

ವಿಜಯಪುರ: ಕುಡುಕರಿಗೆ ಕರೊನಾ ಎಫೆಕ್ಟ್ ಬಹುವಾಗಿ ತಟ್ಟಿದ್ದು ಇದೇ ಅವಕಾಶ ಬಳಸಿಕೊಂಡು ಕೆಲವರು ಕಳ್ಳಬಟ್ಟಿ ದಂಧೆಗಿಳಿದರೆ ಇನ್ನೂ ಕೆಲವರು ಹೆಚ್ಚಿನ ಬೆಲೆಗೆ ಮದ್ಯ ಮಾರಿ ರಾತ್ರೋರಾತ್ರಿ ಶ್ರೀಮಂತರಾಗುವ ಕನಸು ಕಟ್ಟಿಕೊಂಡಿದ್ದಾರೆ.
ಲಾಕ್‌ಡೌನ್ ಶುರುವಾದಾಗಿನಿಂದ ಜಿಲ್ಲೆಯಲ್ಲಿ ಮದ್ಯಕ್ಕೆ ಬೇಡಿಕೆ ಹೆಚ್ಚಿದೆ. ನಿಗದಿತ ದರಕ್ಕಿಂತ ಮೂರ‌್ನಾಲ್ಕು ಪಟ್ಟು ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡಲಾಗುತ್ತಿದೆ. ಕೆಲವೆಡೆ ಅದೂ ಸಿಗದ ಕಾರಣಕ್ಕೆ ಕುಡಕರು ಮಾನಸಿಕ ಖಿನ್ನತೆಗೊಳಗಾಗುತ್ತಿದ್ದಾರೆ. ರಾಜಕೀಯ ನಾಯಕರಿಗೆ ದುಂಬಾಲು ಬಿದ್ದು ಎಲ್ಲಾದರೂ ಸೆರೆ ಕೊಡಿಸಿಕೊಡಿ ಎಂದು ಅಂಗಲಾಚುತ್ತಿದ್ದಾರೆ.
ಜಿಲ್ಲಾದ್ಯಂತ ಕಳ್ಳಬಟ್ಟಿ ತಯಾರಿಕೆ ನಿಯಂತ್ರಣಕ್ಕೆ ಬುಧವಾರದವರೆಗೆ 283 ಕಡೆಗಳಲ್ಲಿ ದಾಳಿ ಮಾಡಲಾಗಿ 18 ಪ್ರಕರಣಗಳನ್ನು ದಾಖಲಿಸಲಾಗಿದೆ. ಲಾಕ್‌ಡೌನ್ ನಂತರ 4 ಪ್ರಕರಣಗಳನ್ನು ದಾಖಲಿಸಲಾಗಿದೆ. ಗುರುವಾರ ಒಂದೇ ಕಡೆ 60 ಲೀಟರ್ ಕಳ್ಳಭಟ್ಟಿ ವಶಕ್ಕೆ ಪಡೆಯಲಾಗಿದೆ. ಹರಿಣಶಿಕಾರಿ ಕಾಲನಿ ಬಳಿ ಗೂಡ್ಸ್ ಟೆಂಪೋದಲ್ಲಿ ತೆಗೆದುಕೊಂಡು ಹೋಗುತ್ತಿದ್ದ ಕಳ್ಳಬಟ್ಟಿಯನ್ನು ಅಬಕಾರಿ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಚಾಂದ್‌ಭಾಷಾ ಮನಿಯಾರ ಬಂಧಿತ ಆರೋಪಿಯಾಗಿದ್ದು ಡಿಸಿ ರವಿ ಶಂಕರ ನೇತೃತ್ವ ದಾಳಿ ನಡೆದಿದೆ.
ಹಿಂದಿನ ದಿನವಷ್ಟೇ ಇದೇ ಕಾಲನಿಯಲ್ಲಿ ಕಳ್ಳಬಟ್ಟಿ ಮಾರಾಟ ಮಾಡುತ್ತಿದ್ದ ಉಗಲಾಬಾಯಿ ಊರ್ಫ್ ರೇಖಾಬಾಯಿ ಭರತ ಕಾಳೆ ಎಂಬುವವರ ಮೇಲೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಿಕೋಟಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳಬಟ್ಟಿ ಅಡ್ಡೆ ಮೇಲೆ ದಾಳಿ ನಡೆದಿದ್ದು ಅಂದಾಜು 7 ಲೀಟರ್ ಕಳ್ಳಬಟ್ಟಿ ಸೆರೆ ವಶಕ್ಕೆ ಪಡೆಯಲಾಗಿದೆ. ಸೋಮಣ್ಣ ನರಳೆ, ಚಿಕ್ಕಯ್ಯ ಮಾರುತಿ ದಢಕೆ, ಮಲ್ಲು ಸೋಮಣ್ಣ ನರಳೆ, ಪಾರ್ವತಿ ಎಂಬುವರ ಮೇಲೆ ಪ್ರಕರಣ ದಾಖಲಾಗಿದೆ. ಹೋರ್ತಿ ಠಾಣೆಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ಸಾರಾಯಿ ಮಾರುತ್ತಿದ್ದ ದಾವಲಸಾಬ ರಹಿಮಾನಸಾಬ ಮುಲ್ಲಾ ಎಂಬುವರ ಮೇಲೆ ಪ್ರಕರಣ ದಾಖಲಾಗಿದೆ.
ತಾಂಡಾಗಳಲ್ಲೀಗ ಕಳ್ಳಬಟ್ಟಿ ದಂಧೆ ಭರ್ಜರಿಯಾಗಿದ್ದು ದಾಳಿ ನಡೆಸಲು ಅಧಿಕಾರಿಗಳು ಸಹ ಹಿಂದೇಟು ಹಾಕುವಂತಾಗಿದೆ. ಕಾರಣ ಸದ್ಯ ತಾಂಡಾದಲ್ಲಿರುವವರು ಮಹಾರಾಷ್ಟ್ರ ಹಾಗೂ ಗೋವಾದಿಂದ ಬಂದ ಗುಳೆಕಾರರಾಗಿದ್ದಾರೆ. ಯಾರಿಗೆ ಎಲ್ಲಿ ಕರೊನಾ ಸೋಂಕಿರುತ್ತೋ ಯಾರಿಗೊತ್ತು ಎಂಬುದು ಕೆಳ ಹಂತದ ಸಿಬ್ಬಂದಿಯ ಆತಂಕ.
ಇದನ್ನೇ ಬಂಡವಾಳ ಮಾಡಿಕೊಂಡ ಕೆಲವರು ಮದ್ಯದ ಬೇಡಿಕೆ ಪೂರೈಸಲು ಕಳ್ಳಬಟ್ಟಿ ದಂಧೆಗಿಳಿದಿದ್ದಾರೆ. ಜನ ಅನಿವಾರ್ಯವಾಗಿ ಕಳ್ಳಬಟ್ಟಿಗೆ ಮೊರೆ ಹೋಗುತ್ತಿದ್ದಾರೆ. ಜತೆಗೆ ಗಡಿಭಾಗದಲ್ಲಿ ಸೇಂದಿ ಮತ್ತು ಭಾಂಗ್ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಒಟ್ಟಿನಲ್ಲಿ ಕುಡುಕರ ಕಷ್ಟ ಕರೊನಾಗಿಂತ ಕಡೆಯಾಗಿದ್ದು ಸೆರೆ ಸಿಕ್ಕರೆ ಸಾಕು ಹಕ್ಕಿಯಂತೆ ಹಾರುತ್ತಿರುವುದು ಕಂಡು ಬಂದಿದೆ.
ಅಲ್ಲಲ್ಲಿ ಕಳ್ಳಬಟ್ಟಿ ಮಾರುತ್ತಿರುವುದು ಕಂಡು ಬಂದಿದೆ. ಖಚಿತ ಮಾಹಿತಿ ಆಧರಿಸಿ ಈಗಾಗಲೇ ದಾಳಿ ನಡೆಸಲಾಗಿದೆ. ಸಾರಾಯಿ ತ್ಯಜಿಸಲು ಲಾಕ್‌ಡೌನ್ ಒಳ್ಳೆಯ ಅವಕಾಶ. ಜನ ಕಳ್ಳಬಟ್ಟಿಯಿಂದ ದೂರ ಇರಬೇಕು. ಎಲ್ಲಾದರೂ ಕಳ್ಳಬಟ್ಟಿ ಮಾರಾಟ ಮಾಡುತ್ತಿರುವುದು, ಅಕ್ರಮವಾಗಿ ಸಾರಾಯಿ ಮಾರುತ್ತಿರುವುದು ಕಂಡು ಬಂದರೆ ಕೂಡಲೇ ಮಾಹಿತಿ ನೀಡಬೇಕು.
ಎ. ರವಿಶಂಖರ, ಅಬಕಾರಿ ಡಿಸಿ
*