

ವಿಜಯಪುರ : ಕೋವಿಡ್-19 ಸಾಂಕ್ರಾಮಿಕ ರೋಗ ನಿಯಂತ್ರಣದ ಜತೆಗೆ ಡೆಂಘೆ ರೋಗ ನಿಯಂತ್ರಣಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಜೇಬುನ್ನಿಸಾಬೇಗಂ ಬೀಳಗಿ ತಿಳಿಸಿದರು.
ನಗರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಆರೋಗ್ಯ ಇಲಾಖೆ ವತಿಯಿಂದ ಗುರುವಾರ ನಡೆದ ರಾಷ್ಟ್ರೀಯ ಡೆಂಘೆ ರೋಗ ನಿಯಂತ್ರಣಾ ದಿನಾಚರಣೆ ಹಾಗೂ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಡೆಂಘೆ ರೋಗ ನಿಯಂತ್ರಣಕ್ಕೆ ಸಾರ್ವಜನಿಕರಲ್ಲಿ ತಿಳಿಹೇಳುವ ಕಾರ್ಯವನ್ನು ಈಗಾಗಲೇ ಕೈಗೊಳ್ಳಲಾಗಿದ್ದು. ಅದರ ಜತೆಗೆ ಆಶಾ ಕಾರ್ಯಕರ್ತೆಯರಿಂದ ಮನೆ-ಮನೆಗೆ ತೆರಳಿ ಲಾರ್ವಾ ಸಾಂದ್ರತೆ ಬಗ್ಗೆ ಸರ್ವೇ ಹಾಗೂ ಜನರಿಗೆ ತಿಳಿ ಹೇಳುವ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಡೆಂಘೆ ರೋಗ ಪರೀಕ್ಷಿಸಲು ಲ್ಯಾಬ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಡಿಪಿಎಚ್‌ಎಲ್ ಎನ್ನುವ ಲ್ಯಾಬ್ ಕಾರ್ಯ ನಿರ್ವಹಿಸುತ್ತಿದ್ದು, ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಜಿಲ್ಲೆಯಲ್ಲಿ ಜನವರಿ ಮಾಸದಿಂದ ಮೇ ತಿಂಗಳವರೆಗೆ ಒಟ್ಟು 310 ಜನರ ರಕ್ತದ ಮಾದರಿ ಸಂಗ್ರಹಿಸಲಾಗಿದ್ದು, ಅವುಗಳಲ್ಲಿ 102 ಜನರಿಗೆ ಡೆಂಘೆ ಪಾಸಿಟಿವ್ ದೃಢಪಟ್ಟಿದೆ. ಕಳೆದ 2019ರ ಸಾಲಿನಲ್ಲಿ ಒಟ್ಟು 271 ರಕ್ತದ ಮಾದರಿ ಸಂಗ್ರಹಿಸಲಾಗಿತ್ತು. ಅದರಲ್ಲಿ 77 ಜನರಿಗೆ ಡೆಂಘೆ ಪಾಸಿಟಿವ್ ದೃಢಪಟ್ಟಿತ್ತು. ಕಳೆದ ಸಾಲಿಗಿಂತ ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ರಕ್ತ ಮಾದರಿಯನ್ನು ಪರೀಕ್ಷಿಸಲಾಗಿದೆ ಎಂದರು.
ಜಿಲ್ಲೆಯ ಸಿಂದಗಿ ತಾಲೂಕಿನಲ್ಲಿ ಒಟ್ಟು 57 ಜನರ ರಕ್ತ ಮಾದರಿಯಲ್ಲಿ 22 ಜನರಿಗೆ ಡೆಂಘೆ ದೃಢಪಟ್ಟಿದ್ದು, ಬಸವನ ಬಾಗೇವಾಡಿಯಲ್ಲಿ 59 ಜನರ ಪೈಕಿ 15 ಜನರಿಗೆ, ಮುದ್ದೆಬಿಹಾಳ ತಾಲೂಕಿನಲ್ಲಿ 26 ಜನರ ಪೈಕಿ 12 ಜನರಿಗೆ, ಇಂಡಿ ತಾಲೂಕಿನಲ್ಲಿ 74 ಜನರ ಪೈಕಿ 23 ಜನರಿಗೆ, ವಿಜಯಪುರ ತಾಲೂಕಿನಲ್ಲಿ 94 ಜನರ ಪೈಕಿ 30 ಜನರಿಗೆ ಡೆಂಘೆ ದೃಢಪಟ್ಟಿದೆ ಎಂದು ಮಾಹಿತಿ ನೀಡಿದರು. ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ವರಿ ಗೋಲಗೇರಿ, ಜಿಲ್ಲಾ ಕೀಟಶಾಸಜ್ಞ ಡಾ.ರಿಯಾಜ್ ದೇವಳ್ಳಿ ಇತರರಿದ್ದರು.