಿಗಳು, ಉಪನ್ಯಾಸಕರು, ಶಿಬ್ಬಂದಿ ವರ್ಗ, ಆಕ್ಸಫರ್ಡ್ ಶಾಲೆಯ ಪ್ರಾಚಾರ್ಯ ಜೆ. ಎಂ. ಇನಾಮದಾರ, ಆರ್.ಜಿ. ಬಿರಾದಾರ, ಡಿ.ಅರ್. ಮಮದಾಪುರ, ಶಿಕ್ಷಕರು ಉಪಸ್ಥಿತರಿದ್ದರು. ಕೆ.ಎಸ್. ಶ್ರೀಕಾಂತ ಪ್ರಾರ್ಥಿಸಿದರು. ಪ್ರೊ. ರವಿ ಕಲ್ಲೂರಮಠ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net